ಋತುರಾಜ್ ಗಾಯಕವಾಡ್ ಹಾಗೂ ವಿರಾಟ್ ಕೊಹ್ಲಿ
ಚಿತ್ರ: @iamflickX18
ರಾಯಪುರ: ಇಲ್ಲಿನ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡದ ಯುವ ಬ್ಯಾಟರ್ ಋತುರಾಜ್ ಗಾಯಕವಾಡ್ ತಮ್ಮ ಚೊಚ್ಚಲ ಶತಕ ಸಿಡಿಸಿ ಮಿಂಚಿದ್ದಾರೆ.
ಆರಂಭದಿಂದಲೂ ಸ್ಫೋಟಕ ಬ್ಯಾಟಿಂಗ್ ನಡೆಸಿದ ಋತುರಾಜ್ 12 ಬೌಂಡರಿ ಹಾಗೂ 2 ಅಮೋಘ ಸಿಕ್ಸರ್‌ಗಳ ನೆರವಿನಿಂದ ತಮ್ಮ ಚೊಚ್ಚಲ ಶತಕ ದಾಖಲಿಸಿದರು. ಮಾತ್ರವಲ್ಲ ಈ ಶತಕದ ಮೂಲಕ ವಿಶೇಷ ದಾಖಲೆ ಮಾಡಿದ್ದಾರೆ.
ಎರಡನೇ ವೇಗದ ಶತಕ
ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಭಾರತ ಬ್ಯಾಟರ್ ಸಿಡಿಸಿದ ಎರಡನೇ ಅತೀ ವೇಗದ ಶತಕ ಕೂಡ ಇದಾಗಿದೆ. ಗಾಯಕವಾಡ್ ಅವರು, ಶತಕ ಪೂರ್ಣಗೊಳಿಸಲು 77 ಎಸೆತಗಳನ್ನು ತೆಗೆದುಕೊಂಡರು. 2011ರಲ್ಲಿ 68 ಎಸೆತಗಳಿಗೆ ಶತಕ ಸಿಡಿಸಿರುವ ಯೂಸುಫ್ ಪಠಾಣ್ ಹರಿಣಗಳ ವಿರುದ್ಧ ವೇಗವಾಗಿ ಶತಕ ಸಿಡಿಸಿದ ಭಾರತ ಆಟಗಾರ ಎಂಬ ದಾಖಲೆ ಹೊಂದಿದ್ದಾರೆ.
ಇದರ ಜೊತೆಗೆ ಏಕದಿನ ಹಾಗೂ ಟಿ20 ಕ್ರಿಕೆಟ್ ಎರಡೂ ಮಾದರಿಲಯಲ್ಲಿ ಶತಕ ಸಿಡಿಸಿದ ಭಾರತದ 7ನೇ ಆಟಗಾರ ಎನಿಸಿಕೊಂಡರು. ಇದಕ್ಕೂ ಮೊದಲು ಸುರೇಶ್ ರೈನಾ, ರೋಹಿತ್ ಶರ್ಮಾ, ಕೆ.ಎಲ್ ರಾಹುಲ್, ವಿರಾಟ್ ಕೊಹ್ಲಿ, ಶುಭಮನ್ ಗಿಲ್, ಸಂಜು ಸ್ಯಾಮ್ಸನ್ ಎರಡೂ ಮಾದರಿಯಲ್ಲಿ ಶತಕ ಸಿಡಿಸಿದ್ದರು.
ಇಂದಿನ ಶತಕದ ಮೂಲಕ ಗಾಯಗವಾಡ್ ದಿಗ್ಗಜರ ಸಾಲಿಗೆ ಸೇರಿಕೊಂಡರು. ಅಂತಿಮವಾಗಿ ಋತುರಾಜ್ ಗಾಯಕವಾಡ್ ಅವರು 83 ಎಸೆತಗಳಲ್ಲಿ 105 ರನ್ ಸಿಡಿಸಿ ಮಾರ್ಕೊ ಜಾನ್ಸನ್ ಅವರಿಗೆ ವಿಕೆಟ್ ಒಪ್ಪಿಸಿ ಹೊರನಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.