ನವದೆಹಲಿ:ಟೀಂ ಇಂಡಿಯಾದ ಸಹಿಯುಳ್ಳ ಕ್ರಿಕೆಟ್ ಬ್ಯಾಟ್ ಅನ್ನು ಮಾಲ್ಡೀವ್ಸ್ ಅಧ್ಯಕ್ಷರಿಗೆ ಉಡುಗೊರೆಯಾಗಿ ನೀಡಿದನರೇಂದ್ರ ಮೋದಿ ಅವರನ್ನು ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಅವರು ಹಾಡಿ ಹೊಗಳಿದ್ದಾರೆ.
ವಿಶ್ವಕಪ್ ಸರಣಿ ನಡೆಯುತ್ತಿರುವ ಈ ಹೊತ್ತಿನಲ್ಲೇ ನಡೆದಿರುವ ಈ ಬೆಳವಣಿಗೆಯೂ ಮೋದಿ ಅವರ ಕ್ರಿಕೆಟ್ ರಾಜತಾಂತ್ರಿಕತೆಗೆ ಉತ್ತಮ ನಿದರ್ಶನ ಎಂದಿದ್ದಾರೆ ಸಚಿನ್.
‘ನನ್ನ ಸ್ನೇಹಿತ, ಮಾಲ್ಡೀವ್ಸ್ ಅಧ್ಯಕ್ಷ ಇಬ್ರಾಹಿಮ್ ಮೊಹಮದ್ ಸೋಲಿಹ್ ಕ್ರಿಕೆಟ್‌ನ ಅಭಿಮಾನಿ. ಆದ್ದರಿಂದ ನಾನು ಟೀಂ ಇಂಡಿಯಾದ ಸಹಿ ಇರುವ ಬ್ಯಾಟ್ ಅನ್ನು ಅವರಿಗೆ ಉಡುಗೊರೆಯಾಗಿ ನೀಡಿದೆ,’ ಎಂದು ಮೋದಿ ಅವರು ಜೂನ್ 8ರಂದು ಫೋಟೊ ಸಹಿತ ಟ್ವೀಟ್ ಮಾಡಿದ್ದರು.
ಈ ಟ್ವೀಟ್ ಅನ್ನು ಉಲ್ಲೇಖಿಸಿ ಮಂಗಳವಾರ ರಾತ್ರಿ ಟ್ವೀಟ್ ಮಾಡಿರುವ ಸಚಿನ್ ತೆಂಡೂಲ್ಕರ್, ‘ಕ್ರಿಕೆಟ್ ಅನ್ನು ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು ಮೋದಿಜಿ. ಕ್ರಿಕೆಟ್ ರಾಜತಾಂತ್ರಿಕತೆಗೆ ಇದು ಉತ್ತಮ ನಿದರ್ಶನ,’ ಎಂದು ಅವರು ಬರೆದುಕೊಂಡಿದ್ದಾರೆ. ಅಲ್ಲದೆ, ಕ್ರಿಕೆಟ್ ಭೂಪಟದಲ್ಲಿ ಶೀಘ್ರವೇ ಮಾಲ್ಡೀವ್ಸ್ ಅನ್ನೂ ನೋಡಲು ಬಯಸುತ್ತೇನೆ,’ ಎಂದು ಅವರು ಆಶಿಸಿದ್ದಾರೆ.
ಮಾಲ್ಡೀವ್ಸ್‌ನಲ್ಲಿ ಕ್ರಿಕೆಟ್ ಅನ್ನು ಪ್ರೋತ್ಸಾಹಿಸಲು ಭಾರತ ನೆರವಾಗುವುದಾಗಿ ಮೋದಿ ಅವರು ಅಲ್ಲಿನ ಅಧ್ಯಕ್ಷ ಸೋಲಿಹ್ ಅವರಿಗೆ ವಚನ ನೀಡಿದ್ದಾರೆ.
ಸದ್ಯ ಭಾರತವು ಮಾಲ್ಡೀವ್ಸ್‌ನಲ್ಲಿ ಕ್ರಿಕೆಟ್ ತರಬೇತಿ ನೀಡುತ್ತಿದೆ. ಅಲ್ಲದೆ, ಅಲ್ಲಿ ಕ್ರೀಡಾಂಗಣಗಳನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತಿದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.