ADVERTISEMENT

ವಿಂಡೀಸ್ ಕ್ರಿಕೆಟಿಗನ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ: ಕೋಚ್ ಸಾಮಿ ಹೇಳಿದ್ದೇನು?

ಪಿಟಿಐ
Published 3 ಜುಲೈ 2025, 4:19 IST
Last Updated 3 ಜುಲೈ 2025, 4:19 IST
<div class="paragraphs"><p>ಡರೇನ್‌ ಸಾಮಿ</p></div>

ಡರೇನ್‌ ಸಾಮಿ

   

ಚಿತ್ರ: X / @darensammy88

ಸೇಂಟ್‌ ಜಾರ್ಜ್‌ (ಗ್ರೆನೆಡಾ): ವೆಸ್ಟ್‌ ಇಂಡೀಸ್‌ ಕ್ರಿಕೆಟಿಗನ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪಗಳು ಕೇಳಿ ಬಂದಿದ್ದು, ಸಂತ್ರಸ್ತರಿಗೆ ನ್ಯಾಯ ಸಿಗಬೇಕು. ಆದರೆ, ಪ್ರಕ್ರಿಯೆಯು ಸರಿಯಾದ ರೀತಿಯಲ್ಲಿ ನಡೆಯಬೇಕು ಎಂದು ತಂಡದ ಮುಖ್ಯ ಕೋಚ್‌ ಡರೇನ್‌ ಸಾಮಿ ಒತ್ತಾಯಿಸಿದ್ದಾರೆ.

ADVERTISEMENT

ಕ್ರಿಕೆಟಿಗನ ವಿರುದ್ಧ 11 ಮಹಿಳೆಯರು ದೌರ್ಜನ್ಯದ ಆರೋಪ ಹೊರಿಸಿದ್ದಾರೆ. ಅವುಗಳಲ್ಲಿ ಕೆಲವು 2023ಕ್ಕೂ ಹಿಂದಿನ ಪ್ರಕರಣಗಳಾಗಿವೆ ಎಂದು ಗಯಾನ ಮೂಲದ ಸುದ್ದಿಸಂಸ್ಥೆ 'ಕೈಟೀರ್‌' ವರದಿ ಮಾಡಿದೆ. ಆದರೆ, ಈ ಸಂಬಂಧ ಇದುವರೆಗೆ ಔಪಚಾರಿಕವಾಗಿ ಯಾವುದೇ ಪ್ರಕರಣಗಳು ದಾಖಲಾಗಿಲ್ಲ.

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ ಸರಣಿಯ ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿರುವ ಸಾಮಿ, ಕಾನೂನನ್ನು ಎಲ್ಲರೂ ಗೌರವಿಸಬೇಕಿದೆ ಎಂದು ಹೇಳಿದ್ದಾರೆ.

'ಮಾಧ್ಯಮಗಳಲ್ಲಿ ಏನೆಲ್ಲ ಪ್ರಸಾರವಾಗುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ತಂಡದ ಆಟಗಾರರಿಗೆ ನಾನು ಆಪ್ತವಾಗಿದ್ದೇನೆ. ಅವರೊಂದಿಗೆ ಮಾತುಕತೆ ನಡೆಸಿದ್ದೇನೆ. ನ್ಯಾಯದ ಮೇಲೆ ನಂಬಿಕೆ ಹೊಂದಿದ್ದೇವೆ ಎಂಬುದನ್ನಷ್ಟೇ ನಾನು ಹೇಳಲು ಸಾಧ್ಯ. ನಮ್ಮ ಬಳಗಕ್ಕೆ ನ್ಯಾಯ ಲಭಿಸಲಿದೆ ಎಂಬ ನಂಬಿಕೆಯಿದೆ' ಎಂದಿದ್ದಾರೆ.

'ಆರೋಪಗಳಿಗೆ ಸಂಬಂಧಿಸಿದಂತೆ ನಡೆಯುವ ಪ್ರಕ್ರಿಯೆಯು ನ್ಯಾಯಯುತ ಹಾಗೂ ಸರಿಯಾದ ರೀತಿಯಲ್ಲಿರಬೇಕು. ಅದನ್ನು ಖಾತ್ರಿಪಡಿಸಿಕೊಳ್ಳಲು ನಮ್ಮಿಂದ ಸಾಧ್ಯವಿರುವ ಎಲ್ಲ ಸಹಕಾರ ನೀಡಲು ಸಿದ್ಧರಿದ್ದೇವೆ' ಎಂದು ಸ್ಪಷ್ಟಪಡಿಸಿದ್ದಾರೆ.

ನಿಗದಿತ ಓವರ್‌ಗಳ ಮಾದರಿಯಲ್ಲಿ ವೆಸ್ಟ್‌ ಇಂಡೀಸ್‌ ತಂಡದ ಕೋಚ್‌ ಆಗಿ 2023ರ ಮೇನಲ್ಲಿ ನೇಮಕವಾಗಿದ್ದ ಸಾಮಿ, ಇದೇ ವರ್ಷ ಏಪ್ರಿಲ್‌ನಿಂದ ಟೆಸ್ಟ್‌ ತಂಡಕ್ಕೂ ಮಾರ್ಗದರ್ಶನ ಮಾಡುತ್ತಿದ್ದಾರೆ.

ನಾವು ಯಾವುದೇ ತೀರ್ಮಾನಗಳನ್ನು ಕೈಗೊಳ್ಳುವ ಮುನ್ನ, ಕಾನೂನು ಜಾರಿಗೆ ಮುಕ್ತ ಅವಕಾಶ ನೀಡುವುದು ಅತ್ಯಗತ್ಯ ಎಂದು ಅವರು ಪ್ರತಿಪಾದಿಸಿದ್ದಾರೆ.

'ಈಗ ಕೇಳಿಬಂದಿರುವವು ಆರೋಪಗಳಷ್ಟೇ. ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ನಮಗೆ ತಿಳಿದಿದೆ. ಎಲ್ಲ ಪ್ರಕ್ರಿಯೆಗಳು ಮುಗಿಯುವವರೆಗೆ ಕಾಯಬೇಕಿದೆ. ನಾನು ನ್ಯಾಯಾಧೀಶನಲ್ಲ. ಫಿರ್ಯಾದಿಯೂ ಅಲ್ಲ. ಸದ್ಯ ಹೊರಗೆ ಬಂದಿರುವ ವಿಚಾರಗಳಷ್ಟೇ ನಮ್ಮ ಬಳಿ ಇರುವುದು. ಏನೇ ಆದರೂ ಅಂತಿಮವಾಗಿ ನ್ಯಾಯ ಸಿಕ್ಕೇ ಸಿಗುತ್ತದೆ ಎಂಬ ಖಾತ್ರಿ ನಮಗಿದೆ' ಎಂದು ಹೇಳಿದ್ದಾರೆ.

ವೆಸ್ಟ್ ಇಂಡೀಸ್ ಕ್ರಿಕೆಟ್‌ ಮಂಡಳಿಯು ಆಂತರಿಕ ತನಿಖೆ ಆರಂಭಿಸಲಿದೆಯೇ ಎಂಬ ಪ್ರಶ್ನೆಗೆ, 'ಪ್ರಾಮಾಣಿಕವಾಗಿ ಹೇಳುವುದಾದರೆ ಇದಕ್ಕೆ ನಾನು ಉತ್ತರಿಸಲಾರೆ' ಎಂದಿದ್ದಾರೆ.

ಇಂದು ಎರಡನೇ ಪಂದ್ಯ
ವೆಸ್ಟ್‌ ಇಂಡೀಸ್‌ ಪ್ರವಾಸ ಕೈಗೊಂಡಿರುವ ಆಸ್ಟ್ರೇಲಿಯಾ, ಮೂರು ಪಂದ್ಯಗಳ ಸರಣಿಯಲ್ಲಿ 1–0 ಅಂತರದ ಮುನ್ನಡೆ ಸಾಧಿಸಿದೆ. ಗ್ರೆನೆಡಾದ ಸೇಂಟ್‌ ಜಾರ್ಜ್‌ನಲ್ಲಿ ಇಂದು (ಗುರುವಾರ, ಜುಲೈ 3) ಎರಡನೇ ಪಂದ್ಯವು ಆರಂಭವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.