ADVERTISEMENT

ಶ್ರೀಲಂಕಾ ಕಳಪೆ ಪ್ರದರ್ಶನ: ಕೋಚ್‌ ಸ್ಥಾನದಿಂದ ಕೆಳಗಿಳಿಯಲು ಜಯಸೂರ್ಯ ನಿರ್ಧಾರ

ಪಿಟಿಐ
Published 1 ಮಾರ್ಚ್ 2026, 16:23 IST
Last Updated 1 ಮಾರ್ಚ್ 2026, 16:23 IST
ಸನತ್‌ ಜಯಸೂರ್ಯ
ಸನತ್‌ ಜಯಸೂರ್ಯ   

ಕೊಲಂಬೊ: ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಶ್ರೀಲಂಕಾ ತಂಡದ ಕಳಪೆ ಪ್ರದರ್ಶನದಿಂದಾಗಿ ಮುಖ್ಯ ಕೋಚ್‌ ಸ್ಥಾನದಿಂದ ಕೆಳಗಿಳಿಯಲು ಸನತ್‌ ಜಯಸೂರ್ಯ ನಿರ್ಧರಿಸಿದ್ದಾರೆ.

‘ಜೂನ್‌ ಅಂತ್ಯಕ್ಕೆ ನನ್ನ ಒಪ್ಪಂದ ಅಂತ್ಯಗೊಳ್ಳಲಿದೆ. ಆದರೆ, ಅದಕ್ಕೂ ಮೊದಲೇ ಕೋಚ್‌ ಸ್ಥಾನದಿಂದ ಕೆಳಗಿಳಿಯಲು ನಿರ್ಧರಿಸಿದ್ದೇನೆ. ಈ ಬಗ್ಗೆ ಶ್ರೀಲಂಕಾ ಕ್ರಿಕೆಟ್‌ ಮಂಡಳಿಯೊಂದಿಗೆ ಚರ್ಚಿಸಲಿದ್ದೇನೆ’ ಎಂದು ಜಯಸೂರ್ಯ ಅವರು ಪಾಕಿಸ್ತಾನ ವಿರುದ್ಧ ಶನಿವಾರ ನಡೆದ ಪಂದ್ಯದ ನಂತರ ಸುದ್ದಿಗಾರರಿಗೆ ತಿಳಿಸಿದರು.

‘ಟೂರ್ನಿಯಲ್ಲಿ ನಮ್ಮ ತಂಡವು ಸ್ಥಿರ ಪ್ರದರ್ಶನ ನೀಡಬೇಕಿತ್ತು. ಆದರೆ, ತಂಡವು ಕಳಪೆ ಪ್ರದರ್ಶನ ನೀಡಿದ್ದು, ದೇಶದ ಕ್ರಿಕೆಟ್‌ ಅಭಿಮಾನಿಗಳಲ್ಲಿ ಕ್ಷಮೆ ಕೋರುತ್ತೇನೆ. ನನ್ನನ್ನು ಕ್ಷಮಿಸಿ’ ಎಂದು ಜಯಸೂರ್ಯ ಅವರು ಹೇಳಿದರು.

ADVERTISEMENT

‘ವನಿಂದು ಹಸರಂಗ, ಮತೀಶ ಪಥಿರಾಣ ಹಾಗೂ ಕುಸಾಲ್‌ ಮೆಂಡಿಸ್ ಅವರು ಗಾಯಗೊಂಡಿದ್ದು ತಂಡಕ್ಕೆ ಪೆಟ್ಟು ನೀಡಿತು. ಬದಲಿ ಆಟಗಾರರು ಅಗತ್ಯ ಕಾಣಿಕೆ ನೀಡುವಲ್ಲಿ ವಿಫಲರಾದರು. ಹಸರಂಗ ವೈಯಕ್ತಿಕವಾಗಿ ನನ್ನ ಫೇವರಿಟ್‌ ಆಟಗಾರನಾಗಿದ್ದರು. ಅಂತಹ ಆಟಗಾರರಿಗೆ ಬದಲಿ ಆಟಗಾರರು ಸಿಗುವುದು ಕಷ್ಟ’ ಎಂದು ಜಯಸೂರ್ಯ ಅಭಿಪ್ರಾಯಪಟ್ಟರು.

ಗುಂಪು ಹಂತದಲ್ಲಿ ಆಸ್ಟ್ರೇಲಿಯಾ, ಒಮಾನ್‌ ಹಾಗೂ ಐರ್ಲೆಂಡ್‌ ವಿರುದ್ಧ ಗೆಲುವು ಸಾಧಿಸಿದ್ದ ಲಂಕಾ ತಂಡವು ‘ಸೂಪರ್‌ 8’ ಹಂತದ ಎಲ್ಲ ಮೂರು ಪಂದ್ಯಗಳಲ್ಲಿ ಸೋತಿತ್ತು.

ಜಯಸೂರ್ಯ ಮಾರ್ಗದರ್ಶನದಲ್ಲಿ ಶ್ರೀಲಂಕಾ ತಂಡವು  ಭಾರತದ ಎದುರು 27 ವರ್ಷಗಳ ನಂತರ ಏಕದಿನ ಸರಣಿ ಜಯಿಸಿತ್ತು. ಅದರ ನಂತರ ಇಂಗ್ಲೆಂಡ್ ತಂಡವನ್ನೂ ಸೋಲಿಸಿತ್ತು. ತವರಿನಲ್ಲಿ ನಡೆದಿದ್ದ ಟೆಸ್ಟ್ ಸರಣಿಯಲ್ಲಿ ಶ್ರೀಲಂಕಾ ಪಡೆಯು ನ್ಯೂಜಿಲೆಂಡ್ ವಿರುದ್ಧ 2–0ಯಿಂದ ಗೆಲುವು ಸಾಧಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.