ADVERTISEMENT

ಐಸಿಸಿ ಮುಖ್ಯಸ್ಥ ಸ್ಥಾನಕ್ಕೆ ಗಂಗೂಲಿ ಸೂಕ್ತ ವ್ಯಕ್ತಿ ಎಂದ ಸಂಗಕ್ಕಾರ

ಪಿಟಿಐ
Published 26 ಜುಲೈ 2020, 9:35 IST
Last Updated 26 ಜುಲೈ 2020, 9:35 IST
ಕುಮಾರ ಸಂಗಕ್ಕಾರ–ಎಎಫ್‌ಪಿ ಚಿತ್ರ
ಕುಮಾರ ಸಂಗಕ್ಕಾರ–ಎಎಫ್‌ಪಿ ಚಿತ್ರ   

ನವದೆಹಲಿ: ’ಚುರುಕಿನ ಮನಸ್ಥಿತಿ ಹಾಗೂಆಡಳಿತಗಾರನಾಗಿ ಸಾಕಷ್ಟು ಅನುಭವವುಳ್ಳ ಸೌರವ್ ಗಂಗೂಲಿ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ನ (ಐಸಿಸಿ) ಮುಖ್ಯಸ್ಥ ಸ್ಥಾನಕ್ಕೆ ಸೂಕ್ತ ವ್ಯಕ್ತಿ‘ ಎಂದು ಶ್ರೀಲಂಕಾ ಕ್ರಿಕೆಟಿಗ ಕುಮಾರ್‌ ಸಂಗಕ್ಕಾರ ಅಭಿಪ್ರಾಯಪಟ್ಟಿದ್ದಾರೆ.

’ನಾನು ಗಂಗೂಲಿ ಅವರ ದೊಡ್ಡ ಅಭಿಮಾನಿ. ಬಿಸಿಸಿಐ ಅಧ್ಯಕ್ಷರಾಗಿರುವ ಸೌರವ್‌, ವಿಶಾಲ ಮನೋಭಾವ ಹೊಂದಿದ್ದು, ಐಸಿಸಿ ಮುಖ್ಯಸ್ಥನ ಹುದ್ದೆಯನ್ನು ಪಕ್ಷಪಾತವಿಲ್ಲದೆ ನಿರ್ವಹಿಸಬಲ್ಲರು‘ ಎಂದು ಮೆರಿಲ್‌ಬೋನ್‌ ಕ್ರಿಕೆಟ್‌ ಕ್ಲಬ್‌ (ಎಂಸಿಸಿ) ಅಧ್ಯಕ್ಷರಾಗಿರುವ ಸಂಗಕ್ಕಾರ ’ಇಂಡಿಯಾ ಟುಡೆ‘ಗೆ ತಿಳಿಸಿದ್ದಾರೆ.

’ಕ್ರಿಕೆಟ್‌ ಬಗ್ಗೆ ಗಂಗೂಲಿ ಅವರಿಗೆ ಅಪಾರ ಒಲವು ಇದೆ. ಐಸಿಸಿಯಂತಹ ಮಹತ್ವದ ಹುದ್ದೆಯಲ್ಲಿರುವ ಸಂದರ್ಭದಲ್ಲಿ, ತಾನು ಬಿಸಿಸಿಐ ಅಥವಾ ಇನ್ನಾವುದೇ ಕ್ರಿಕೆಟ್‌ ಮಂಡಳಿಯ ಅಧ್ಯಕ್ಷ ಎಂಬ ಕಾರಣಕ್ಕೆಈ ಮನೋಭಾವವು ಬದಲಾಗಬಾರದು‘ ಎಂದು ಸಂಗಕ್ಕಾರ ನುಡಿದರು.

ADVERTISEMENT

’ಕ್ರಿಕೆಟ್‌ ಆಟಗಾರರ ಮಧ್ಯೆ ಸಂಬಂಧಗಳನ್ನು ಬೆಸೆಯುವ ಸಾಮರ್ಥ್ಯ ಗಂಗೂಲಿ ಅವರಲ್ಲಿದೆ. ಬಿಸಿಸಿಐ ಅಧ್ಯಕ್ಷರಾಗುವ ಮುನ್ನವೇ ಅವರಲ್ಲಿ ಈ ಗುಣವನ್ನು ನಾನು ಕಂಡಿದ್ದೆ. ಐಸಿಸಿಯ ಮಹತ್ವದ ಹುದ್ದೆಗೆ ಇಂತಹ ಗುಣ ಅತ್ಯಗತ್ಯ‘ ಎಂದೂ ಶ್ರೀಲಂಕಾ ಕ್ರಿಕೆಟ್‌ ತಂಡದ ನಾಯಕರಾಗಿದ್ದ ಸಂಗಕ್ಕಾರ ಹೇಳಿದರು.

ಐಸಿಸಿ ಮುಖ್ಯಸ್ಥರಾಗಿದ್ದ ಶಶಾಂಕ್‌ ಮನೋಹರ್‌ ಈ ತಿಂಗಳ ಆರಂಭದಲ್ಲಿ ಹುದ್ದೆ ತೊರೆದಿದ್ದರು. ಮುಂದಿನ ಮುಖ್ಯಸ್ಥರ ಚುನಾವಣೆ ನಡೆಯುವವರೆಗೂ ಉಪಮುಖ್ಯಸ್ಥರಾಗಿದ್ದ ಇಮ್ರಾನ್‌ ಖ್ವಾಜಾ ಹಂಗಾಮಿ ಮುಖ್ಯಸ್ಥನ ಸ್ಥಾನದಲ್ಲಿದ್ದಾರೆ.

ಐಸಿಸಿ ಮುಖ್ಯಸ್ಥನ ಹುದ್ದೆಗೆ ಗಂಗೂಲಿ ಅವರನ್ನು ಸಂಗಕ್ಕಾರ ಮಾತ್ರವಲ್ಲದೆ, ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಮಂಡಳಿಯ ನಿರ್ದೇಶಕ ಗ್ರೇಮ್‌ ಸ್ಮಿತ್‌ ಕೂಡ ಬೆಂಬಲಿಸಿದ್ದರು.

ಈ ಕುರಿತಂತೆ ಇತ್ತೀಚೆಗೆ ಪ್ರತಿಕ್ರಿಯಿಸಿದ್ದ ಗಂಗೂಲಿ, ಐಸಿಸಿ ಮುಖ್ಯಸ್ಥ ಸ್ಥಾನಕ್ಕೆ ಸ್ಪರ್ಧಿಸಲು ಆತುರವಿಲ್ಲ ಎಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.