ಸಂಜು ಸ್ಯಾಮ್ಸನ್
(ಪಿಟಿಐ ಚಿತ್ರ)
ನವದೆಹಲಿ: ಜೋಫ್ರಾ ಆರ್ಚರ್ ಬೌಲಿಂಗ್ ವೇಳೆ ಭಾರತ ತಂಡದ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಅವರ ತೋರು ಬೆರಳಿಗೆ ಚೆಂಡು ತಾಗಿ ಮೂಳೆ ಮುರಿದಿದೆ. ಅವರು ಐದರಿದ ಆರು ವಾರ ಕ್ರಿಕೆಟ್‌ನಿಂದ ದೂರವಿರಬೇಕಾಗಿದೆ.
ಹೀಗಾಗಿ ಅವರು ಮುಂಬರುವ ರಣಜಿ ಟ್ರೋಫಿ ಕ್ವಾರ್ಟರ್‌ಫೈನಲ್ ಪಂದ್ಯ ಆಡುವ ಕೇರಳ ತಂಡಕ್ಕೆ (ಜಮ್ಮು ಮತ್ತು ಕಾಶ್ಮೀರ ವಿರುದ್ಧ) ಲಭ್ಯರಿರುವುದಿಲ್ಲ. ಅವರು ಸದ್ಯ ತವರು ತಿರುವನಂತಪುರಕ್ಕೆ ಮರಳಿದ್ದಾರೆ. ಅವರು ಎನ್‌ಸಿಎನಲ್ಲಿ ಪುನಶ್ಚೇತನದಲ್ಲಿ ಭಾಗಿಯಾದ ನಂತರ ತರಬೇತಿಗೆ ಮರಳುವ ನಿರೀಕ್ಷೆಯಿದೆ. ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳುವ ಮೊದಲು ಎನ್‌ಸಿಎ ಹಸಿರು ನಿಶಾನೆ ತೋರಬೇಕಾಗುತ್ತದೆ.
‘ಸಂಜು ಸ್ಯಾಮ್ಸನ್ ಅವರ ಬಲಗೈ ತೋರು ಬೆರಳಿನ ಮೂಳೆ ಮುರಿದಿದೆ. ಅವರು ನೆಟ್ಸ್‌ಗೆ ಮರಳಬೇಕಾದರೆ ಐದರಿಂದ ಆರು ವಾರ ಬೇಕಾಗಲಿದೆ. ಹೀಗಾಗಿ ಪುಣೆಯಲ್ಲಿ ಅವರು ಕೇರಳ ತಂಡಕ್ಕೆ (ಜಮ್ಮು–ಕಾಶ್ಮೀರ ವಿರುದ್ಧ) ಆಡುವ ಅವಕಾಶವಿಲ್ಲ’ ಎಂದು ಈ ಬೆಳವಣಿಗೆಯನ್ನು ಬಲ್ಲ ಬಿಸಿಸಿಐ ಮೂಲವೊಂದು ಪಿಟಿಐಗೆ ತಿಳಿಸಿದೆ.
ಆದರೆ ಅವರು ಐಪಿಎಲ್ ವೇಳೆ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಪುನರಾಗಮನ ಮಾಡುವ ಸಾಧ್ಯತೆ ಹೆಚ್ಚು ಇದೆ. ಇಂಗ್ಲೆಂಡ್ ವಿರುದ್ಧ ಟಿ20 ಸರಣಿಯಲ್ಲಿ ಸಂಜು ಅವರು ಪರದಾಡಿದ್ದರು. ಐದು ಪಂದ್ಯಗಳಲ್ಲಿ ಅವರು ಗಳಿಸಿದ್ದು 51 ರನ್ ಮಾತ್ರ. ಕೋಲ್ಕತ್ತದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಗಳಿಸಿದ 26 ಇದರಲ್ಲಿ ಅತ್ಯಧಿಕ. ಅಂತಿಮ ಪಂದ್ಯದಲ್ಲಿ ಆರ್ಚರ್ ಅವರ ಶರವೇಗದ ಎಸೆತದಲ್ಲಿ ಬೆರಳಿಗೆ ಗಾಯವಾಗಿತ್ತು.
ವಿಜಯ್ ಹಜಾರೆ ಟ್ರೋಫಿಯಲ್ಲಿ ಕೇರಳಕ್ಕೆ ಒಂದೂ ಪಂದ್ಯ ಆಡಿರದ ಕಾರಣ ಅವರನ್ನು ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಆಯ್ಕೆ ಮಾಡಿರಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.