ADVERTISEMENT

ಚೆನ್ಣೈ ತಂಡಕ್ಕೆ ಟ್ರೋಫಿ ಕಾಣಿಕೆ ನೀಡುವುದೇ ನನ್ನ ಗುರಿ: ಸರ್ಫರಾಜ್ ಖಾನ್

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2025, 15:21 IST
Last Updated 17 ಡಿಸೆಂಬರ್ 2025, 15:21 IST
ಸರ್ಫರಾಜ್ ಖಾನ್ 
ಸರ್ಫರಾಜ್ ಖಾನ್    

ನವದೆಹಲಿ: ಬ್ಯಾಟರ್ ಸರ್ಫರಾಜ್ ಖಾನ್ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. 

ಅಬುಧಾಬಿಯಲ್ಲಿ ಮಂಗಳವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಮಿನಿ ಹರಾಜು ಪ್ರಕ್ರಿಯೆಯಲ್ಲಿ ಮುಂಬೈನ ಸರ್ಫರಾಜ್ ಅವರನ್ನು ಚೆನ್ನೈ ತಂಡವು  ₹ 75 ಲಕ್ಷಕ್ಕೆ ಖರೀದಿಸಿತ್ತು. ಇದೇ ದಿನ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ ಪಂದ್ಯದಲ್ಲಿ ಸರ್ಫರಾಜ್ ಅವರು 22 ಎಎತಗಳಲ್ಲಿ 73 ರನ್‌ ಗಳಿಸಿದ್ದರು. ಆದರೆ ಬಿಡ್‌ನ ಮೊದಲ ಸುತ್ತಿನಲ್ಲಿ ಸರ್ಫರಾಜ್ ಅವರನ್ನು ಯಾವುದೇ ಫ್ರ್ಯಾಂಚೈಸಿಯೂ ಖರೀದಿ ಮಾಡಿರಲಿಲ್ಲ. ಕೊನೆಯ ಸುತ್ತಿನಲ್ಲಿ ಚೆನ್ನೈ ತಂಡವು  ಮುಂಬೈ ಆಟಗಾರನಿಗೆ ಮಣೆ ಹಾಕಿತು. 

‘ನನಗೆ ಹೊಸ ಜೀವನ ನೀಡಿದ್ದಕ್ಕೆ ಸಿಎಸ್‌ಕೆಗೆ ಧನ್ಯವಾದಗಳು. 2026ರಲ್ಲಿ ಚೆನ್ನೈ ತಂಡವು ಟ್ರೋಫಿ ಜಯಿಸುವಂತೆ ಮಾಡುವುದೇ ನನ್ನ ಧ್ಯೇಯ’ ಎಂದು ಸರ್ಫರಾಜ್ ಅವರು ಇನ್ಸ್ಟಾಗ್ರಾಮ್‌ನಲ್ಲಿ ಬರೆದಿದ್ದಾರೆ.

ADVERTISEMENT

2023ರಲ್ಲಿ ಅವರು ಡೆಲ್ಲಿ ಕ್ಯಾಪಿಟಲ್ಸ್‌ ತಂಡದಲ್ಲಿ ಆಡಿದ್ದರು. ನಂತರದ ಎರಡು ಆವೃತ್ತಿಗಳಲ್ಲಿ ಫ್ರ್ಯಾಂಚೈಸಿಗಳ ಗಮನ ಸೆಳೆಯುವಲ್ಲಿ ಅವರು ವಿಫಲರಾಗಿದ್ದರು. ದೇಶಿ ಟೂರ್ನಿಗಳಲ್ಲಿ ರನ್‌ಗಳ ಹೊಳೆ ಹರಿಸಿದರೂ ಅವರನ್ನು ಭಾರತ ತಂಡಕ್ಕೆ ಪರಿಗಣಿಸದಿರುವುದೂ ಕೂಡ ಚರ್ಚೆಯ ವಿಷಯವಾಗಿದೆ.

2015ರಲ್ಲಿ ಸರ್ಫರಾಜ್ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೂಲಕ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದರು. 

ಈ ಬಾರಿಯ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿಯೂ ಅಮೋಘ ಲಯದಲ್ಲಿದ್ದಾರೆ. 204ರ ಸ್ಟ್ರೈಕ್‌ರೇಟ್‌ನಲ್ಲಿ 329 ರನ್‌ ಗಳಿಸಿದ್ದಾರೆ. ಅದರಲ್ಲಿ ಒಂದು ಶತಕ ಕೂಡ ಇದೆ.

ಆರು ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ಧಾರೆ. ಒಟ್ಟು 371 ರನ್ ಕೂಡ ಕಲೆಹಾಕಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.