ADVERTISEMENT

ರಣಜಿ ಫೈನಲ್: ಮುಂಬೈಗೆ ಮಧ್ಯಪ್ರದೇಶ ದಿಟ್ಟ ಉತ್ತರ

ರಣಜಿ ಫೈನಲ್: ಸರ್ಫರಾಜ್ ಖಾನ್ ಶತಕ ಸೊಬಗು; ಗೌರವ್‌ಗೆ ನಾಲ್ಕು ವಿಕೆಟ್

​ಪ್ರಜಾವಾಣಿ ವಾರ್ತೆ
Published 23 ಜೂನ್ 2022, 18:45 IST
Last Updated 23 ಜೂನ್ 2022, 18:45 IST
ಶತಕ ಸಂಭ್ರಮದಲ್ಲಿ ಸರ್ಫರಾಜ್ ಖಾನ್  –ಪ್ರಜಾವಾಣಿ ಚಿತ್ರ/ಬಿ.ಎಚ್. ಶಿವಕುಮಾರ್ 
ಶತಕ ಸಂಭ್ರಮದಲ್ಲಿ ಸರ್ಫರಾಜ್ ಖಾನ್  –ಪ್ರಜಾವಾಣಿ ಚಿತ್ರ/ಬಿ.ಎಚ್. ಶಿವಕುಮಾರ್    

ಬೆಂಗಳೂರು: ಮುಂಬೈನ ‘ರನ್‌ ಯಂತ್ರ’ ಸರ್ಫರಾಜ್ ಖಾನ್ ಈ ಬಾರಿಯ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ನಾಲ್ಕನೇ ಶತಕ ದಾಖಲಿಸಿದರು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯ ಫೈನಲ್ ಪಂದ್ಯದ ಎರಡನೇ ದಿನದಾಟದಲ್ಲಿ ಸರ್ಫರಾಜ್ (134; 243ಎ, 4X13, 6X2) ಶತಕದ ಬಲದಿಂದ ಮುಂಬೈ 127.4 ಓವರ್‌ಗಳಲ್ಲಿ 374 ರನ್‌ಗಳ ಹೋರಾಟದ ಮೊತ್ತ ಗಳಿಸಿತು. ಇದಕ್ಕುತ್ತರವಾಗಿ ಮಧ್ಯಪ್ರದೇಶ 41 ಓವರ್‌ಗಳಲ್ಲಿ 1 ವಿಕೆಟ್‌ಗೆ 123 ರನ್ ಗಳಿಸಿತು. ಯಶ್ ದುಬೆ (ಬ್ಯಾಟಿಂಗ್ 44) ಮತ್ತು ಶುಭಂ ಶರ್ಮಾ (ಬ್ಯಾಟಿಂಗ್ 41) ಕ್ರೀಸ್‌ನಲ್ಲಿದ್ದಾರೆ.ಮುಂಬೈ ಬೌಲರ್‌ಗಳ ತಂತ್ರಗಳಿಗೆ ದಿಟ್ಟ ಉತ್ತರ ನೀಡಿದ್ದಾರೆ.

ಕಳೆದ ಪಂದ್ಯದಲ್ಲಿ ಶತಕ ಗಳಿಸಿದ್ದ ಹಿಮಾಂಶು ಮಂತ್ರಿ (31 ರನ್) 17ನೇ ಓವರ್‌ನಲ್ಲಿ ಔಟಾದರು.

ADVERTISEMENT

ಖಾನ್ ರನ್‌ :ಪಂದ್ಯದ ಮೊದಲ ದಿನವಾದ ಬುಧವಾರ ಮುಂಬೈ ತಂಡವು ಗಳಿಸಿದ್ದ 5 ವಿಕೆಟ್‌ಗಳಿಗೆ 248 ಮೊತ್ತಕ್ಕೆ ಎರಡನೇ ದಿನ 126 ರನ್‌ಗಳನ್ನು ಸೇರಿಸಿತು. ಇದರಲ್ಲಿ ಸರ್ಫರಾಜ್ ಅವರದ್ದೇ ಸಿಂಹಪಾಲು.

ದಿನದ ಮೊದಲ ಓವರ್‌ನಲ್ಲಿ ಶಮ್ಸ್‌ ಮಲಾನಿ ಔಟಾದರು. ಈ ಹೊತ್ತಿನಲ್ಲಿ40 ರನ್‌ ಗಳಿಸಿ ಕ್ರೀಸ್‌ನಲ್ಲಿದ್ದ ಸರ್ಫರಾಜ್ ಗುರುವಾರ ಬೆಳಿಗ್ಗೆಯಿಂದಲೇ ವೇಗವಾಗಿ ರನ್‌ ಗಳಿಸುವತ್ತ ಗಮನ ಹರಿಸಿದರು.

ಇನಿಂಗ್ಸ್‌ನ 114ನೇ ಓವರ್‌ ಬೌಲಿಂಗ್ ಮಾಡಿದ ಕುಮಾರ್ ಕಾರ್ತಿಕೆಯ ಎಸೆತವನ್ನು ಬೌಂಡರಿಗೆರೆ ದಾಟಿಸಿದರು. ಭಾವೋದ್ವೇಗಕ್ಕೆ ಒಳಗಾದ ಸರ್ಫರಾಜ್ ಕಣ್ಣೀರುಗರೆದರು. ಗಾಳಿಯಲ್ಲಿ ಬ್ಯಾಟ್ ಬೀಸಿ, ತೊಳಗಲಿಸಿ ಸಂತಸ ವ್ಯಕ್ತಪಡಿಸಿದರು. ನಂತರ ತಮ್ಮ ತೊಡೆ ತಟ್ಟಿದರು.

152ನೇ ಎಸೆತದಲ್ಲಿ ಅರ್ಧಶತಕ ಪೂರೈಸಿದ ಅವರು ನಂತರದ 38 ಎಸೆತಗಳಲ್ಲಿ 50 ರನ್‌ ಗಳಿಸಿ, ಶತಕ ಸಾಧನೆ ಮಾಡಿದರು.24 ವರ್ಷದ ಸರ್ಫರಾಜ್‌ಗೆ ಇದು 25ನೇ ಪ್ರಥಮ ದರ್ಜೆ ಪಂದ್ಯವಾಗಿದೆ.

ಯಾದವ್‌ಗೆ ನಾಲ್ಕು ವಿಕೆಟ್: ಮುಂಬೈ ತಂಡದ ಕೆಳಕ್ರಮಾಂಕದ ಬ್ಯಾಟರ್‌ಗಳು ಸರ್ಫರಾಜ್ ಜೊತೆಗೆ ದೊಡ್ಡ ಜೊತೆಯಾಟ ಬೆಳೆಸದಂತೆ ಮಧ್ಯಮವೇಗಿ ಗೌರವ್ ಯಾದವ್ (106ಕ್ಕೆ4) ನೋಡಿಕೊಂಡರು.

ಶಮ್ಸ್ ಮಲಾನಿ, ತನುಷ್ ಕೋಟ್ಯಾನ್, ತುಷಾರ್ ದೇಶಪಾಂಡೆ ಮತ್ತು ಶತಕವೀರ ಸರ್ಫರಾಜ್ ವಿಕೆಟ್‌ಗಳನ್ನು ಅವರು ತಮ್ಮ ಬುಟ್ಟಿಗೆ ಹಾಕಿಕೊಂಡರು. ಇದರಿಂದಾಗಿ ಮುಂಬೈ ತಂಡಕ್ಕೆ 400ರ ಗಡಿ ದಾಟಲು ಸಾಧ್ಯವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.