ADVERTISEMENT

ಎರಡನೇ ಟಿ20 | ಆಸೀಸ್‌ಗೆ ಸುಲಭದ ತುತ್ತಾದ ಭಾರತ: 6.4 ಓವರ್ ಬಾಕಿ ಇರುವಂತೆ ಗೆಲುವು

ಪಿಟಿಐ
Published 31 ಅಕ್ಟೋಬರ್ 2025, 11:50 IST
Last Updated 31 ಅಕ್ಟೋಬರ್ 2025, 11:50 IST
<div class="paragraphs"><p>ವಿಕೆಟ್ ತೆಗೆದ ಸಂಭ್ರಮದಲ್ಲಿ ಹೆಜಲ್ವುಡ್</p></div>

ವಿಕೆಟ್ ತೆಗೆದ ಸಂಭ್ರಮದಲ್ಲಿ ಹೆಜಲ್ವುಡ್

   

ಚಿತ್ರ: @academy_dinda

ಮೆಲ್ಬರ್ನ್‌: ಜೋಶ್‌ ಹ್ಯಾಜಲ್‌ವುಡ್‌ (4–0–13–3) ಅವರು ತಮ್ಮ ವೇಗದ ದಾಳಿಯಿಂದ ಭಾರತದ ಅಗ್ರ ಆಟಗಾರರನ್ನು ಕಂಗೆಡಿಸಿದರು. ಅವರ ಅಮೋಘ ಬೌಲಿಂಗ್‌ ನೆರವಿನಿಂದ ಆಸ್ಟ್ರೇಲಿಯಾ ತಂಡ ಶುಕ್ರವಾರ ನಡೆದ ಎರಡನೇ ಟಿ20 ಪಂದ್ಯದಲ್ಲಿ ಭಾರತ ತಂಡವನ್ನು ನಾಲ್ಕು ವಿಕೆಟ್‌ಗಳಿಂದ  ಸೋಲಿಸಿತು. 

ADVERTISEMENT

ಎಂಸಿಜಿಯ ಸೇರಿದ್ದ 82,000 ಪ್ರೇಕ್ಷಕರಲ್ಲಿ ಬಹುತೇಕರು ಭಾರತೀಯರಾಗಿದ್ದು ಹೇಜಲ್‌ವುಡ್‌ ಬಿರುಗಾಳಿ ಬೌಲಿಂಗ್‌ನಿಂದ ಮೌನಕ್ಕೆ ಶರಣಾದರು. ನಾಯಕ ಸೂರ್ಯಕುಮಾರ್, ಉಪನಾಯಕ ಗಿಲ್ ಸೇರಿದಂತೆ ಒಂಬತ್ತು ಆಟಗಾರರು ಒಂದಂಕಿ ಮೊತ್ತಕ್ಕೇ ನಿರ್ಗಮಿಸಿದರು. ಭಾರತ 18.4 ಓವರುಗಳಲ್ಲಿ 125 ರನ್‌ಗಳಿಗೆ ಪತನಗೊಂಡಿತು.

ಅಮೋಘ ಲಯದಲ್ಲಿರುವ ಅಭಿಷೇಕ್‌ ಶರ್ಮಾ ಮಾತ್ರ ಈ ಪರಿಸ್ಥಿತಿಯಲ್ಲೂ ಎಂದಿನಂತೆ ಬೀಸಾಟವಾಡಿ 37 ಎಸೆತಗಳಲ್ಲಿ 68 ರನ್ ಬಾಚಿದರು. ಹ್ಯಾಜಲ್‌ವುಡ್‌ ದಾಳಿಯಿಂದ ತಂಡದ ಅರ್ಧದಷ್ಟು ಮಂದಿ 49 ರನ್‌ಗಳಾಗುವಷ್ಟರಲ್ಲಿ ಪೆವಿಲಿಯನ್‌ ಸೇರಿದ್ದರು. ಅವರು 15 ಡಾಟ್‌ಬಾಲ್‌ಗಳನ್ನು ಮಾಡಿದ್ದರು. 20 ನಿಮಿಷಗಳಲ್ಲೇ ಪಂದ್ಯದ ಫಲಿತಾಂಶ ಬಹುತೇಕ ನಿರ್ಧಾರವಾಗಿತ್ತು.

ಎರಡಂಕಿ ಮೊತ್ತ ಗಳಿಸಿದ ಇನ್ನೊಬ್ಬ ಆಟಗಾರ ಹರ್ಷಿತ್‌ ರಾಣಾ (35, 33ಎ) ಜೊತೆ ಅಭಿಷೇಕ್ ಅವರು  ಆರನೇ ವಿಕೆಟ್‌ಗೆ 56 ರನ್ ಸೇರಿಸಿದ್ದರಿಂದ ತಂಡ 100ರ ಗಡಿ ದಾಟಲು ಸಾಧ್ಯವಾಯಿತು.

ಇದಕ್ಕೆ ಉತ್ತರವಾಗಿ, ಆಸ್ಟ್ರೇಲಿಯಾ ತಂಡವು ನಾಯಕ ಮಿಚೆಲ್‌ ಮಾರ್ಷ್‌ (46, 26ಎ) ಆಟದ ನೆರವಿನಿಂದ 13.2 ಓವರುಗಳಲ್ಲೇ 6 ವಿಕೆಟ್‌ ನಷ್ಟದಲ್ಲಿ ಗುರಿತಲುಪಿತು. ಹೆಚ್ಚಿನ ಬ್ಯಾಟರ್‌ಗಳು ಭರ್ಜರಿ ಹೊಡೆತಗಳಿಗೆ ಹೋಗಿ ವಿಕೆಟ್‌ ಒಪ್ಪಿಸಿದರು.

ಇದ್ದುದರಲ್ಲಿ ಕೊಂಚ ಸಮಾಧಾನ ಮೂಡಿಸಿದ್ದು ವರುಣ್ ಚಕ್ರವರ್ತಿ (23ಕ್ಕೆ2) ಅವರ ಬಿಗು ಸ್ಪೆಲ್‌. ಬೂಮ್ರಾ (26ಕ್ಕೆ2) ತಮ್ಮ ಕೊನೆಯ ಓವರಿನಲ್ಲಿ ಕರಾರುವಾಕ್ ಯಾರ್ಕರ್‌ನಲ್ಲಿ ಮ್ಯಾಥ್ಯೂ ಶಾರ್ಟ್‌ ಅವರನ್ನು ಬೌಲ್ಡ್‌ ಮಾಡಿದರು.

ಆಸ್ಟ್ರೇಲಿಯಾ ಬೌಲರ್‌ಗಳ ನೇರ ಮತ್ತು ಎಕ್ಸ್‌ಟ್ರಾ ಬೌನ್ಸ್‌ನಿಂದ ಪ್ರವಾಸಿ ತಂಡದ ಬ್ಯಾಟರ್‌ಗಳು ತಡಬಡಾಯಿಸಿದರು. ಹ್ಯಾಜಲ್‌ವುಡ್‌ ಆರಂಭದಲ್ಲಿ ಶುಭಮನ್ ಗಿಲ್‌, ಸೂರ್ಯಕುಮಾರ್ ಮತ್ತು ತಿಲಕ್‌ ವರ್ಮಾ ಅವರ ವಿಕೆಟ್‌ಗಳನ್ನು ಕಬಳಿಸಿದರು. ಇನ್ನೊಂದೆಡೆ ನಥಾನ್ ಎಲಿಸ್‌ (21ಕ್ಕೆ2), ಸಂಜು ಸ್ಯಾಮ್ಸನ್‌ ವಿಕೆಟ್‌ ಪಡೆದರು. ಕ್ಸೇವಿಯರ್ ಬಾರ್ಟ್ಲೆಟ್‌ (39ಕ್ಕೆ2) ಕೊನೆಯಲ್ಲಿ ವಿಕೆಟ್‌ಗಳನ್ನು ಪಡೆದರು. 

ಒಂದೆಡೆ ವಿಕೆಟ್‌ಗಳು ಸಾಲಾಗಿ ಉರುಳಿದರೂ, ವಿಶ್ವದ ಅಗ್ರಮಾನ್ಯ ಟಿ20 ಬ್ಯಾಟರ್‌ ಅಭಿಷೇಕ್ ಆಕ್ರಮಣದ ಹಾದಿಯಿಂದ ಹಿಂದೆಸರಿಯಲಿಲ್ಲ. ಅವರ ಆಟದಲ್ಲಿ ಎಂಟು ಬೌಂಡರಿ, ಎರಡು ಸಿಕ್ಸರ್‌ಗಳಿದ್ದವು. ಬೌನ್ಸ್‌ಗಳನ್ನು ಸರಿಯಾಗಿ ಗುರುತಿಸಿ ರನ್‌ಗಳನ್ನು ಬಾಚಿದರು.

ಐದು ಪಂದ್ಯಗಳ ಸರಣಿಯಲ್ಲಿ ಆತಿಥೇಯರು 1–0 ಮುನ್ನಡೆ ಪಡೆದರು. ಮೊದಲ ಪಂದ್ಯ ಮಳೆಯ ಪಾಲಾಗಿತ್ತು.

ಸ್ಕೋರ್ ಕಾರ್ಡ್

ಭಾರತ: 125 (18.4 ಓವರುಗಳಲ್ಲಿ)

ಗಿಲ್‌ ಸಿ ಮಾರ್ಷ್‌ ಬಿ ಹ್ಯಾಜಲ್‌ವುಡ್‌ 5 (10ಎ)

ಅಭಿಷೇಕ್‌ ಎಲ್‌ಬಿಡಬ್ಲ್ಯು ಬಿ ಎಲ್ಲಿಸ್‌ 68 (37ಎ, 4x8, 6x2)

ಸೂರ್ಯ ಸಿ ಇಂಗ್ಲಿಸ್‌ ಬಿ ಹ್ಯಾಜಲ್‌ವುಡ್‌ 1 (4ಎ)

ತಿಲಕ್‌ ಸಿ ಇಂಗ್ಲಿಸ್‌ ಬಿ ಹ್ಯಾಜಲ್‌ವುಡ್‌ 0 (2ಎ)

ಅಕ್ಷರ್ ರನೌಟ್‌ (ಡೇವಿಡ್‌/ಇಂಗ್ಲಿಸ್‌) 7 (12ಎ)

ಹರ್ಷಿತ್‌ ಸಿ ಡೇವಿಡ್‌ ಬಿ ಬಾರ್ಟ್ಲೆಟ್‌ 35 (33, 4x3, 6x1)

ದುಬೆ ಸಿ ಇಂಗ್ಲಿಸ್‌ ಬಿ ಬಾರ್ಟ್ಲೆಟ್‌ 4 (2ಎ, 4x1)

ಕುಲದೀಪ್‌ ಸಿ ಸಬ್‌ (ಅಬೋಟ್‌) ಬಿ ಸ್ಟೊಯಿನಿಸ್‌ 0 (6ಎ)

ವರುಣ್‌ ಔಟಾಗದೇ 0 (1ಎ)

ಬೂಮ್ರಾ ರನೌಟ್‌ 0 (1ಎ)

ಇತರೆ: 3 (ಬೈ 1, ವೈಡ್‌ 2)

ವಿಕೆಟ್ ಪತನ: 1–20 (ಶುಭಮನ್ ಗಿಲ್‌, 2.4), 2–23 (ಸಂಜು ಸ್ಯಾಮ್ಸನ್‌, 3.3), 3–32 (ಸೂರ್ಯಕುಮಾರ್‌ ಯಾದವ್‌, 4.3), 4–32 (ತಿಲಕ್‌ ವರ್ಮಾ, 4.5), 5–49 (ಅಕ್ಷರ್‌ ಪಟೇಲ್‌, 7.3), 6–105 (ಹರ್ಷಿತ್‌ ರಾಣಾ, 15.2), 7–109 (ಶಿವಂ ದುಬೆ, 15.4), 8–110 (ಕುಲದೀಪ್ ಯಾದವ್‌, 16.5), 9–125 (ಅಭಿಷೇಕ್ ಶರ್ಮಾ, 18.3), 10–125 (ಜಸ್‌ಪ್ರೀತ್ ಬೂಮ್ರಾ, 18.4)

ಬೌಲಿಂಗ್‌: ಜೋಶ್‌ ಹ್ಯಾಜಲ್‌ವುಡ್‌ 4–0–13–3; ಜೇವಿಯರ್‌ ಬಾರ್ಟ್ಲೆಟ್‌ 4–0–39–2; ನಥಾನ್ ಎಲಿಸ್‌ 3.4–0–21–2; ಮಾರ್ಕಸ್‌ ಸ್ಟೊಯಿನಿಸ್‌ 4–0–24–1; ಮಿಚೆಲ್‌ ಒವೆನ್ 1–0–13–0; ಮ್ಯಾಥ್ಯೂ ಕುನ್ಹೆಮನ್ 2–0–14–0.

ಆಸ್ಟ್ರೇಲಿಯಾ: 6 ವಿಕೆಟ್‌ಗೆ 126 (13.2 ಓವರುಗಳಲ್ಲಿ)

ಮಾರ್ಷ್‌ ಸಿ ಅಭಿಷೇಕ್‌ ಬಿ ಕುಲದೀಪ್ 46 (26ಎ, 4x2, 6x4)

ಹೆಡ್‌ ಸಿ ತಿಲಕ್‌ ಬಿ ವರುಣ್ 28 (15ಎ, 4x3, 6x1)

ಇಂಗ್ಲಿಸ್‌ ಎಲ್‌ಬಿಡಬ್ಲ್ಯು ಬಿ ಕುಲದೀಪ್ 20 (20ಎ, 4x1)

ಡೇವಿಡ್‌ ಸಿ ಮತ್ತು ಬಿ ವರುಣ್‌ 1 (2ಎ)

ಒವೆನ್‌ ಸಿ ಸ್ಯಾಮ್ಸನ್‌ ಬಿ ಬೂಮ್ರಾ 14 (10ಎ, 6x1)

ಸ್ಟೊಯಿನಿಸ್ ಔಟಾಗದೇ 6 (6ಎ)

ಶಾರ್ಟ್‌ ಬಿ ಬೂಮ್ರಾ 0 (1ಎ)

ಬಾರ್ಟ್ಲೆಟ್‌ ಔಟಾಗದೇ 0 (1ಎ)

ಇತರೆ: 11 (ಬೈ4, ಲೆಗ್‌ ಬೈ 1, ನೋಬಾಲ್‌ 1, ವೈಡ್‌ 5)

ವಿಕೆಟ್ ಪತನ: 1–51 (ಹೆಡ್‌, 4.3), 2–87 (ಮಾರ್ಷ್‌, 7.6), 3–90 (ಟಿಮ್‌ ಡೇವಿಡ್‌, 8.4), 4–113 (ಇಂಗ್ಲಿಸ್‌, 11.3), 5–124 (ಮಿಚೆಲ್‌ ಒವೆನ್‌, 12.4), 6–124 (ಮ್ಯಾಥ್ಯೂ ಶಾರ್ಟ್‌, 12.5),

ಬೌಲಿಂಗ್‌: ಬೂಮ್ರಾ 4–0–26–2; ಹರ್ಷಿತ್‌ ರಾಣಾ 2–0–27–0; ಚಕ್ರವರ್ತಿ 4–0–23–2; ಕುಲದೀಪ್ ಯಾದವ್‌ 3.2–0–45–2

ಪಂದ್ಯದ ಆಟಗಾರ: ಜೋಶ್‌ ಹ್ಯಾಜಲ್‌ವುಡ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.