ADVERTISEMENT

ಸೀನಿಯರ್‌ ಮಹಿಳಾ ಏಕದಿನ ಟೂರ್ನಿ: ಕ್ವಾರ್ಟರ್‌ಫೈನಲ್‌ನಲ್ಲಿ ಸೋತ ರಾಜ್ಯ ವನಿತೆಯರು

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2026, 16:18 IST
Last Updated 23 ಫೆಬ್ರುವರಿ 2026, 16:18 IST
ಶಿಪ್ರಾ ಗಿರಿ
ಶಿಪ್ರಾ ಗಿರಿ   

ಬೆಂಗಳೂರು: ಬಲಗೈ ಬ್ಯಾಟರ್‌ ಶಿಪ್ರಾ ಗಿರಿ ಅವರ ಶತಕದ ಬಲದಿಂದ ರೈಲ್ವೇಸ್ ತಂಡವು ಸೀನಿಯರ್‌ ಮಹಿಳಾ ಏಕದಿನ ಕ್ರಿಕೆಟ್‌ ಟೂರ್ನಿಯ ಕ್ವಾರ್ಟರ್‌ಫೈನಲ್‌ನಲ್ಲಿ 18 ರನ್‌ಗಳಿಂದ ಕರ್ನಾಟಕ ತಂಡವನ್ನು ಮಣಿಸಿತು.

ಗುಂಪು ಹಂತದ ಕೊನೆಯ ಎರಡು ಪಂದ್ಯಗಳಲ್ಲಿ ಸೋತರೂ ಎಂಟರ ಘಟ್ಟಕ್ಕೆ ಅರ್ಹತೆ ಪಡೆದಿದ್ದ ಶುಭಾ ಸತೀಶ್‌ ಪಡೆಯ ಅಭಿಯಾನ ಅಂತ್ಯಗೊಂಡಿತು.

ಮೊಹಾಲಿಯ ಐ.ಎಸ್‌.ಬಿಂದ್ರಾ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ರೈಲ್ವೇಸ್‌ ತಂಡದ ನಾಯಕಿ ಏಕ್ತಾ ಬಿಷ್ಟ್‌ ಬ್ಯಾಟಿಂಗ್‌ ಆಯ್ದುಕೊಂಡರು. ಶಿಪ್ರಾ (126; 119ಎ, 4x13, 6x1) ಅಮೋಘ ಬ್ಯಾಟಿಂಗ್‌ನೊಂದಿಗೆ ಕರ್ನಾಟಕದ ಬೌಲರ್‌ಗಳನ್ನು ದಂಡಿಸಿದರು. ಕೊನೆಯಲ್ಲಿ ಆರುಷಿ ಗೋಯಲ್‌ 45 ಎಸೆತಗಳಲ್ಲಿ 43 ರನ್‌ ಸೂರೆ ಮಾಡಿದರು. ರೈಲ್ವೇಸ್ ತಂಡವು 50 ಓವರ್‌ಗಳಲ್ಲಿ 6 ವಿಕೆಟ್‌ಗೆ 251 ರನ್‌ ‍‍ಪೇರಿಸಿತು.

ADVERTISEMENT

ಸವಾಲಿನ ಗುರಿ ಬೆನ್ನಟ್ಟಿದ ರಾಜ್ಯ ತಂಡದ ಆರಂಭ ಉತ್ತಮವಾಗಿರಲಿಲ್ಲ. ತಂಡದ ಮೊತ್ತ 8 ರನ್‌ ಇದ್ದಾಗ ರೋಷಿಣಿ ಕಿರಣ್‌ ಶೂನ್ಯಕ್ಕೆ ನಿರ್ಗಮಿಸಿದರು. ನಾಯಕಿ ಶುಭಾ (43; 70ಎ, 4x4) ಹಾಗೂ ಶಿಶಿರಾ ಎ. ಗೌಡ (55; 93ಎ, 4x7) ಎರಡನೇ ವಿಕೆಟ್‌ ಜೊತೆಯಾಟದಲ್ಲಿ 91 ರನ್‌ ಸೇರಿಸಿ ಚೇತರಿಕೆ ನೀಡಿದರು.

ಮಧ್ಯಮ ಕ್ರಮಾಂಕದಲ್ಲಿ ಮಿಥಿಲಾ ವಿನೋದ್‌ (31; 28ಎ, 4x5) ಹಾಗೂ ನಿಕಿ ಪ್ರಸಾದ್‌ (46; 52ಎ, 4x4) ಪ್ರತಿರೋಧ ತೋರಿದರು. ಆದರೆ, ಶ್ರಾಯೊಸಿ ಪಿ. ಐಶ್‌ (48ಕ್ಕೆ3) ಹಾಗೂ ಸಿಮ್ರನ್‌ ದಿಲ್‌ ಬಹದೂರ್‌ (32ಕ್ಕೆ2) ಅವರ ಪರಿಣಾಮಕಾರಿ ಬೌಲಿಂಗ್‌ ಎದುರು ಕೆಳಕ್ರಮಾಂಕದ ಆಟಗಾರ್ತಿಯರು ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಶುಭಾ ಪಡೆಯು 9 ವಿಕೆಟ್‌ಗೆ 233 ರನ್‌ ಗಳಿಸಿ ಹೋರಾಟ ಮುಗಿಸಿತು.

ಸಂಕ್ಷಿಪ್ತ ಸ್ಕೋರು: ರೈಲ್ವೇಸ್‌: 50 ಓವರ್‌ಗಳಲ್ಲಿ 6 ವಿಕೆಟ್‌ಗೆ 251 (ಶಿಪ್ರಾ ಗಿರಿ 126, ಆರುಷಿ ಗೋಯಲ್‌ ಔಟಾಗದೇ 43; ರಾಜೇಶ್ವರಿ ಗಾಯಕವಾಡ 44ಕ್ಕೆ1, ಸಹನಾ ಎಸ್‌. ಪವಾರ್‌ 39ಕ್ಕೆ1). ಕರ್ನಾಟಕ: 50 ಓವರ್‌ಗಳಲ್ಲಿ 9 ವಿಕೆಟ್‌ಗೆ 233 (ಶುಭಾ ಸತೀಶ್‌ 43, ಶಿಶಿರಾ ಎ. ಗೌಡ 55, ನಿಕಿ ಪ್ರಸಾದ್‌ 46; ಸಿಮ್ರನ್‌ ದಿಲ್‌ ಬಹದೂರ್‌ 32ಕ್ಕೆ2, ಶ್ರಾಯೊಸಿ ಪಿ. ಐಶ್‌ 48ಕ್ಕೆ3).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.