ನ್ನೈ ಸೂಪರ್ ಕಿಂಗ್ಸ್ ಹಾಗೂ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯ ಲೋಗೊ
ಎಕ್ಸ್ ಚಿತ್ರಗಳು
ಸೇಂಟ್ ಜಾನ್ಸ್ (ಆಂಟಿಗುವಾ): ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡುವ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ಕ್ರಿಕೆಟ್ ಅಕಾಡೆಮಿಯಲ್ಲಿ ವೆಸ್ಟ್ ಇಂಡೀಸ್‌ನ ಏಳು ಆಟಗಾರರು ಡಿಸೆಂಬರ್ 1ರಿಂದ ಎರಡು ವಾರ ತರಬೇತಿ ಪಡೆಯಲಿದ್ದಾರೆ ಎಂದು 'ಕ್ರಿಕೆಟ್ ವೆಸ್ಟ್ ಇಂಡೀಸ್' (ಸಿಡಬ್ಲ್ಯೂಐ) ಪ್ರಕಟಿಸಿದೆ.
ವೆಸ್ಟ್ ಇಂಡೀಸ್ ಅಕಾಡೆಮಿಯ ಮುಖ್ಯ ಕೋಚ್ ರಮೇಶ್ ಸುಬಸಿಂಘೆ ಮತ್ತು ಸಹಾಯಕ ಕೋಚ್ ರೋಹನ್ ನರ್ಸ್ ಅವರೂ ಈ ಏಳು ಮಂದಿ 'ಭರವಸೆಯ' ಆಟಗಾರರೊಂದಿಗೆ ಇರಲಿದ್ದಾರೆ. ತಂಡವು ನವಂಬರ್ 29ಕ್ಕೆ ಭಾರತದತ್ತ ತೆರಳಲಿದೆ ಎಂದು ತಿಳಿಸಲಾಗಿದೆ.
ವಿಂಡೀಸ್ ಅಕಾಡೆಮಿಯ ಹಾಲಿ ಹಾಗೂ ಮಾಜಿ ಆಟಗಾರರಾದ ಟೆಡ್ಡಿ ಬಿಷಪ್, ಜೆವೆಲ್ ಆಂಡ್ಯ್ರೂ, 19 ವರ್ಷದೊಳಗಿನವರ ತಂಡದ ಮಾಜಿ ಆಟಗಾರ ಜೋರ್ಡನ್ ಜಾನ್ಸನ್, ಅಕೀಮ್ ಅಗಸ್ಟೆ, ವಿವಿಧ ಫ್ರಾಂಚೈಸ್‌ಗಳಿಗೆ ಆಡುವ ಕಿರ್ಕ್ ಮೆಕೆಂಜೀ, ಮ್ಯಾಥ್ಯೂ ನಂದು, ಕೆವಿನ್ ವಿಕ್‌ಹಮ್ ಅವರು ತರಬೇತಿಗೆ ಆಯ್ಕೆಯಾಗಿರುವ ಆಟಗಾರರು.
ಸಿಡಬ್ಲ್ಯೂಐನ ಕ್ರಿಕೆಟ್ ನಿರ್ದೇಶಕ ಮೈಲ್ಸ್ ಬಾಸ್ಕೊಂಬೆ ಅವರು, 'ಏಳು ಬ್ಯಾಟರ್‌ಗಳಿಗೆ ಚೆನ್ನೈ ಅಕಾಡೆಮಿ ಆತಿಥ್ಯ ನೀಡಲಿದೆ. ಸ್ಪಿನ್ ಬೌಲಿಂಗ್ ಪರಿಸ್ಥಿತಿಗೆ ಇವರನ್ನು ಕೌಶಲ ಮತ್ತು ಅನುಭವದೊಂದಿಗೆ ಸಜ್ಜುಗೊಳಿಸುವ ಉದ್ದೇಶ ಹೊಂದಿದ್ದೇವೆ' ಎಂದು ತಿಳಿಸಿದ್ದಾರೆ.
'ನಮ್ಮ ಕೋಚ್‌ಗಳು ನಿಗದಿತ ಅವಧಿಯಲ್ಲಿ ಆಟಗಾರರ ಕಲಿಕೆಯನ್ನು ಖಚಿತಪಡಿಸಿಕೊಳ್ಳಲಿದ್ದಾರೆ. ಹಾಗೆಯೇ, ತರಬೇತಿಯನ್ನು ಇನ್ನಷ್ಟು ಆಟಗಾರರಿಗೆ ವಿಸ್ತರಿಸುವ ನಿಟ್ಟಿನಲ್ಲಿ ಶ್ರಮಿಸಲಿದ್ದಾರೆ' ಎಂದೂ ಹೇಳಿದ್ದಾರೆ.
ಆಟಗಾರರು ಸಿಎಸ್‌ಕೆ ಅಕಾಡೆಮಿಯಲ್ಲಿ ತರಬೇತಿಯ ಭಾಗವಾಗಿ ಮೂರು ನಿಗದಿತ ಓವರ್‌ಗಳ ಪಂದ್ಯಗಳಲ್ಲಿ ಆಡಲಿದ್ದಾರೆ. ಜೊತೆಗೆ, ಅಕಾಡೆಮಿಯ ನಿರ್ದೇಶಕ ಶ್ರೀರಾಮ್ ಕೃಷ್ಣಮೂರ್ತಿ ಸೇರಿದಂತೆ ಅಲ್ಲಿನ ನುರಿತ ತರಬೇತುದಾರರೊಂದಿಗೂ ಅಭ್ಯಾಸದಲ್ಲಿ ತೊಡಗಿಕೊಳ್ಳಲಿದ್ದಾರೆ.
ಇಂತಹದೇ ತರಬೇತಿ ಕಾರ್ಯಕ್ರಮದ ಯಶಸ್ಸು ಈ ಯೋಜನೆಗೆ ಸ್ಫೂರ್ತಿಯಾಗಿದೆ. ಇತ್ತೀಚೆಗೆ ಭಾರತದಲ್ಲಿ ನಡೆದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ನ್ಯೂಜಿಲೆಂಡ್ ತಂಡವು 3–0 ಅಂತರದ ಗೆಲುವು ಸಾಧಿಸಿತ್ತು. ಟೂರ್ನಿಗೂ ಮುನ್ನ ಆ ತಂಡದ ರಚಿನ್ ರವೀಂದ್ರ, ಸಿಎಸ್‌ಕೆ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದರು. ಬಳಿಕ ಸರಣಿಯ ಮೂರೂ ಪಂದ್ಯಗಳಲ್ಲಿ ಆಡಿದ್ದ ಅವರು, 6 ಇನಿಂಗ್ಸ್‌ಗಳಿಂದ 256 ರನ್ ಗಳಿಸಿ ಮಿಂಚಿದ್ದರು.
ಭಾರತ ತಂಡ ಸರಣಿಯಲ್ಲಿ ವೈಟ್‌ವಾಷ್ ಮುಖಭಂಗ ಅನುಭವಿಸಿದ ಬೆನ್ನಲ್ಲೇ, ಸಿಎಸ್‌ಕೆ ನಿರ್ಧಾರವನ್ನು ಕ್ರಿಕೆಟಿಗ ರಾಬಿನ್ ಉತ್ತಪ್ಪ ಟೀಕಿಸಿದ್ದರು. ವಿದೇಶಿ ಆಟಗಾರರಿಗೆ ಅಕಾಡೆಮಿಯಲ್ಲಿ ತರಬೇತಿ ನೀಡುವುದು ದೇಶದ ಹಿತಾಸಕ್ತಿಗೆ ವಿರುದ್ಧವಾದದ್ದು ಎಂದು ಕಿಡಿಕಾರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.