ADVERTISEMENT

ಶಫಾಲಿ ವರ್ಮಾಗೆ ಐಸಿಸಿ ತಿಂಗಳ ಆಟಗಾರ್ತಿ ಗೌರವ

ಪಿಟಿಐ
Published 15 ಡಿಸೆಂಬರ್ 2025, 12:55 IST
Last Updated 15 ಡಿಸೆಂಬರ್ 2025, 12:55 IST
ಶಫಾಲಿ ವರ್ಮಾ
ಶಫಾಲಿ ವರ್ಮಾ   

ದುಬೈ: ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಮಹಿಳಾ ಏಕದಿನ ಕ್ರಿಕೆಟ್‌ ವಿಶ್ವಕಪ್ ಫೈನಲ್‌ನಲ್ಲಿ ಅಮೋಘ ಆಟವಾಡಿದ್ದ ಆರಂಭ ಆಟಗಾರ್ತಿ ಶಫಾಲಿ ವರ್ಮಾ ಅವರನ್ನು ಐಸಿಸಿ ನವೆಂಬರ್ ತಿಂಗಳ ಆಟಗಾರ್ತಿ ಗೌರವಕ್ಕೆ ಆಯ್ಕೆ ಮಾಡಲಾಗಿದೆ.

ಆರಂಭ ಆಟಗಾರ್ತಿ ಪ್ರತೀಕಾ ರಾವಲ್ ಗಾಯಗೊಂಡ ಪರಿಣಾಮ ತಂಡಕ್ಕೆ ಸೇರ್ಪಡೆ ಆಗಿದ್ದ ಶಫಾಲಿ ಅವರು ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 78 ಎಸೆತಗಳಲ್ಲಿ 87 ರನ್ ಬಾರಿಸಿದ್ದರು. ನವಿ ಮುಂಬೈನಲ್ಲಿ ನಡೆದ ಆ ಪಂದ್ಯವನ್ನು 52 ರನ್‌ಗಳಿಂದ ಗೆದ್ದ ಭಾರತ ಮೊದಲ ಬಾರಿ ವಿಶ್ವಕಪ್ ಗೆದ್ದು ಸಂಭ್ರಮಿಸಿತ್ತು.

ಸ್ಮೃತಿ ಮಂದಾನ ಜೊತೆ 104 ರನ್ ಸೇರಿಸಿ ಭಾರತ ದೊಡ್ಡ ಮೊತ್ತ ಗಳಿಸಲು ಅವರು ಅಡಿಪಾಯ ಹಾಕಿದ್ದರು.

ADVERTISEMENT

21 ವರ್ಷದ ಶಫಾಲಿ ಜೊತೆ, ಥಾಯ್ಲೆಂಡ್‌ನ ತಿಪಟ್ಚಾ ಪುತ್ತವಾಂಗ್ ಮತ್ತು ಯುಎಇಯ ಇಶಾ ಓಝಾ ಸಹ ಈ ಪ್ರಶಸ್ತಿಗೆ ಪೈಪೋಟಿ ನಡೆಸಿದ್ದರು. ಶಫಾಲಿ ಮೊದಲ ಬಾರಿ ಈ ‘ತಿಂಗಳ ಆಟಗಾರ್ತಿ’ ಗೌರಕ್ಕೆ ಪಾತ್ರರಾಗಿದ್ದಾರೆ.

‘ನನ್ನ ಮೊದಲ ಐಸಿಸಿ ಮಹಿಳಾ ಕ್ರಿಕೆಟ್‌ ವಿಶ್ವಕಪ್ ಅನುಭವ ನಾನು ನಿರೀಕ್ಷಿಸಿದ ರೀತಿ ನಡೆಯಲಿಲ್ಲ. ಆದರೆ ನಾನು ಹಾರೈಸಿದ್ದಕಿಂತ ಉತ್ತಮ ರೀತಿ ಕೊನೆಗೊಂಡಿತು’ ಎಂದು ಶಫಾಲಿ ಐಸಿಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ನವೆಂಬರ್ ತಿಂಗಳ ಆಟಗಾರ್ತಿಯಾಗಿ ನನ್ನನ್ನು ಹೆಸರಿಸಿರುವುದು ನಿಜವಾಗಿ ನನಗೊದಗಿದ  ಗೌರವ. ತಂಡದ ಸಹ ಆಟಗಾರ್ತಿಯರು, ತರಬೇತುದಾರರು, ಕುಟುಂಬ ಮತ್ತು ನನ್ನನ್ನು ಈ ಪಯಣದಲ್ಲಿ ಬೆಂಬಲಿಸಿದ ಎಲ್ಲರಿಗೂ ಈ ಪ್ರಶಸ್ತಿ ಸರ್ಮಪಿಸುತ್ತೇನೆ. ನಾವು ತಂಡವಾಗಿ ಗೆಲ್ಲುತ್ತೇವೆ ಅಥವಾ ಸೋಲುತ್ತೇವೆ. ಪ್ರಶಸ್ತಿಯೂ ಅದೇ ರೀತಿ’ ಎಂದು ಅವರು ಹೇಳಿದ್ದಾರೆ.

ಹಾರ್ಮರ್‌ಗೆ ಪ್ರಶಸ್ತಿ:

ಭಾರತ ವಿರುದ್ಧ ದಕ್ಷಿಣ ಆಫ್ರಿಕಾ ತಂಡ 2–0 ಯಿಂದ ಟೆಸ್ಟ್‌ ಸರಣಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ ಸ್ಪಿನ್ ಬೌಲರ್ ಸಿಮೋನ್ ಹಾರ್ಮರ್ ಅವರು ಪುರುಷರ ವಿಭಾಗದ ಗೌರವಕ್ಕೆ ಪಾತ್ರರಾಗಿದ್ದಾರೆ.

ಆಫ್‌ ಸ್ಪಿನ್ನರ್ ಹಾರ್ಮರ್ ಈ ಗೌರವಕ್ಕೆ ನಡೆದ ಪೈಪೋಟಿಯಲ್ಲಿ ಬಾಂಗ್ಲಾದೇಶದ ತೈಜುಲ್ ಇಸ್ಲಾಂ, ಪಾಕಿಸ್ತಾನದ ಮೊಹಮ್ಮದ್ ನವಾಝ್ ಅವರನ್ನು ಹಿಂದೆಹಾಕಿದ್ದಾರೆ.

ಇದೇ ಮೊದಲ ಸಲ ಈ ಗೌರವಕ್ಕೆ ಆಯ್ಕೆಯಾಗಿರುವ 36 ವರ್ಷ ವಯಸ್ಸಿನ ಹಾರ್ಮರ್ 17 ವಿಕೆಟ್‌ಗಳನ್ನು ಬಾಚಿದ್ದರು. ಭಾರತದ ನೆಲದಲ್ಲಿ ದಕ್ಷಿಣ ಆಫ್ರಿಕಾ 25 ವರ್ಷಗಳಲ್ಲಿ ಮೊದಲ ಬಾರಿ ಟೆಸ್ಟ್ ಸರಣಿ ಗೆಲ್ಲಲು ಅವರ ಬೌಲಿಂಗ್ ಕಾರಣವಾಗಿತ್ತು.

ಮೊದಲ ಟೆಸ್ಟ್‌ನಲ್ಲಿ 30ಕ್ಕೆ4 ಮತ್ತು 21ಕ್ಕೆ4 ವಿಕೆಟ್ ಪಡೆದ ಅವರು, ಎರಡನೇ ಟೆಸ್ಟ್‌ನಲ್ಲಿ 64ಕ್ಕೆ3 ಮತ್ತು 37ಕ್ಕೆ6 ವಿಕೆಟ್ ಪಡೆದಿದ್ದರು. 8.94ರ ಸರಾಸರಿಯಲ್ಲಿ (1.91 ಇಕಾನಮಿ) ವಿಕೆಟ್‌ಗಳನ್ನು ಪಡೆದಿದ್ದರು.

ಹಾರ್ಮರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.