ADVERTISEMENT

ಬಾಂಗ್ಲಾ ‘ಹುಲಿ’ ಶಕೀಬ್

​ಪ್ರಜಾವಾಣಿ ವಾರ್ತೆ
Published 24 ಜೂನ್ 2019, 10:47 IST
Last Updated 24 ಜೂನ್ 2019, 10:47 IST
ಶಕೀಬ್ ಅಲ್ ಹಸನ್
ಶಕೀಬ್ ಅಲ್ ಹಸನ್    

ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ ಕ್ರಿಕೆಟ್‌ ಅಂಗಳಕ್ಕೆ ಬರದಿದ್ದರೆ ಏನಾಗಿರುತ್ತಿದ್ದರು?

ಅವರು ತಮ್ಮ ಬಾಲ್ಯದಲ್ಲಿ ಕಂಡ ಕನಸಿನಂತೆಯೇ ಎಂಜಿನಿಯರ್ ಅಥವಾ ವೈದ್ಯರಾಗುವ ಸಾಧ್ಯತೆ ಇತ್ತು. ಆದರೆ, ಬಾಂಗ್ಲಾದ ಕ್ರಿಕೆಟ್‌ ಕ್ಷೇತ್ರ ಅಪಾರ ನಷ್ಟ ಅನುಭವಿಸುತ್ತಿತ್ತು.

ಅವರು ಕ್ರಿಕೆಟ್‌ಗೆ ಬಂದಿದ್ದು ಬಾಂಗ್ಲಾಕ್ಕೆ ಒಳ್ಳೆಯದೇ ಆಯಿತು. ಹೋದ 13 ವರ್ಷಗಳಿಂದ ತಮ್ಮ ರಾಷ್ಟ್ರ ತಂಡದ ಆಲ್‌ರೌಂಡರ್‌ ಆಗಿ ಆಡುತ್ತಿದ್ದಾರೆ. ಈ ಅವಧಿಯಲ್ಲಿ ವಿಶ್ವದ ಘಟಾನುಘಟಿ ತಂಡಗಳ ಎದುರು ತಂಡವು ಸೆಡ್ಡು ಹೊಡೆಯುವ ಸಾಮರ್ಥ್ಯ ಬೆಳೆಸಿಕೊಂಡಿದೆ. ಅದರಲ್ಲಿ ಸಿಂಹಪಾಲು ಇರುವುದು ಶಕೀಬ್ ಅವರದ್ದು.

ADVERTISEMENT

ಬಾಂಗ್ಲಾದ ಮಗುರಾದ ಮಧ್ಯಮವರ್ಗದ ಕುಟುಂಬದಲ್ಲಿ ಜನಿಸಿದ ಶಕೀಬ್ ಒಳ್ಳೆಯ ವಿದ್ಯಾರ್ಥಿಯಾಗಿದ್ದರು. ಅವರ ತಂದೆ ಕೊಂಡೊಕರ್ ಮಸ್ರೂರ್ ರೇಜಾ ಅವರು ಸರ್ಕಾರಿ ಉದ್ಯೋಗಿಯಾಗಿದ್ದರು. ಅವರು ಫುಟ್‌ಬಾಲ್ ಆಟಗಾರನಾಗಿದ್ದರು. ಬಾಂಗ್ಲಾದಲ್ಲಿಯೂ ಫುಟ್‌ಬಾಲ್ ಕ್ರೇಜ್ ಹೆಚ್ಚಿತ್ತು. ಆದರೆ, ಶಕೀಬ್ ತಮ್ಮ ಶಾಲೆಯಲ್ಲಿ ಕ್ರಿಕೆಟ್ ಆಡುತ್ತಿದ್ದರು. ಅವರ ಆಟವನ್ನು ನೋಡಿದ ಅನೇಕರು ಅಕ್ಕಪಕ್ಕದ ಗ್ರಾಮಗಳಲ್ಲಿ ನಡೆಯುತ್ತಿದ್ದ ಟೂರ್ನಿಗಳಲ್ಲಿ ಆಡಲು ತಮ್ಮ ತಂಡಗಳಿಗೆ ಆಹ್ವಾನಿಸುತ್ತಿದ್ದರು. ಟೆನಿಸ್ ಬಾಲ್‌ನಲ್ಲಿ ‍ಮಧ್ಯಮವೇಗದ ಬೌಲಿಂಗ್ ಮಾಡುತ್ತಿದ್ದ ಹುಡುಗನನ್ನು ಬಾಂಗ್ಲಾ ಕ್ರಿಕೆಟ್ ಸಂಸ್ಥೆಯ ಅಂಪೈರ್ ಒಬ್ಬರು ನೋಡಿದರು.

ಜೂನಿಯರ್ ತಂಡಕ್ಕೆ ಸೇರ್ಪಡೆ ಮಾಡಿಸಿದರು. 16ನೇ ವಯಸ್ಸಿನಲ್ಲಿ ಮೊಟ್ಟಮೊದಲ ಸಲ ಶಕೀಬ್ ಕ್ರಿಕೆಟ್ ಲೆದರ್ ಬಾಲ್ ನಲ್ಲಿ ಆಡಿದರು. 2006ರಲ್ಲಿ ರಾಷ್ಟ್ರೀಯ ಏಕದಿನ ತಂಡದಲ್ಲಿ ಸ್ಥಾನ ಪಡೆದರು. ಅಲ್ಲಿಂದ ಮುಂದೆ ಅವರು ಬೆಳೆದು ನಿಂತಿದ್ದು ಬಾಂಗ್ಲಾ ಸ್ಟಾರ್ ಆಗಿ. ಇಂಗ್ಲಿಷ್ ಕೌಂಟಿ ಆಡಿದ ಬಾಂಗ್ಲಾದ ಮೊದಲ ಆಟಗಾರನಾದರು. ಟಿವಿಯಲ್ಲಿ ಸುಪ್ರಸಿದ್ಧ ಜಾಹೀರಾತುಗಳ ಮೊದಲ ಕ್ರಿಕೆಟ್ ತಾರೆಯಾದರು. ಐಸಿಸಿ ಆಲ್‌ರೌಂಡರ್ ಆದ ಮೊದಲ ಬಾಂಗ್ಲಾ ಬಾಬು ಅವರು. ಕೆಲ ಕಾಲ ತಂಡದ ನಾಯಕತ್ವವನ್ನೂ ವಹಿಸಿದ್ದರು. ಆದರೆ ಯಾವತ್ತೂ ತಮ್ಮ ಆಟದಿಂದ ವಿಮುಖರಾಗಲಿಲ್ಲ. ದಿನದಿಂದ ದಿನಕ್ಕೆ ಬೆಳೆದರು.

ಈಗ ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯಲ್ಲಿ ಅವರ ಅಮೋಘ ಆಟಕ್ಕೆ ಕ್ರಿಕೆಟ್ ದಿಗ್ಗಜರೆಲ್ಲ ಶಹಬ್ಬಾಸ್‌ಗಿರಿ ನೀಡುತ್ತಿದ್ದಾರೆ. ಕೇವಲ ಐದು ಪಂದ್ಯಗಳಲ್ಲಿಯೇ ಅವರು ನಾಲ್ಕನೂರು ರನ್‌ಗಳನ್ನು ಸೂರೆ ಮಾಡಿದ್ದಾರೆ. ಅದರಲ್ಲಿ ಎರಡು ಅಮೋಘ ಶತಕಗಳು ಮತ್ತು ಎರಡು ಅರ್ಧಶತಕಗಳು ಇವೆ. ಎಡಗೈ ಆಲ್‌ರೌಂಡರ್ ತಮ್ಮ ಸ್ಪಿನ್ ಬೌಲಿಂಗ್ ಮೂಲಕ ಐದು ವಿಕೆಟ್ ಕೂಡ ಕಬಳಿಸಿದ್ದಾರೆ. 2011ರಲ್ಲಿ ಭಾರತದ ಎಡಗೈ ಆಲ್‌ರೌಂಡರ್‌ ಯುವರಾಜ್ ಸಿಂಗ್ ಅವರು ಆಡಿದ ರೀತಿಯಲ್ಲಿಯೇ ಈ ಬಾರಿ ಶಕೀಬ್ ಗಮನ ಸೆಳೆಯುತ್ತಿದ್ದಾರೆ.

ಭಾರತದ ರೋಹಿತ್ ಶರ್ಮಾ, ಆಸ್ಟ್ರೇಲಿಯಾದ ಡೇವಿಡ್ ವಾರ್ನರ್, ಇಂಗ್ಲೆಂಡ್‌ನ ಜೋ ರೂಟ್ ಅವರು ಈ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಎರಡ್ಮೂರು ಶತಕಗಳನ್ನು ಹೊಡೆಯುವ ನಿರೀಕ್ಷೆ ಬಹಳಷ್ಟು ಜನರಿಗೆ ಇತ್ತು. ಅದಕ್ಕೆ ತಕ್ಕಂತೆ ಅವರೆಲ್ಲ ಈಗಾಗಲೇ ತಲಾ ಎರಡು ಶತಕ ಹೊಡೆದಿದ್ದಾರೆ. ಈ ಸಾಲಿಗೆ ಶಕೀಬ್ ಕೂಡ ಸೇರಿದ್ದಾರೆ.

ಐದು ಅಥವಾ ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬರುತ್ತಿದ್ದ ಅವರು ತಮ್ಮ ಕೋಚ್ ಮತ್ತು ನಾಯಕನ ಮನವೊಲಿಸಿ ಮೂರನೇ ಕ್ರಮಾಂಕಕ್ಕೆ ಬಡ್ತಿ ಪಡೆದುಕೊಂಡರು. ತಂಡದ ವಿಶ್ವಾಸವನ್ನೂ ಉಳಿಸಿಕೊಂಡರು. ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ಎದುರು ಅವರು ದಾಖಲಿಸಿದ ಶತಕಗಳು ಬಹುಕಾಲ ನೆನಪಿನಲ್ಲಿ ಉಳಿಯುವಂತಹವು. ಏಕೆಂದರೆ ಎರಡೂ ತಂಡಗಳ ಅನುಭವಿ ಮತ್ತು ಬಲಾಢ್ಯ ಬೌಲರ್‌ಗಳ ಎದುರು ಅವರು ಈ ಸಾಧನೆ ಮಾಡಿದ್ದು ವಿಶೇಷ.

ಅವರ ಆಟದ ಪ್ರೇರಣೆಯೋ ಏನೋ ಗೋತ್ತಿಲ್ಲ. ಇಡೀ ಬಾಂಗ್ಲಾ ತಂಡದ ಆಟಗಾರರು ಆತ್ಮವಿಶ್ವಾಸದ ಉತ್ತುಂಗದಲ್ಲಿ ತೇಲುತ್ತಿದ್ದಾರೆ. ಯಾವ ತಂಡಕ್ಕೂ ಇದುವರೆಗೆ ಸುಲಭದ ತುತ್ತಾಗಿಲ್ಲ. ಗುರುವಾರ ರಾತ್ರಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡವು 381 ರನ್‌ಗಳ ಬೃಹತ್ ಗುರಿಯನ್ನು ನೀಡಿಯೂ ಪರದಾಡುವಂತಾಯಿತು. ಆ ಪಂದ್ಯದಲ್ಲಿ ಶಕೀಬ್ ಕೇವಲ 41 ರನ್ ಗಳಿಸಿ ಔಟಾದರು. ಆದರೆ, ಮುಷ್ಪೀಕ್ ಉರ್ ರೆಹಮಾನ್ ಶತಕ ದಾಖಲಿಸಿ ಮಿಂಚಿದರು. ಇದರಿಂದಾಗಿ ತಂಡವು 333 ರನ್‌ಗಳನ್ನು ಗಳಿಸಿ ವಿರೋಚಿತ ಸೋಲು ಅನುಭವಿಸಿತು.

ಶಕೀಬ್–ಶಿಶಿರ್ ಪ್ರೇಮಕಥೆ

ಬಾಂಗ್ಲಾ ಕ್ರಿಕೆಟ್ ವಲಯದಲ್ಲಿ ಶಕೀಬ್ ಮತ್ತು ಉಮ್ಮೇ ಅಹಮದ್ ಶಿಶಿರ್ ಅವರ ಪ್ರೇಮಕಹಾನಿಯೂ ಸುಪ್ರಸಿದ್ಧವಾಗಿದೆ. ರೂಪದರ್ಶಿ ಮತ್ತು ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಶಿಶಿರ್ ಅವರನ್ನು 2010ರಲ್ಲಿ ಶಕೀಬ್ ಇಂಗ್ಲೆಂಡ್‌ನಲ್ಲಿ ಭೇಟಿಯಾಗಿದ್ದರು. ಶಕೀಬ್ ಅಲ್ಲಿ ಕೌಂಟಿ ಆಡಲು ಹೋಗಿದ್ದರು. ಬಾಂಗ್ಲಾ ಮೂಲದ ಶಿಶಿರ್ ಅವರು ಅಮೆರಿಕದಲ್ಲಿದ್ದರು. ಅವರು ಇಂಗ್ಲೆಂಡ್‌ಗೆ ಉನ್ನತ ವ್ಯಾಸಂಗಕ್ಕೆ ಬಂದಿದ್ದರು. ಶಕೀಬ್ ಆಟಕ್ಕೆ ಶಿಶಿರ್ ಮನಸೋತಿದ್ದರು. 2015ರಲ್ಲಿ ಇಬ್ಬರೂ ಮದುವೆಯಾದರು. ಅಲ್ಲಿಯವರೆಗೂ ಅವರ ಪ್ರೇಮಕಥೆಯು ಗುಪ್ತಗಾಮಿನಿಯಾಗಿತ್ತು. ಅವರಿಗೆ ಈಗ ಮಗಳಿದ್ದಾರೆ.

ದಂಪತಿಯು ಈಗ ಬಾಂಗ್ಲಾ ಟಿವಿ ಚಾನೆಲ್‌ಗಳ ಕಣ್ಮಣಿಯಾಗಿದ್ದಾರೆ. ಬಹುತೇಕ ಜಾಹೀರಾತುಗಳಲ್ಲಿ ಮಿಂಚುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.