ADVERTISEMENT

India vs Australia| ಮಯಂಕ್ ಅಗರವಾಲ್‌ಗೆ ವಿಶ್ರಾಂತಿ; ರೋಹಿತ್‌ಗೆ ಅವಕಾಶ

ನವದೀಪ್ ಸೈನಿ–ಶಾರ್ದೂಲ್ ಠಾಕೂರ್ ಅವರಲ್ಲಿ ಒಬ್ಬರು ಕಣಕ್ಕಿಳಿಯುವ ಸಾಧ್ಯತೆ

ಪಿಟಿಐ
Published 5 ಜನವರಿ 2021, 22:12 IST
Last Updated 5 ಜನವರಿ 2021, 22:12 IST
ರೋಹಿತ್‌ ಶರ್ಮಾ ಮತ್ತು ಮಯಾಂಕ್‌ ಅಗರ‌ವಾಲ್‌
ರೋಹಿತ್‌ ಶರ್ಮಾ ಮತ್ತು ಮಯಾಂಕ್‌ ಅಗರ‌ವಾಲ್‌    

ಸಿಡ್ನಿ: ಬಾರ್ಡರ್‌–ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ ಕನ್ನಡಿಗ ಮಯಂಕ್ ಅಗರವಾಲ್ ಮೂರನೇ ಟೆಸ್ಟ್‌ನಲ್ಲಿ ಬೆಂಚ್ ಕಾಯುವುದು ಬಹುತೇಕ ಖಚಿತವಾಗಿದೆ.

ಗಾಯಕ್ಕೆ ಚಿಕಿತ್ಸೆ ಮತ್ತು ಕ್ವಾರಂಟೈನ್ ಮಗಿಸಿ, ತಂಡಕ್ಕೆ ಮರಳಿರುವ ರೋಹಿತ್ ಶರ್ಮಾ ಇದೇ 7ರಂದು ಆರಂಭವಾಗುವ ಪಂದ್ಯದಲ್ಲಿ ಶುಭಮನ್ ಗಿಲ್‌ ಜೊತೆಗೆ ಇನಿಂಗ್ಸ್‌ ಆರಂಭಿಸಲು ಸಿದ್ಧರಾಗಿದ್ದಾರೆ. ಮಯಂಕ್ ಅವರು ತಾವು ಆಡಿದ ಕಳೆದ ಎಂಟು ಇನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದಾರೆ.

ಬೌಲಿಂಗ್‌ ವಿಭಾಗದಲ್ಲಿ ಉಮೇಶ್ ಯಾದವ್ ಅವರು ಅಲಭ್ಯರಾಗಿದ್ದಾರೆ. ಆದ್ದರಿಂದ ಒಂದು ಟೆಸ್ಟ್ ಆಡಿರುವ ಅನುಭವಿ ಶಾರ್ದೂಲ್ ಠಾಕೂರ್ ಅಥವಾ ಟೆಸ್ಟ್ ಪದಾರ್ಪಣೆಯ ನಿರೀಕ್ಷೆಯಲ್ಲಿರುವ ನವದೀಪ್ ಸೈನಿ ಅವರಲ್ಲಿ ಒಬ್ಬರಿಗೆ ಅವಕಾಶ ಕೊಡುವತ್ತ ಚಿಂತನೆ ನಡೆದಿದೆ.

ADVERTISEMENT

ಶಾರ್ದೂಲ್ ಮಧ್ಯಮವೇಗದ ಬೌಲಿಂಗ್ ಜೊತೆಗೆ ಕೆಳಕ್ರಮಾಂಕದಲ್ಲಿ ಉತ್ತಮವಾಗಿ ಬ್ಯಾಟಿಂಗ್ ಕೂಡ ಮಾಡಬಲ್ಲರು. ಅದರೂ ಸಿಡ್ನಿ ಪಿಚ್‌ನಲ್ಲಿ ವೇಗದ ಬೌಲಿಂಗ್ ಮಾಡಲು ಸೈನಿ ಸೂಕ್ತ ವ್ಯಕ್ತಿ ಎಂಬ ಅಭಿಪ್ರಾಯವೂ ಇದೆ. ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ಗಳು ದೊಡ್ಡ ಜತೆಯಾಟಗಳನ್ನು ಆಡದಂತೆ ತಡೆಯಬಲ್ಲ ಸಮರ್ಥರೂ ಸೈನಿ ಆಗಿದ್ದಾರೆಂದು ಹೇಳಲಾಗುತ್ತಿದೆ.

ಮಂಗಳವಾರ ಸಿಡ್ನಿ ಕ್ರಿಕೆಟ್ ಅಂಗಳದಲ್ಲಿ ನಡೆದ ಅಭ್ಯಾಸದಲ್ಲಿ ಇಬ್ಬರೂ ಬೌಲರ್‌ಗಳು ಹೆಚ್ಚು ಹೊತ್ತು ತಾಲೀಮು ಮಾಡಿದರು. ಇನ್ನೊಂದೆಡೆ ನೆಟ್ಸ್‌ನಲ್ಲಿ ರೋಹಿತ್ ಶರ್ಮಾ ವೇಗದ ಮತ್ತು ಸ್ಪಿನ್‌ ಬೌಲರ್‌ಗಳನ್ನು ಆತ್ಮವಿಶ್ವಾಸದಿಂದ ಎದುರಿಸಿದರು.

ಬುಧವಾರ ಪಿಚ್‌ ಪರಿಶೀಲಿಸಿದ ನಂತರ ನಾಯಕ ಅಜಿಂಕ್ಯ ರಹಾನೆ ಅವರು ಹನ್ನೊಂದರ ಬಳಗವನ್ನು ಅಂತಿಮ ಗೊಳಿಸಲಿದ್ದಾರೆ.

ಇನ್ನೊಂದೆಡೆ ತಮಿಳುನಾಡಿನ ಮಧ್ಯಮವೇಗಿ ತಂಗರಸು ನಟರಾಜನ್ ಅವರ ಹೆಸರು ಕೂಡ ಕೇಳಿಬರುತ್ತಿದೆ. ಸೀಮಿತ ಓವರ್‌ಗಳ ಸರಣಿಯಲ್ಲಿ ಅವರು ಚೆನ್ನಾಗಿ ಆಡಿದ್ದಾರೆ. 20 ಪ್ರಥಮ ದರ್ಜೆ ಪಂದ್ಯಗಳಲ್ಲಿ ಆಡಿರುವ ಅನುಭವಿ ನಟರಾಜನ್ ಟೆಸ್ಟ್‌ ಮಾದರಿಗೂ ಪದಾರ್ಪಣೆ ಮಾಡುವ ಸಾಧ್ಯತೆ ಕೂಡ ಇದೆ.

ಸಂಭವನೀಯ ತಂಡ: ಅಜಿಂಕ್ಯ ರಹಾನೆ (ನಾಯಕ), ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಚೇತೇಶ್ವರ್ ಪೂಜಾರ, ಹನುಮವಿಹಾರಿ, ರಿಷಭ್ ಪಂತ್ (ವಿಕೆಟ್‌ಕೀಪರ್), ರವೀಂದ್ರ ಜಡೇಜ, ಆರ್. ಅಶ್ವಿನ್, ಮೊಹಮ್ಮದ್ ಸಿರಾಜ್, ಜಸ್‌ಪ್ರೀತ್ ಬೂಮ್ರಾ, ಶಾರ್ದೂಲ್ ಠಾಕೂರ್, ನವದೀಪ್ ಸೈನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.