ADVERTISEMENT

ಶ್ರೀಲಂಕಾ ಪ್ರವಾಸ| ಭಾರತ ತಂಡಕ್ಕೆ ದೇವದತ್ತ: ಧವನ್‌ಗೆ ನಾಯಕತ್ವ

ಸೀಮಿತ ಓವರ್‌ಗಳ ಸರಣಿಯಲ್ಲಿ ತಂಡವನ್ನು ಮುನ್ನಡೆಸಲಿರುವ ಶಿಖರ್ ಧವನ್; ಮನೀಷ್ ಪಾಂಡೆ, ಗೌತಮ್‌ಗೂ ಸ್ಥಾನ

​ಪ್ರಜಾವಾಣಿ ವಾರ್ತೆ
Published 11 ಜೂನ್ 2021, 1:58 IST
Last Updated 11 ಜೂನ್ 2021, 1:58 IST
ದೇವದತ್ತ ಪಡಿಕ್ಕಲ್
ದೇವದತ್ತ ಪಡಿಕ್ಕಲ್   

ಬೆಂಗಳೂರು: ಕರ್ನಾಟಕದ ಯುವ ಬ್ಯಾಟ್ಸ್‌ಮನ್ ದೇವದತ್ತ ಪಡಿಕ್ಕಲ್ ಮತ್ತು ಆಲ್‌ರೌಂಡರ್ ಕೃಷ್ಣಪ್ಪ ಗೌತಮ್ ಶ್ರೀಲಂಕಾ ಪ್ರವಾಸ ಮಾಡಲಿರುವ ಭಾರತ ಸೀಮಿತ ಓವರ್‌ಗಳ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇವರಿಬ್ಬರೂ ಇದೇ ಮೊದಲ ಸಲ ರಾಷ್ಟ್ರೀಯ ತಂಡದಲ್ಲಿ ಆಡುವ ಅವಕಾಶ ಪಡೆದುಕೊಂಡಿದ್ದಾರೆ.

ತಂಡದಲ್ಲಿ ಕರ್ನಾಟಕದ ಅನುಭವಿ ಆಟಗಾರ ಮನೀಷ್ ಪಾಂಡೆ ಕೂಡ ಸ್ಥಾನ ಗಿಟ್ಟಿಸಿದ್ದಾರೆ. ಈ ತಂಡಕ್ಕೆ ಅನುಭವಿ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಅವರನ್ನು ನಾಯಕರನ್ನಾಗಿ ನೇಮಕ ಮಾಡಲಾಗಿದೆ.

ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡವು ಇಂಗ್ಲೆಂಡ್‌ನಲ್ಲಿ ಜೂನ್ 18ರಂದು ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ಆಡಲು ತೆರಳಿದೆ. ಜುಲೈನಲ್ಲಿ ವಿರಾಟ್ ಬಳಗವು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿಯೂ ಆಡಲಿದೆ.

ADVERTISEMENT

ಆದರೆ ಜುಲೈ 13ರಿಂದ ಶ್ರೀಲಂಕಾದಲ್ಲಿ ನಡೆಯಲಿರುವ ಏಕದಿನ ಮತ್ತು ಟಿ20 ಸರಣಿಗಳಿಗೆ ಭಾರತದ ಎರಡನೇ ತಂಡವನ್ನು ಆಯ್ಕೆ ಮಾಡಿ ಕಳಿಸಲಾಗುತ್ತಿದೆ. ಇದೇ ಮೊದಲ ಬಾರಿಗೆ ಭಾರತದ ಎರಡು ತಂಡಗಳು ಬೇರೆ ಬೇರೆ ದೇಶಗಳಲ್ಲಿ ನಡೆಯಲಿರುವ ಸರಣಿಗಳಲ್ಲಿ ಆಡುತ್ತಿರುವುದು ವಿಶೇಷ.

ತಂಡ ಇಂತಿದೆ: ಶಿಖರ್ ಧವನ್ (ನಾಯಕ),ಭುವನೇಶ್ವರ್ ಕುಮಾರ್(ಉಪನಾಯಕ), ಪೃಥ್ವಿ ಶಾ, ದೇವದತ್ತ ಪಡಿಕ್ಕಲ್, ಋತುರಾಜ್ ಗಾಯಕವಾಡ್, ಸೂರ್ಯಕುಮಾರ್ ಯಾದವ್, ಮನೀಷ್ ಪಾಂಡೆ, ಹಾರ್ದಿಕ್ ಪಾಂಡ್ಯ, ನಿತೀಶ್ ರಾಣಾ, ಇಶಾನ್ ಕಿಶನ್ (ವಿಕೆಟ್‌ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್‌ಕೀಪರ್), ಯಜುವೇಂದ್ರ ಚಾಹಲ್, ರಾಹುಲ್ ಚಾಹರ್, ಕೆ. ಗೌತಮ್, ಕೃಣಾಲ್ ಪಾಂಡ್ಯ, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ದೀಪಕ್ ಚಾಹರ್, ನವದೀಪ್ ಸೈನಿ, ಚೇತನ್ ಸಕಾರಿಯಾ.

ನೆಟ್ ಬೌಲರ್ಸ್‌: ಇಶಾನ್ ಪೊರೆಲ್, ಸಂದೀಪ್ ವರಿಯರ್, ಆರ್ಷದೀಪ್ ಸಿಂಗ್, ಸಾಯಿಕಿಶೋರ್, ಸಿಮ್ರಜೀತ್ ಸಿಂಗ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.