ADVERTISEMENT

ಶಿಖರ್ ಧವನ್‌ ಔಟ್; ರಿಷಭ್ ಪಂತ್‌ ಇನ್

​ಪ್ರಜಾವಾಣಿ ವಾರ್ತೆ
Published 19 ಜೂನ್ 2019, 19:40 IST
Last Updated 19 ಜೂನ್ 2019, 19:40 IST
ಶಿಖರ್ ಧವನ್   –ಎಎಫ್‌ಪಿ ಚಿತ್ರ  (ಒಳಚಿತ್ರದಲ್ಲಿ ಯುವ ವಿಕೆಟ್‌ಕೀಪರ್ ರಿಷಭ್ ಪಂತ್ ಅವರಿಗೆ ಸಲಹೆ ನೀಡುತ್ತಿರುವ ಮಹೇಂದ್ರಸಿಂಗ್ ಧೋನಿ –ಎಪಿ/ಪಿಟಿಐ ಚಿತ್ರ)
ಶಿಖರ್ ಧವನ್   –ಎಎಫ್‌ಪಿ ಚಿತ್ರ (ಒಳಚಿತ್ರದಲ್ಲಿ ಯುವ ವಿಕೆಟ್‌ಕೀಪರ್ ರಿಷಭ್ ಪಂತ್ ಅವರಿಗೆ ಸಲಹೆ ನೀಡುತ್ತಿರುವ ಮಹೇಂದ್ರಸಿಂಗ್ ಧೋನಿ –ಎಪಿ/ಪಿಟಿಐ ಚಿತ್ರ)   

ಸೌತಾಂಪ್ಟನ್: ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಅವರು ಗಾಯದಿಂದ ಚೇತರಿಸಿಕೊಳ್ಳದ ಕಾರಣ ಇಡೀ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಅವರ ಬದಲಿಗೆ ದೆಹಲಿಯ ವಿಕೆಟ್‌ಕೀಪರ್–ಬ್ಯಾಟ್ಸ್‌ಮನ್ ರಿಷಭ್ ಪಂತ್ ಸ್ಥಾನ ಪಡೆದಿದ್ದಾರೆ.

ಆಸ್ಟ್ರೇಲಿಯಾ ಎದುರಿನ ಪಂದ್ಯದಲ್ಲಿ ಶತಕ ಬಾರಿಸಿದ್ದ ಅವರ ಎಡಗೈ ಹೆಬ್ಬೆರಳಿಗೆ ಗಾಯವಾಗಿತ್ತು. ಆದ್ದರಿಂದ ಅವರಿಗೆ ಮೂರು ಪಂದ್ಯಗಳಿಗೆ ವಿಶ್ರಾಂತಿ ನೀಡಲಾಗಿತ್ತು. ಆದ್ದರಿಂದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅವರು ಕಣಕ್ಕಿಳಿದಿರಲಿಲ್ಲ. ಮುಂಬರುವ ಅಫ್ಗಾನಿಸ್ತಾನ (ಜೂನ್ 22) ಮತ್ತು ವೆಸ್ಟ್ ಇಂಡೀಸ್ (ಜೂನ್ 27) ಪಂದ್ಯಗಳಲ್ಲಿಯೂ ಅವರಿಗೆ ಆಡುವಂತಿರಲಿಲ್ಲ. ಆದರೆ ಬುಧವಾರ ಅವರ ಗಾಯದ ತಪಾಸಣೆ ನಡೆಸಿದ ವೈದ್ಯರು ದೀರ್ಘ ಕಾಲದ ವಿಶ್ರಾಂತಿಗೆ ಸಲಹೆ ನೀಡಿದ್ದಾರೆನ್ನಲಾಗಿದೆ.

‘ಜೂನ್ 30ರಂದು ನಡೆಯುವ ಇಂಗ್ಲೆಂಡ್ ವಿರುದ್ದದ ಪಂದ್ಯಕ್ಕೂ ಧವನ್ ಚೇತರಿಸಿಕೊಳ್ಳುವ ಸಾಧ್ಯತೆ ಕಡಿಮೆ ಇದೆ’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ADVERTISEMENT

ಮ್ಯಾಂಚೆಸ್ಟರ್‌ನಲ್ಲಿ ನಡೆದಿದ್ದ ಪಾಕ್ ವಿರುದ್ಧದ ಪಂದ್ಯದ ಸಂದರ್ಭದಲ್ಲಿಯೇ ರಿಷಭ್ ಪಂತ್ ಅವರನ್ನು ಕರೆಸಲಾಗಿತ್ತು. ಆದರೆ ಅವರು ತಂಡದೊಂದಿಗೆ ಇರಲಿಲ್ಲ. ಇದೀಗ ಅವರು ಸೇರ್ಪಡೆಯಾಗಿದ್ದಾರೆ. 21 ವರ್ಷದ ಪಂತ್ ಅವರು ಈಚೆಗೆ ಇಂಗ್ಲೆಂಡ್‌ ಪ್ರವಾಸದಲ್ಲಿ ನಡೆದಿದ್ದ ಟೆಸ್ಟ್ ಸರಣಿಗಳಲ್ಲಿ ಶತಕ ಗಳಿಸಿದ್ದರು. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿಯೂ ಮಿಂಚಿದ್ದರು.ಶಿಖರ್ ಗಾಯಗೊಂಡಾಗ ಅವರ ಬದಲಿಗೆ ರಿಷಭ್‌ಗೆ ಅವಕಾಶ ಕೊಡಬೇಕು ಎಂದು ಹಿರಿಯ ಕ್ರಿಕೆಟಿಗರಾದ ಸುನಿಲ್ ಗಾವಸ್ಕರ್ ಸಲಹೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.