ADVERTISEMENT

ವೇಗದ ಬೌಲರ್‌ಗಳನ್ನು ಎದುರಿಸುವುದು ಸುಲಭ ಎಂದ ಕೈಫ್ ಮಗನಿಗೆ ಸವಾಲೆಸೆದ ಅಖ್ತರ್

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2020, 10:45 IST
Last Updated 9 ಏಪ್ರಿಲ್ 2020, 10:45 IST
ಶೋಯಬ್‌ ಅಖ್ತರ್‌
ಶೋಯಬ್‌ ಅಖ್ತರ್‌    

ಜಾಗತಿಕ ಪಿಡುಗು ಕೋವಿಡ್‌–19 ಭೀತಿಯಿಂದಾಗಿ ಜಗತ್ತಿನ ಹಲವು ದೇಶಗಳು ಲಾಕ್‌ಡೌನ್‌ ಘೋಷಿಸಿದ್ದು, ಕ್ರೀಡಾ ಚಟುವಟಿಕೆಗಳಿಗೆ ಬ್ರೇಕ್‌ ಬಿದ್ದಿದೆ. ಹೀಗಾಗಿ ಕ್ರೀಡಾ ವಾಹಿನಿಗಳು ಹಳೇ ಪಂದ್ಯಗಳನ್ನೇ ಮತ್ತೆಮತ್ತೆ ಪ್ರಸಾರ ಮಾಡುತ್ತಿವೆ. ಅದರಂತೆ 2003ರ ಏಕದನ ಕ್ರಿಕೆಟ್ ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ನಡೆದ ಪಂದ್ಯವನ್ನು ಸ್ಟಾರ್‌ಸ್ಪೋರ್ಟ್ಸ್‌ ವಾಹಿನಿ ಇತ್ತೀಚೆಗೆ ಪ್ರಸಾರ ಮಾಡಿತ್ತು.

ಈ ಪಂದ್ಯದಲ್ಲಿಭಾರತ ಪರ ಆಡಿದ್ದ ಮೊಹಮದ್‌ ಕೈಫ್‌ ಬ್ಯಾಟಿಂಗ್ ನಡೆಸುತ್ತಿದ್ದ ವೇಳೆ ಅವರ ಮಗ ಮೊಹಮದ್‌ ಕಬೀರ್‌, ‘ಚೆಂಡು ವೇಗವಾಗಿ ಬಂದರೆ ಸುಲಭವಾಗಿ ಆಡಬಹುದು’ಎಂದಿದ್ದಾರೆ. ಈ ವಿಡಿಯೊವನ್ನು ಕೈಫ್‌ ತಮ್ಮ ಟ್ವಿಟರ್‌ ಪುಟದಲ್ಲಿ ಹಂಚಿಕೊಂಡಿದ್ದಾರೆ.

‘ಸ್ಟಾರ್‌ಸ್ಪೋರ್ಟ್ಸ್‌ ಇಂಡಿಯಾದವರಿಗೆ ಧನ್ಯವಾದಗಳು. ಭಾರತ–ಪಾಕಿಸ್ತಾನ ಐತಿಹಾಸಿಕ ಪಂದ್ಯದ ಮರುಪ್ರಸಾರವನ್ನು ನೊಡುವ ಅವಕಾಶವನ್ನು ಕಬೀರ್ ಕೊನೆಗೂ ಪಡೆದುಕೊಂಡ. ಆದರೆ, ಜೂನಿಯರ್‌ (ಕಬೀರ್‌) ತನ್ನ ತಂದೆಯ ಆಟದಿಂದ ಅಷ್ಟೇನೂ ಪ್ರಭಾವಿತನಾಗಿಲ್ಲ. ಬದಲಾಗಿ ಶೊಯಬ್‌ ಅಖ್ತರ್‌ ವೇಗವಾಗಿ ಬೌಲಿಂಗ್‌ ಮಾಡುವುದರಿಂದ ಸುಲಭವಾಗಿ ಎದುರಿಸಬಹುದು ಎನ್ನುತ್ತಾನೆ. ಅಯ್ಯೋ!!’ ಎಂದು ಬರೆದುಕೊಂಡು ಮಗ ಮಾತನಾಡಿರುವ ವಿಡಿಯೊವನ್ನು ಹಂಚಿಕೊಂಡಿದ್ದಾರೆ.

ADVERTISEMENT

ವೇಗದ ಬೌಲರ್‌ಗಳನ್ನು ಎದುರಿಸುವುದು ತುಂಬಾ ಸುಲಭ. ಚೆಂಡು ವೇಗವಾಗಿ ಬರುವುದರಿಂದ ಸುಲಭವಾಗಿ ಬೌಂಡರಿಯಾಚೆಗೆ ಹೊಡೆಯಬಹುದು ಎಂಬುದು ಕೈಫ್‌ ಮಗನ ನಂಬಿಕೆ.

ಕೈಫ್‌ ವಿಡಿಯೊಗೆ ಪ್ರತಿಕ್ರಿಯಿಸಿರುವ ಅಖ್ತರ್‌, ಕಬೀರ್‌ ಮತ್ತು ಮೈಕಲ್‌ ಅಲಿ ಅಖ್ತರ್‌ (ಶೋಯಬ್‌ ಅಖ್ತರ್‌ ಮಗ) ನಡುವೆ ಪಂದ್ಯ ನಡೆಯಲಿ. ಆಗ ಕಬೀರ್‌, ವೇಗದ ಬೌಲಿಂಗ್‌ ಬಗ್ಗೆ ಉತ್ತರ ಪಡೆದುಕೊಳ್ಳುತ್ತಾನೆ. ಆಹಾ ಕಬೀರ್‌ಗೆ ನನ್ನ ಪ್ರೀತಿಯನ್ನು ತೋರಿಸು ಎಂದು ತಮಾಷೆಯಾಗಿ ಸವಾಲು ಹಾಕಿದ್ದಾರೆ.

ಪ್ರತಿಗಂಟೆಗೆ 150ರ ವೇಗದಲ್ಲಿ ಬೌಲಿಂಗ್ ಮಾಡುತ್ತಿದ್ದ ಶೋಯಬ್‌ ಅಖ್ತರ್‌ ಅವರನ್ನು ಎದುರಿಸುವುದು ಸುಲಭವಲ್ಲ ಎಂಬುದು ವಿಶ್ವದ ಹಲವು ಬ್ಯಾಟ್ಸ್‌ಮನ್‌ಗಳ ಅಭಿಪ್ರಾಯ.

2003ರಲ್ಲಿ ಭಾರತಕ್ಕೆ 6 ವಿಕೆಟ್‌ ಜಯ
ವಿಶ್ವಕಪ್‌ ಟೂರ್ನಿಯ 36ನೇ ಲೀಗ್‌ ಪಂದ್ಯವದು. ದಕ್ಷಿಣ ಆಫ್ರಿಕಾದ ಸೆಂಚೂರಿಯನ್‌ನಲ್ಲಿ ನಡೆದ ಆ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ್ದ ಭಾರತ 273 ರನ್‌ ಗಳಿಸಿತ್ತು. ಈ ಮೊತ್ತ ಬೆನ್ನಟ್ಟಿದ್ದ ಭಾರತ ಸಚಿನ್‌ ತೆಂಡೂಲ್ಕರ್‌ ಉತ್ತಮ ಬ್ಯಾಟಿಂಗ್ ಮಾಡಿದ್ದರು. ಅವರು 98 ರನ್‌ ಗಳಿಸಿದ್ದ ವೇಳೆ ಅಖ್ತರ್‌ ಬೌಲಿಂಗ್‌ನಲ್ಲಿ ಔಟಾಗಿದ್ದರು.

ಸಚಿನ್‌ ಜೊತೆ ಇನಿಂಗ್ಸ್‌ ಆರಂಭಿಸಿದ್ದ ವೀರೇಂದ್ರ ಸೆಹ್ವಾಗ್‌ 21 ರನ್‌ ಗಳಿಸಿದರೆ, ನಾಯಕ ಸೌರವ್‌ ಗಂಗೂಲಿ ಸೊನ್ನೆ ಸುತ್ತಿದ್ದರು. ನಾಲ್ಕನೇ ಕ್ರಮಾಂಕದಲ್ಲಿ ಆಡಿದ್ದ ಕೈಫ್‌ 60 ಎಸೆತಗಳಲ್ಲಿ 35 ರನ್‌ ಗಳಿಸಿ ಪೆವಿಲಿಯನ್‌ ಸೇರಿಕೊಂಡಿದ್ದರು.

ಐದನೇ ವಿಕೆಟ್‌ಗೆ ಅಜೇಯ 99 ರನ್‌ ಸೇರಿಸಿದ ರಾಹುಲ್‌ ದ್ರಾವಿಡ್‌ (44) ಮತ್ತು ಯುವರಾಜ್‌ ಸಿಂಗ್‌ (50) ಇನ್ನೂ 38 ಎಸೆತಗಳು ಬಾಕಿ ಇರುವಂತೆಯೇ 276 ರನ್‌ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದ್ದರು.
ಈ ಪಂದ್ಯದಲ್ಲಿ ತಮ್ಮ ಪಾಲಿನ ಹತ್ತೂ ಓವರ್‌ ಬೌಲಿಂಗ್ ಮಾಡಿದ್ದ ಅಖ್ತರ್‌ ಕೇವಲ 1 ವಿಕೆಟ್‌ ಪಡೆದು 72 ರನ್‌ ನೀಡಿ ತುಸು ದುಬಾರಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.