ADVERTISEMENT

ಅವಕಾಶ ಸಿಕ್ಕರೆ ಟೀಂ ಇಂಡಿಯಾ ಬೌಲಿಂಗ್‌ ಕೋಚ್‌ ಆಗುವೆ: ಮನದಾಸೆ ಬಿಚ್ಚಿಟ್ಟ ಅಖ್ತರ್

ಪಿಟಿಐ
Published 5 ಮೇ 2020, 16:22 IST
Last Updated 5 ಮೇ 2020, 16:22 IST
   

ನವದೆಹಲಿ: ‘ನನಗೆ ಭಾರತ ಕ್ರಿಕೆಟ್‌ ತಂಡದ ಬೌಲಿಂಗ್‌ ಕೋಚ್‌ ಆಗಿ ಕೆಲಸ ಮಾಡಲು ಆಸಕ್ತಿ ಇದೆ. ಅವಕಾಶ ಸಿಕ್ಕರೆ ಈ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುತ್ತೇನೆ.ಆಕ್ರಮಣಕಾರಿ ಹಾಗೂ ವೇಗದ ಬೌಲರ್‌ಗಳನ್ನು ಪ್ರವರ್ಧಮಾನಕ್ಕೆ ತರಲು ಶ್ರಮಿಸುತ್ತೇನೆ’ ಎಂದು ಪಾಕಿಸ್ತಾನದ ಹಿರಿಯ ಕ್ರಿಕೆಟಿಗ ಶೋಯಬ್‌ ಅಖ್ತರ್‌ ನುಡಿದಿದ್ದಾರೆ.

ಮಂಗಳವಾರ, ಸಂದರ್ಶನವೊಂದರಲ್ಲಿ ಅವರು ತಮ್ಮ ಮನದ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

‌‘ಹಲವು ವರ್ಷಗಳ ಕಾಲ ಕ್ರಿಕೆಟ್‌ ಆಡಿದ್ದೇನೆ. ಈ ಅವಧಿಯಲ್ಲಿ ಅನೇಕ ಹೊಸ ವಿಷಯಗಳನ್ನು ಕಲಿತಿದ್ದೇನೆ. ಹೀಗೆ ಕಲಿತಿರುವುದನ್ನು ಮತ್ತೊಬ್ಬರಿಗೆ ಹೇಳಿಕೊಡುವುದು ನನ್ನ ಧರ್ಮ. ಆ ಕೆಲಸವನ್ನು ಖಂಡಿತವಾಗಿಯೂ ಮಾಡುತ್ತೇನೆ’ ಎಂದಿದ್ದಾರೆ.

ADVERTISEMENT

‘ನನ್ನ ಅನುಭವವನ್ನು ಹೊಸ ಪೀಳಿಗೆಯ ಹುಡುಗರಿಗೆ ಧಾರೆ ಎರೆಯಬೇಕೆಂಬ ಆಸೆ ಇದೆ. ಆ ಆ ಮೂಲಕ ಎದುರಾಳಿ ಬ್ಯಾಟ್ಸ್‌ಮನ್‌ಗಳಲ್ಲಿ ನಡುಕ ಹುಟ್ಟಿಸಬಲ್ಲ ಬೌಲರ್‌ಗಳನ್ನು ರೂಪಿಸುವ ಕನಸು ಇದೆ. ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ (ಐಪಿಎಲ್‌) ಚೊಚ್ಚಲ ಆವೃತ್ತಿಯಲ್ಲಿ ಕೋಲ್ಕತ್ತ ನೈಟ್‌ರೈಡರ್ಸ್‌ (ಕೆಕೆಆರ್‌) ತಂಡದಲ್ಲಿ ಆಡಿದ್ದೆ. ಅವಕಾಶ ಸಿಕ್ಕರೆ ಕೆಕೆಆರ್‌ ಕೋಚ್‌ ಆಗಲೂ ಸಿದ್ಧನಿದ್ದೇನೆ’ ಎಂದು ಅಖ್ತರ್‌ ಹೇಳಿದ್ದಾರೆ.

‘ಸಚಿನ್‌ ತೆಂಡೂಲ್ಕರ್‌ ಅವರನ್ನು ಹಲವು ಸಲ ನೋಡಿದ್ದೆ. ಆದರೆ ಭಾರತದಲ್ಲಿ ಅವರಿಗೆ ಇಷ್ಟೊಂದು ದೊಡ್ಡ ಅಭಿಮಾನಿ ಬಳಗ ಇದೆ ಎಂಬುದು ತಿಳಿದೇ ಇರಲಿಲ್ಲ. 1998ರಲ್ಲಿ ಪಾಕಿಸ್ತಾನ ತಂಡವು ಭಾರತ ಪ್ರವಾಸ ಕೈಗೊಂಡಿತ್ತು. ಎರಡು ಪಂದ್ಯಗಳ ಟೆಸ್ಟ್‌ ಸರಣಿಯ ಮೊದಲ ಪಂದ್ಯ ಚೆನ್ನೈಯಲ್ಲಿ ನಿಗದಿಯಾಗಿತ್ತು.ಸಚಿನ್‌ ಅವರನ್ನು ಭಾರತದಲ್ಲಿ ‘ಕ್ರಿಕೆಟ್‌ ದೇವರು’ ಎಂದು ಕರೆಯುತ್ತಾರೆ ಎಂಬ ವಿಷಯ ನನಗೆ ಆಗಲೇ ಗೊತ್ತಾಗಿದ್ದು’ ಎಂದು ತಿಳಿಸಿದ್ದಾರೆ.

‘ನನ್ನ ಹಾಗೂ ಸಚಿನ್‌ ಅವರ ನಡುವೆ ಉತ್ತಮ ಬಾಂಧವ್ಯವಿದೆ. ಅವರು ನನಗೆ ಬಹಳ ಒಳ್ಳೆಯ ಸ್ನೇಹಿತ. 1998ರ ಪ್ರವಾಸದ ವೇಳೆ ನಾನು ಶರವೇಗದಲ್ಲಿ ಬೌಲಿಂಗ್‌ ಮಾಡುತ್ತಿದ್ದಾಗಲೆಲ್ಲಾ ಭಾರತದ ಪ್ರೇಕ್ಷಕರೂ ನನ್ನನ್ನು ಹುರಿದುಂಬಿಸುತ್ತಿದ್ದರು. ನನ್ನ ಜೊತೆ ಅವರೂ ಸಂಭ್ರಮಿಸುತ್ತಿದ್ದರು. ಭಾರತದಲ್ಲಿ ನನಗೆ ದೊಡ್ಡ ಅಭಿಮಾನಿ ಬಳಗವೇ ಇದೆ’ ಎಂದೂ ಅವರು ಹೇಳಿದ್ದಾರೆ.

44 ವರ್ಷ ವಯಸ್ಸಿನ ಶೋಯಬ್‌, ಪಾಕಿಸ್ತಾನದ ಪರ 46 ಟೆಸ್ಟ್‌, 163 ಏಕದಿನ ಹಾಗೂ 15 ಟ್ವೆಂಟಿ–20 ಪಂದ್ಯಗಳನ್ನಾಡಿದ್ದು, ಕ್ರಮವಾಗಿ 178, 247 ಹಾಗೂ 19 ವಿಕೆಟ್‌ಗಳನ್ನು ಉರುಳಿಸಿದ್ದಾರೆ. 2008ರ ಐಪಿಎಲ್‌ನಲ್ಲಿ ಮೂರು ಪಂದ್ಯ ಆಡಿದ್ದ ಅವರು ಐದು ವಿಕೆಟ್‌ ಕಬಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.