ADVERTISEMENT

Asia Cup | ಸೂರ್ಯಕುಮಾರ್ ಇನಿಂಗ್ಸ್ ಬಗ್ಗೆ ಹೇಳಲು ಪದಗಳು ಸಾಲುತ್ತಿಲ್ಲ: ರೋಹಿತ್

ಪಿಟಿಐ
Published 1 ಸೆಪ್ಟೆಂಬರ್ 2022, 4:28 IST
Last Updated 1 ಸೆಪ್ಟೆಂಬರ್ 2022, 4:28 IST
ಸೂರ್ಯಕುಮಾರ್‌ ಯಾದವ್‌ ಬ್ಯಾಟಿಂಗ್‌ ವೈಖರಿ (ಪಿಟಿಐ)
ಸೂರ್ಯಕುಮಾರ್‌ ಯಾದವ್‌ ಬ್ಯಾಟಿಂಗ್‌ ವೈಖರಿ (ಪಿಟಿಐ)   

ದುಬೈ: ಹಾಂಗ್‌ಕಾಂಗ್‌ ವಿರುದ್ಧದ ಟಿ20 ಕ್ರಿಕೆಟ್‌ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಸೂರ್ಯಕುಮಾರ್‌ ಯಾದವ್‌ ಅವರ ಆಟವನ್ನು ವಿವರಿಸಲು ಪದಗಳು ಸಾಲುತ್ತಿಲ್ಲ ಎಂದು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.

ಏಷ್ಯಾ ಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ 'ಎ' ಗುಂಪಿನಲ್ಲಿರುವ ಭಾರತ ಮತ್ತು ಹಾಂಗ್‌ಕಾಂಗ್‌ ತಂಡಗಳುಬುಧವಾರ ರಾತ್ರಿ ದುಬೈನಲ್ಲಿ ನಡೆದ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು.

ಈ ಪಂದ್ಯದಲ್ಲಿ ಟಾಸ್‌ ಗೆದ್ದ ಹಾಂಗ್‌ಕಾಂಗ್‌ ಬೌಲಿಂಗ್‌ ಆಯ್ದುಕೊಂಡಿತ್ತು. ಅದರಂತೆ ಇನಿಂಗ್ಸ್‌ ಆರಂಭಿಸಿದ ಭಾರತ ವಿರಾಟ್‌ ಕೊಹ್ಲಿ ಹಾಗೂ ಸೂರ್ಯಕುಮಾರ್‌ ಗಳಿಸಿದ ಅರ್ಧಶತಕಗಳ ಬಲದಿಂದ ನಿಗದಿತ 20 ಓವರ್‌ಗಳಲ್ಲಿ 2 ವಿಕೆಟ್‌ಗೆ 192 ರನ್ ಕಲೆಹಾಕಿತ್ತು.

ADVERTISEMENT

ಕೊಹ್ಲಿ ಹಾಗೂಯಾದವ್‌ ಜೋಡಿ ಮುರಿಯದ ಮೂರನೇ ವಿಕೆಟ್‌ ಪಾಲುದಾರಿಕೆಯಲ್ಲಿ 42 ಎಸೆತಗಳಲ್ಲಿ 98 ರನ್ ಕಲೆಹಾಕಿತು.

ಕೊಹ್ಲಿ 44 ಎಸೆತಗಳಲ್ಲಿ 1 ಬೌಂಡರಿ ಹಾಗೂ 3 ಸಿಕ್ಸರ್‌ ಸಹಿತ 59 ರನ್ ಗಳಿಸಿದರೆ, ಸೂರ್ಯಕುಮಾರ್‌ ಕೇವಲ 26 ಎಸೆತಗಳಲ್ಲಿ 68 ರನ್ ಚಚ್ಚಿದರು. ಅವರ ಇನಿಂಗ್ಸ್‌ನಲ್ಲಿ ತಲಾ ಆರು ಬೌಂಡರಿ ಮತ್ತು ಸಿಕ್ಸರ್‌ಗಳಿದ್ದವು.

ಭಾರತದ ಸವಾಲಿನ ಗುರಿ ಬೆನ್ನತ್ತಿದ ಹಾಂಗ್‌ಕಾಂಗ್‌ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 152ರನ್‌ ಗಳಿಸಲಷ್ಟೇ ಶಕ್ತವಾಯಿತು.

ಆಡಿರುವ ಎರಡೂ ಪಂದ್ಯಗಳನ್ನು (ಪಾಕಿಸ್ತಾನ ಹಾಗೂ ಹಾಂಗ್‌ಕಾಂಗ್‌ ವಿರುದ್ಧ) ಗೆದ್ದಿರುವ ರೋಹಿತ್‌ ಪಡೆ 'ಸೂಪರ್‌ 4' ಹಂತಕ್ಕೆ ತಲುಪಿದೆ. ಪಾಕಿಸ್ತಾನ ಹಾಗೂ ಹಾಂಗ್‌ಕಾಂಗ್‌ ನಾಳೆ (ಸೆ.2) ಸೆಣಸಾಡಲಿದ್ದು, ಗೆದ್ದವರು 'ಎ' ಗುಂಪಿನಿಂದ ಎರಡನೇ ತಂಡವಾಗಿ ಮುಂದಿನ ಹಂತ ಪ್ರವೇಶಿಸಲಿದ್ದಾರೆ.

ಹಾಂಗ್‌ಕಾಂಗ್‌ ವಿರುದ್ಧದಪಂದ್ಯದ ಬಳಿಕ ಸೂರ್ಯಕುಮಾರ್‌ ಇನಿಂಗ್ಸ್‌ ಬಗ್ಗೆ ಮಾತನಾಡಿರುವ ರೋಹಿತ್‌, 'ಅವರು ಇಂತಹ ಇನಿಂಗ್ಸ್‌ ಆಡಿದರೆ, ಮಾತನಾಡಲು ಪದಗಳು ಸಾಲುವುದಿಲ್ಲ.ಸೂರ್ಯಕುಮಾರ್‌ ನಿರ್ಭೀತಿಯಿಂದ ಬ್ಯಾಟ್‌ ಬೀಸುತ್ತಾರೆ. ತಂಡವೂ ಅದನ್ನೇ ಅವರಿಂದ ನಿರೀಕ್ಷಿಸುತ್ತದೆ' ಎಂದು ಹೇಳಿದ್ದಾರೆ.

ಮುಂದುವರಿದು, 'ಅವರು ಇಂದು ಆಡಿದ ಕೆಲವು ಹೊಡೆತಗಳು ಯಾವುದೇ ಪುಸ್ತಕದಲ್ಲಿಯೂ ದಾಖಲಾಗಿಲ್ಲ. ಇಂತಹ ಇನಿಂಗ್ಸ್‌ ಅನ್ನು ನೋಡುವುದೇ ಬಹಳ ಖುಷಿ ಕೊಡುವ ವಿಚಾರ. ಇಂತಹ ಇನಿಂಗ್ಸ್‌ ಕಟ್ಟುವಲ್ಲಿ ಹೊಡೆತಗಳ ಆಯ್ಕೆ ತುಂಬಾ ಮುಖ್ಯವಾಗಿರುತ್ತದೆ. ಅವರು ಮೈದಾನದ ಮೂಲೆಮೂಲೆಗಳಿಗೂ ಚೆಂಡನ್ನು ಅಟ್ಟಬಲ್ಲರು ಎಂಬುದು ಎಲ್ಲರಿಗೂ ಗೊತ್ತೇ ಇದೆ' ಎಂದು ಮೆಚ್ಚುಗೆಯ ಮಾತನಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.