ADVERTISEMENT

ಶ್ರೇಯಸ್ ಅಯ್ಯರ್ ಆರೋಗ್ಯ ಸ್ಥಿರ: ಐಸಿಯುನಿಂದ ಸ್ಥಳಾಂತರ

ಪಿಟಿಐ
Published 28 ಅಕ್ಟೋಬರ್ 2025, 5:47 IST
Last Updated 28 ಅಕ್ಟೋಬರ್ 2025, 5:47 IST
<div class="paragraphs"><p>ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶ್ರೇಯಸ್ ಅಯ್ಯರ್</p></div>

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶ್ರೇಯಸ್ ಅಯ್ಯರ್

   

ಚಿತ್ರ: @SelflessCricket

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದ ವೇಳೆ ಪಕ್ಕೆಲುಬಿನ ಗಾಯಕ್ಕೆ ತುತ್ತಾಗಿ ರಕ್ತಸ್ರಾವದಿಂದ ಸಿಡ್ನಿಯ ಆಸ್ಪತ್ರೆಗೆ ದಾಖಲಾಗಿದ್ದ ಭಾರತ ತಂಡದ ಉಪನಾಯಕ ಶ್ರೇಯಸ್ ಅಯ್ಯರ್ ಆರೋಗ್ಯ ಸುಧಾರಿಸಿದ್ದು, ಅವರನ್ನು ತೀವ್ರ ನಿಗಾ ಘಟಕದಿಂದ ಸ್ಥಳಾಂತರಿಸಲಾಗಿದೆ ಎಂದು ವರದಿಯಾಗಿದೆ.

ADVERTISEMENT

‘ಶ್ರೇಯಸ್ ಅಯ್ಯರ್ ಅವರನ್ನು ಐಸಿಯುನಿಂದ ಸಾಮಾನ್ಯ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲು ಅವರಿಗೆ ಇನ್ನೂ ಕೆಲವು ದಿನಗಳು ಬೇಕಾಗಬಹುದು’ ಎಂದು ಬಿಸಿಸಿಐ ಮೂಲಗಳು ಪಿಟಿಐಗೆ ತಿಳಿಸಿವೆ.

ಶನಿವಾರ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಅಲೆಕ್ಸ್‌ ಕ್ಯಾರಿ ಹೊಡೆದ ಚೆಂಡನ್ನು ಹಿಂದಕ್ಕೆ ಓಡಿ ಬ್ಯಾಕ್‌ವರ್ಡ್‌ ಪಾಯಿಂಟ್‌ನಲ್ಲಿ ಅದ್ಭುತವಾಗಿ ಕ್ಯಾಚ್ ಪಡೆದು ಔಟ್ ಮಾಡಿದ್ದರು. ಆ ಸಂದರ್ಭದಲ್ಲಿ ಅಯ್ಯರ್ ಅವರ ಪಕ್ಕೆಲುಬು ನೆಲಕ್ಕೆ ಉಜ್ಜಿಹೋಗಿತ್ತು.

ಬಳಿಕ ‘ಡ್ರೆಸಿಂಗ್‌ರೂಮ್‌ನಲ್ಲಿ ಅಯ್ಯರ್‌ ಪ್ರಜ್ಞೆತಪ್ಪಿದ್ದರು. ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಅವರ ಗುಲ್ಮಕ್ಕೆ (ಪ್ಲೀಹ ಸ್ಪ್ಲೀನ್‌) ಸೀಳು ಗಾಯವಾಗಿರುವುದು ಸ್ಕ್ಯಾನ್‌ಗಳಿಂದ ದೃಢಪಟ್ಟಿದೆ’ ಎಂದು ಮೂಲಗಳು ತಿಳಿಸಿವೆ.

ಮೈದಾನದ ವೈದ್ಯಕೀಯ ಸಿಬ್ಬಂದಿಯ ಸಮಯಪ್ರಜ್ಞೆಯನ್ನು ಬಿಸಿಸಿಐ ವೈದ್ಯಕೀಯ ಸೇವೆಗಳ ಮುಖ್ಯಸ್ಥ ಡಾ. ದಿನ್ಶಾ ಪಾರ್ದಿವಾಲಾ ಶ್ಲಾಘಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.