
ಹುಬ್ಬಳ್ಳಿಯ ರಾಜನಗರದ ಕೆ.ಎಸ್.ಸಿ.ಎ ಕ್ರೀಡಾಂಗಣದಲ್ಲಿ ಮಂಗಳವಾರ ಆರಂಭವಾದ ರಣಜಿ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಜಮ್ಮು ಮತ್ತು ಕಾಶ್ಮೀರ ತಂಡದ ಶುಭಂ ಪುಂದೀರ ಅವರ ಬ್ಯಾಟಿಂಗ್ ವೈಖರಿ
ಪ್ರಜಾವಾಣಿ ಚಿತ್ರ/ ಗೋವಿಂದರಾಜ ಜವಳಿ
ಹುಬ್ಬಳ್ಳಿ: ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಕರ್ನಾಟಕ ಹಾಗೂ ಜಮ್ಮು ಮತ್ತು ಕಾಶ್ಮೀರ ತಂಡಗಳು ಮುಖಾಮುಖಿಯಾಗಿವೆ. ರಣಜಿ ಟ್ರೋಫಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರ ತಂಡ ಫೈನಲ್ ಪ್ರವೇಶಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿರುವ ಜಮ್ಮು ಮತ್ತು ಕಾಶ್ಮೀರ ತಂಡ ಮೊದಲ ದಿನದಾಟದಲ್ಲಿ ಮೇಲುಗೈ ಸಾಧಿಸಿದೆ. ವಿಶೇಷವಾಗಿ 27 ವರ್ಷದ ಶುಭಂ ಪುಂದಿರ ಅವರು ಆಕರ್ಷಕ ಶತಕ ಸಿಡಿಸುವ ಮೂಲಕ ತಂಡ ತನ್ನ ಮೊದಲ ಇನಿಂಗ್ಸ್‌ನಲ್ಲಿ ಬೃಹತ್ ಮೊತ್ತದತ್ತ ದಾಪುಗಾಲಿಡಲು ನೆರವಾಗಿದ್ದಾರೆ.
ಯಾರು ಈ ಶುಭಮ್ ಪುಂದಿರ್
27 ವರ್ಷದ ಶುಭಂ ಪುಂದಿರ ಅವರು, ಎಡಗೈ ಬ್ಯಾಟರ್ ಮತ್ತು ಲೆಗ್ ಸ್ಪಿನ್ ಬೌಲರ್ ಆಗಿ ಗುರುತಿಸಿಕೊಂಡಿದ್ದಾರೆ. 2015ರ ರಣಜಿ ಟ್ರೋಫಿಯಲ್ಲಿ ಜಮ್ಮು ಮತ್ತು ಕಾಶ್ಮೀರ ತಂಡದ ಪರ ಪದಾರ್ಪಣೆ ಮಾಡಿದ್ದರು. ಆಗ ಅವರಿಗೆ ಕೇವಲ 16 ವರ್ಷ ವಯಸ್ಸು.
ಜಮ್ಮು ಮತ್ತು ಕಾಶ್ಮೀರ ಪರ ರಣಜಿಗೆ ಪದಾರ್ಪಣೆ ಮಾಡಿದ ಮೂರನೇ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆ ಅವರದ್ದು. ರಣಜಿಗೆ ಆಯ್ಕೆಯಾದ ಆರಂಭದಲ್ಲಿ 31 ಪಂದ್ಯಗಳನ್ನು ಆಡಿದ ಅವರು ಕೇವಲ 27ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡುವ ಮೂಲಕ ತಂಡದಿಂದ ಹೊರಬಿದ್ದಿದ್ದರು. ಸದ್ಯ, ಮತ್ತೊಮ್ಮೆ ರಾಜ್ಯ ತಂಡಕ್ಕೆ ಕಮ್‌ಬ್ಯಾಕ್ ಮಾಡಿರುವ ಅವರು ಆಕರ್ಷಕ ಶತಕ ಸಿಡಿಸಿ ಮಿಂಚಿದ್ದಾರೆ.
1998ರ ಅಕ್ಟೋಬರ್ 16ರಲ್ಲಿ ದೆಹರಾಡೂನ್‌ನಲ್ಲಿ ಜನಿಸಿದ ಅವರು ಜಮ್ಮು ಮತ್ತು ಕಾಶ್ಮೀರ ತಂಡದ ಪ್ರಮುಖ ಆಟಗಾರನಾಗಿದ್ದಾರೆ. ಅದರಲ್ಲೂ ವಿಶೇಷವಾಗಿ ಬಲಿಷ್ಠ ಕರ್ನಾಟಕ ತಂಡದ ವಿರುದ್ಧ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ 247 ಎಸೆತಗಳಲ್ಲಿ 12 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ 121 ರನ್ ಸಿಡಿಸಿ ಮಿಂಚಿದ್ದಾರೆ. ಇದು ಅವರ ವೃತ್ತಿಜೀವನದ ಪ್ರಮುಖ ಇನಿಂಗ್ಸ್ ಆಗಿದೆ.
ಹುಬ್ಬಳ್ಳಿಯ ಕೆಎಸ್‌ಸಿಎ ಮೈದಾನವು ಫೈನಲ್ ಪಂದ್ಯದ ಮೊದಲ ದಿನ ಬ್ಯಾಟರ್‌ಗಳಿಗೆ ಸಂಪೂರ್ಣ ನೆರವು ನೀಡಿತು. ಇದರ ನೆರವು ಪಡೆದ ಜಮ್ಮು-ಕಾಶ್ಮೀರ ತಂಡವು 87 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 284 ರನ್ ಗಳಿಸಿದೆ.
ಸದ್ಯ ಎರಡನೇ ದಿನದಾಟದ ಊಟದ ವಿರಾಮದ ವೇಳೆಗೆ ಜಮ್ಮು ಮತ್ತು ಕಾಶ್ಮೀರ ತಂಡವು 4 ವಿಕೆಟ್ ಕಳೆದುಕೊಂಡು 380 ರನ್ ಕಲೆಹಾಕಿದೆ. ಆ ಮೂಲಕ ರಣಜಿ ಫೈನಲ್‌ನಲ್ಲಿ ಬೃಹತ್ ಮೊತ್ತದತ್ತ ಹೆಜ್ಜೆ ಇಟ್ಟಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.