ನವದೆಹಲಿ: ಭಾರತ ತಂಡದ ನಾಯಕನಾಗಿ ಶುಭಮನ್ ಗಿಲ್ ತಮ್ಮ ಮೊದಲ ಸವಾಲಿನಲ್ಲೇ ಇಂಗ್ಲೆಂಡ್‌ನಂತಹ ಕಠಿಣ ಪಿಚ್‌ಗಳಲ್ಲಿ ತನ್ನ ಸಾಮರ್ಥ್ಯ ಸಾಬೀತುಪಡಿಸಿದ್ದಾನೆ ಎಂದು ಭಾರತ ತಂಡದ ಮುಖ್ಯ ತರಬೇತುದಾರ ಗೌತಮ್ ಗಂಭೀರ್ ಹೇಳಿದರು.
ಶುಭಮನ್ ಗಿಲ್ ನಾಯಕತ್ವದ ಕುರಿತು ಮಾತನಾಡಿದ ಗಂಭೀರ್, ಸಹ ಆಟಗಾರರಿಗೆ ಸರಿಯಾಗಿ ಮಾರ್ಗದರ್ಶನ ನೀಡುವ ಮೂಲಕ ಯುವ ನಾಯಕ ಡ್ರೆಸ್ಸಿಂಗ್ ಕೋಣೆಯ ಗೌರವವನ್ನು ಕಾಪಾಡಿಕೊಂಡಿದ್ದಾರೆ. ಹಾಗಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಇತ್ತೀಚೆಗೆ ಏಕದಿನ ತಂಡದ ನಾಯಕತ್ವ ವಹಿಸಿಕೊಂಡು ಮುಂಬರುವ ಆಸ್ಟ್ರೇಲಿಯಾ ಪ್ರವಾಸದಲ್ಲಿ ತಂಡವನ್ನು ಮುನ್ನಡೆಸಲಿರುವ 26 ವರ್ಷದ ಶುಭಮನ್ ಗಿಲ್ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.
‘ಅವನನ್ನು ಅವನಾಗಿಯೇ ಇರಲು ಅವಕಾಶ ನೀಡುತ್ತೇವೆ. ಟೆಸ್ಟ್ ಅಥವಾ ಏಕದಿನ ನಾಯಕನನ್ನಾಗಿ ನೇಮಿಸುವ ಮೂಲಕ ಆತನಿಗೆ ಯಾರೂ ಯಾವುದೇ ಉಪಕಾರ ಮಾಡಿಲ್ಲ ಎಂದು ನಾನು ಭಾವಿಸುತ್ತೇನೆ. ಆತ ತನ್ನ ಅರ್ಹತೆಯಿಂದ ಅದನ್ನು ಗಳಿಸಿಕೊಂಡಿದ್ದಾನೆ‘ ಎಂದು ಗಂಭೀರ್ ಹೇಳಿದರು.
‘ಗಿಲ್ ಕಷ್ಟಪಟ್ಟು ಕೆಲಸ ಮಾಡಿದ್ದಾನೆ. ಆತ ಈಗಾಗಲೇ ನಾಯಕನಾಗಿ ಇಂಗ್ಲೆಂಡ್‌ನಂತ ಕಠಿಣ ಪಿಚ್‌ಗಳಲ್ಲಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿ ತನ್ನ ಸಾಮರ್ಥ್ಯ ಸಾಬೀತುಪಡಿಸಿದ್ದಾನೆ‘ ಎಂದು ಅವರು ಹೇಳಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.