ಶುಭಮನ್ ಗಿಲ್
(ಪಿಟಿಐ ಚಿತ್ರ)
ಓವಲ್: ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾ ಟೆಸ್ಟ್ ತಂಡದ ನಾಯಕ ಶುಭಮನ್ ಗಿಲ್, 6,000 ರನ್‌ಗಳ ಸಾಧನೆ ಮಾಡಿದ್ದಾರೆ.
ಪ್ರಸಕ್ತ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ 25 ವರ್ಷದ ಗಿಲ್ ಒಟ್ಟು 754 ರನ್ ಪೇರಿಸಿದ್ದಾರೆ. ಆದರೂ ದಿಗ್ಗಜ ಸುನಿಲ್ ಗವಾಸ್ಕರ್ ದಾಖಲೆ ಮುರಿಯುವ ಅವಕಾಶದಿಂದ ಸ್ವಲ್ಪದರಲ್ಲೇ ವಂಚಿತರಾಗಿದ್ದಾರೆ.
ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್‌ನಲ್ಲಿ ಗಿಲ್ 11 ರನ್ ಗಳಿಸಿ ಔಟ್ ಆದರು.
ಭಾರತದ ಪರ ಟೆಸ್ಟ್ ಸರಣಿಯೊಂದರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎಂಬ ದಾಖಲೆಯು ಸುನಿಲ್ ಗವಾಸ್ಕರ್ ಅವರ ಹೆಸರಲ್ಲಿದೆ. 1971ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ (ತವರಿನಾಚೆ) ನಡೆದ ಸರಣಿಯಲ್ಲಿ ಗವಾಸ್ಕರ್ ಒಟ್ಟು 774 ರನ್ ಗಳಿಸಿದ್ದರು.
ಕೇವಲ 21 ರನ್ ಅಂತರದಲ್ಲಿ ಗವಾಸ್ಕರ್ ಅವರ ಹೆಸರಲ್ಲಿದ್ದ 54 ವರ್ಷಗಳಷ್ಟು ಹಳೆಯ ದಾಖಲೆ ಮುರಿಯುವಲ್ಲಿ ಗಿಲ್ ವಿಫಲರಾಗಿದ್ದಾರೆ.
1978/79ರಲ್ಲೂ ವೆಸ್ಟ್‌ಇಂಡೀಸ್ ವಿರುದ್ಧದ ಸರಣಿಯಲ್ಲಿ ಗವಾಸ್ಕರ್ 732 ರನ್ ಕಲೆ ಹಾಕಿದ್ದರು. ಇನ್ನು 2024ರಲ್ಲಿ ಇಂಗ್ಲೆಂಡ್ ವಿರುದ್ಧದ ತವರಿನ ಸರಣಿಯಲ್ಲಿ ಯಶಸ್ವಿ ಜೈಸ್ವಾಲ್ 712 ಮತ್ತು 2014/15ರ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ವಿರಾಟ್ ಕೊಹ್ಲಿ 692 ರನ್ ಪೇರಿಸಿದ್ದರು.
ಶುಭಮನ್ ಗಿಲ್
ಟೆಸ್ಟ್ ಸರಣಿಯೊಂದರಲ್ಲಿ ಅತಿ ಹೆಚ್ಚು ರನ್ ಗಳಿಸಿದ ನಾಯಕರ ಪಟ್ಟಿಯಲ್ಲಿ ದಿಗ್ಗಜ ಡಾನ್ ಬ್ರಾಡ್ಮನ್ ನಂತರದ ಸ್ಥಾನದಲ್ಲಿ ಗಿಲ್ ಗುರುತಿಸಿಕೊಂಡಿದ್ದಾರೆ. 1936/37ರಲ್ಲಿ ಇಂಗ್ಲೆಂಡ್ ವಿರುದ್ಧವೇ ಬ್ರಾಡ್ಮನ್ ಒಟ್ಟು 810 ರನ್ ಗಳಿಸಿದ್ದರು.
ಟೆಸ್ಟ್ ಕ್ರಿಕೆಟ್‌ನಲ್ಲಿ ಗಿಲ್ ಅವರ ವೈಯಕ್ತಿಕ ಶ್ರೇಷ್ಠ ಸಾಧನೆಯೂ ಇದೇ ಸರಣಿಯಲ್ಲೇ ದಾಖಲಾಗಿದೆ. ಎಜ್‌ಬಾಸ್ಟನ್ ಟೆಸ್ಟ್ ಪಂದ್ಯದಲ್ಲಿ 269 ರನ್ ಗಳಿಸಿದ್ದರು. ಅದೇ ಪಂದ್ಯದ ದ್ವಿತೀಯ ಇನಿಂಗ್ಸ್‌ನಲ್ಲೂ 161 ರನ್‌ಗಳ ಸಾಧನೆ ಮಾಡಿದ್ದರು.
ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 113 ಪಂದ್ಯಗಳಲ್ಲಿ 46.15ರ ಸರಾಸರಿಯಲ್ಲಿ ಗಿಲ್ 6,000 ರನ್‌ಗಳ ಮೈಲಿಗಲ್ಲು ತಲುಪಿದ್ದಾರೆ. ಈ ಪೈಕಿ ಟೆಸ್ಟ್‌ನಲ್ಲಿ 67 ಇನಿಂಗ್ಸ್‌ನಲ್ಲಿ 41.25ರ ಸರಾಸರಿಯಲ್ಲಿ 2,647 ರನ್ ಗಳಿಸಿದ್ದಾರೆ. ಹಾಗೆಯೇ 55 ಏಕದಿನಗಳಲ್ಲಿ 59.04ರ ಸರಾಸರಿಯಲ್ಲಿ 2,775 ರನ್ ಪೇರಿಸಿದ್ದಾರೆ. ಇನ್ನು 21 ಟಿ20 ಪಂದ್ಯಗಳಲ್ಲಿ 30.45ರ ಸರಾಸರಿಯಲ್ಲಿ 578 ರನ್ ಗಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.