ADVERTISEMENT

ಶುಭಮನ್ ಗಿಲ್: ಅಪ್ಪನ ಪ್ರೀತಿ, ದ್ರಾವಿಡ್ ಗರಡಿಯಲ್ಲಿ ಅರಳಿದ ಪ್ರತಿಭೆ

ಗಿರೀಶ ದೊಡ್ಡಮನಿ
Published 25 ಮೇ 2025, 0:05 IST
Last Updated 25 ಮೇ 2025, 0:05 IST
<div class="paragraphs"><p>ಶುಭಮನ್‌ ಗಿಲ್‌ ಅವರ ತಂದೆ ಲಖ್ವಿಂದರ್‌ ಸಿಂಗ್‌ (ಎಡ) ಹಾಗೂ ರಾಹುಲ್ ದ್ರಾವಿಡ್</p></div>

ಶುಭಮನ್‌ ಗಿಲ್‌ ಅವರ ತಂದೆ ಲಖ್ವಿಂದರ್‌ ಸಿಂಗ್‌ (ಎಡ) ಹಾಗೂ ರಾಹುಲ್ ದ್ರಾವಿಡ್

   

ಬೆಂಗಳೂರು: ಏಳು ವರ್ಷಗಳ ಹಿಂದಿನ ಮಾತು. ನಗರದ ಹೊರವಲಯದಲ್ಲಿರುವ ಆಲೂರಿನ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದ ಮರವೊಂದರ ಕೆಳಗೆ ಮಧ್ಯವಯಸ್ಸಿನ ವ್ಯಕ್ತಿಯೊಬ್ಬರು ನಿಂತಿದ್ದರು. ಅವರ ಮುಖದಲ್ಲಿ ಬಳಲಿಕೆ ಎದ್ದು ಕಾಣುತ್ತಿತ್ತು. ಆದರೆ ಕಂಗಳಲ್ಲಿ ಅದೇನೋ ಹೆಮ್ಮೆ, ಸಂತಸದ ಮಿಂಚಿತ್ತು. 

ಆ ವ್ಯಕ್ತಿ ಲಖ್ವಿಂದರ್ ಸಿಂಗ್ ಗಿಲ್. ಶನಿವಾರ ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕರಾಗಿ ಆಯ್ಕೆಯಾದ ಶುಭಮನ್ ಗಿಲ್ ಅವರ ತಂದೆಯೇ ಈ ಲಖ್ವಿಂದರ್ ಸಿಂಗ್ ಅವರು. ತಮ್ಮ ಮಗ ಮತ್ತು ಆತನ ಆಟವನ್ನು ಕಣ್ತುಂಬಿಕೊಳ್ಳಲು ಪಂಜಾಬ್‌ ರಾಜ್ಯದ ಚಾಕ್‌ ಖೇರಾ ಗ್ರಾಮದಿಂದ ಸಂಬಂಧಿಕರೊಂದಿಗೆ ಬೆಂಗಳೂರಿಗೆ ಬಂದಿದ್ದರು. ಆ ಹೊತ್ತಿಗಾಗಲೇ ಅವರು ತಮ್ಮ ಮಗನನ್ನು  ಭೇಟಿಯಾಗದೇ ಆರೇಳು ತಿಂಗಳುಗಳೇ ಕಳೆದಿದ್ದವು!

ADVERTISEMENT

ಏಕೆಂದರೆ; 2018ರಲ್ಲಿ ನ್ಯೂಜಿಲೆಂಡ್‌ನಲ್ಲಿ ನಡೆದಿದ್ದ 19 ವರ್ಷದೊಳಗಿನವರ ಕ್ರಿಕೆಟ್‌ ವಿಶ್ವಕಪ್ ಗೆದ್ದಿದ್ದ ಭಾರತ ತಂಡದ  ಶ್ರೇಷ್ಠ ಆಟಗಾರ ಗೌರವ ಗಳಿಸಿದ್ದವರು ಶುಭಮನ್. ಆ ಟೂರ್ನಿ ಆರಂಭವಾಗುವ ಕೆಲವು ತಿಂಗಳುಗಳ ಮುನ್ನವೇ ಗಿಲ್ ಮನೆಯಿಂದ ಶಿಬಿರಕ್ಕೆ ಹೋಗಿದ್ದರು. ಅಲ್ಲಿಂದ ತಂಡವು ವಿಶ್ವಕಪ್ ಜಯಿಸಿದ ನಂತರ ಸೀದಾ ಬೆಂಗಳೂರಿಗೆ ಬಂದು ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿದ್ದ ತಮ್ಮ ತವರು ರಾಜ್ಯ ಪಂಜಾಬ್ ತಂಡವನ್ನು ಸೇರಿಕೊಂಡಿದ್ದರು. 

‘ನನ್ನ ಮಗನಿಗೆ ಕ್ರಿಕೆಟ್ ಒಂದಿದ್ದರೆ ಸಾಕು ಮತ್ತೇನೂ ಬೇಕಾಗಿಲ್ಲ. ಚಿಕ್ಕವನಿದ್ದಾಗಿನಿಂದಲೂ ಊಟ, ನಿದ್ದೆ ಬಿಟ್ಟು ಕ್ರಿಕೆಟ್‌ನಲ್ಲಿ ತೊಡಗಿಸಿಕೊಂಡಿದ್ದೇ ಹೆಚ್ಚು. ನಮ್ಮದು ರೈತಾಪಿ ಕುಟುಂಬ. 9ನೇ ವಯಸ್ಸಿನಿಂದಲೇ ಕ್ರಿಕೆಟ್‌ ಬ್ಯಾಟ್‌ ಒಂದೇ ಆತನ ಆಟಿಕೆ. ಆತನ ಕ್ರಿಕೆಟ್‌ ಪ್ರೀತಿಗೆ ನಾವೆಂದೂ ಅಡ್ಡಿಯಾಗಲಿಲ್ಲ. ಈಗಂತೂ ದೇಶಕ್ಕಾಗಿ ವಿಶ್ವಕಪ್ ಗೆದ್ದು ಬಂದಿರುವುದು ಶುಭಮನ್ ಸಾಧನೆ ಹೆಮ್ಮೆ ಮೂಡಿಸಿದೆ. ರಾಹುಲ್ ದ್ರಾವಿಡ್ ಸರ್ (ಆಗ ತಂಡದ ಮುಖ್ಯ ಕೋಚ್) ಅವರ ಮಾರ್ಗದರ್ಶನ ಅಮೂಲ್ಯವಾದದ್ದು. ಶಿಸ್ತು, ಸಂಯಮ ಮತ್ತು ಏಕಾಗ್ರತೆಯ ಸಾಧನೆಯನ್ನು ದ್ರಾವಿಡ್‌ ಅವರಿಂದಲೇ ಕಲಿಯಲು ಸಾಧ್ಯ. ಅದು ನನ್ನ ಪುತ್ರನನ್ನು ಭವಿಷ್ಯದಲ್ಲಿ ಬಹಳ ಎತ್ತರಕ್ಕೇರಿಸುವ ಭರವಸೆ ಇದೆ’ ಎಂದು ಅವತ್ತು ಲಖ್ವಿಂದರ್ ಹನಿಗಣ್ಣಾಗಿದ್ದರು. 

ಆ ತಂದೆಯ ಹಾರೈಕೆಗಳು ಮತ್ತು ಕರ್ನಾಟಕ ಮೂಲದ ಕ್ರಿಕೆಟ್ ದಿಗ್ಗಜ ದ್ರಾವಿಡ್ ಅವರ ಮಾರ್ಗದರ್ಶನ ಎರಡೂ ಈಗ ಫಲ ನೀಡಿವೆ. ಭಾರತ ಟೆಸ್ಟ್ ಕ್ರಿಕೆಟ್ ತಂಡಕ್ಕೆ 38ನೇ ನಾಯಕರಾಗಿ ಶುಭಮನ್ ಆಯ್ಕೆಯಾಗಿದ್ದಾರೆ. 25 ವರ್ಷ ವಯಸ್ಸಿನ, ಶಾಂತಚಿತ್ತದ ಈ ಯುವನಾಯಕನ ಮುಂದೆ ಕಠಿಣ ಹಾದಿ ಇದೆ. 93 ವರ್ಷಗಳ ಇತಿಹಾಸವಿರುವ ಭಾರತ ತಂಡದ ಮೊದಲ ನಾಯಕ ಕರ್ನಲ್ ಸಿ.ಕೆ. ನಾಯ್ಡು ಅವರಿಂದ ಆರಂಭವಾಗಿ ಇತ್ತೀಚೆಗೆ ನಿವೃತ್ತಿ ಘೋಷಿಸಿದ ರೋಹಿತ್ ಶರ್ಮಾವರೆಗೂ ದೊಡ್ಡ ಪರಂಪರೆಯನ್ನೇ ಬಿಟ್ಟು ಹೋಗಿದ್ದಾರೆ. 

ನಾಯಕರಾಗಿ ತಂಡವನ್ನು ಗೆಲುವಿನತ್ತ ಮುನ್ನಡೆಸುವುದರ ಜೊತೆಜೊತೆಗೆ ಗಿಲ್ ಅವರು ತಮ್ಮ ಬ್ಯಾಟಿಂಗ್ ಲಯವನ್ನೂ ಕಾಪಾಡಿಕೊಳ್ಳುವ ದೊಡ್ಡ ಸವಾಲು ಇದೆ. ಈಗ ಅವರೊಂದಿಗೆ ಇಂಗ್ಲೆಂಡ್‌ ಪ್ರವಾಸಕ್ಕೆ ತೆರಳುತ್ತಿರುವ ತಂಡದಲ್ಲಿ ಬಹುತೇಕ ಯುವ ಆಟಗಾರರೇ ಹೆಚ್ಚು. ಕೆ.ಎಲ್. ರಾಹುಲ್, ರವೀಂದ್ರ ಜಡೇಜ ಮತ್ತು ಜಸ್‌ಪ್ರೀತ್ ಬೂಮ್ರಾ ಅವರು ಮಾತ್ರ ಗಿಲ್‌ ಅವರಿಗಿಂತ ವಯಸ್ಸು ಮತ್ತು ಅನುಭವದಲ್ಲಿ ಹಿರಿಯರು. ಅಷ್ಟೇ ಅಲ್ಲ. ಗಿಲ್ ಅವರು ಈಗ ಆರಂಭಿಕ ಬ್ಯಾಟರ್ ಆಗಿ ರೋಹಿತ್ ಅವರ ಸ್ಥಾನವನ್ನು ತುಂಬುವರೇ ಅಥವಾ ವಿರಾಟ್ ಅವರ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವರೇ ಎಂಬ ಕುತೂಹಲ ಗರಿಗೆದರಿದೆ. 

ಟಿ20 ಕ್ರಿಕೆಟ್‌ ಭರಾಟೆಯಲ್ಲಿಯೂ ಟೆಸ್ಟ್ ಪಂದ್ಯಗಳಿಗೆ ಜನಾಕರ್ಷಣೆ ತುಂಬಿದ ಹೆಗ್ಗಳಿಕೆ ಕೊಹ್ಲಿಗೆ ಸಲ್ಲುತ್ತದೆ. ‘ಮ್ಯಾನರಿಸಮ್‌’ನಲ್ಲಿ ವಿರಾಟ್ ಮತ್ತು ಶುಭಮನ್ ಸ್ವಭಾವ ಅಜಗಜಾಂತರ. ಆದರೆ ಕೌಶಲ ಮತ್ತು ಪ್ರತಿಭೆಯಲ್ಲಿ ಗಿಲ್ ಕೂಡ ಕಮ್ಮಿಯಲ್ಲ. ಆದರೆ ಎಷ್ಟು ದೂರದವರೆಗೆ ಅವರು ಓಡುವ ಕುದುರೆಯಾಗಿರುತ್ತಾರೆ ಎಂಬುದೇ ಇಲ್ಲಿ ಮುಖ್ಯ. ಏಕೆಂದರೆ; ಭಾರತ ತಂಡದ ನಾಯಕನ ಸ್ಥಾನವೆಂದರೆ ಅಗ್ನಿಕುಂಡವೂ ಹೌದು. ಕ್ರಿಕೆಟ್ ಆಟವನ್ನು ಆರಾಧಿಸುವ  ದೇಶದಲ್ಲಿ ಕೋಟ್ಯಂತರ ಅಭಿಮಾನಿಗಳ ನಿರೀಕ್ಷೆಯ ಭಾರ ಹೊತ್ತು ಯಶಸ್ಸಿನತ್ತ ಹೆಜ್ಜೆ ಹಾಕುವುದು ಸುಲಭವಲ್ಲ. 

ರಾಹುಲ್ ದ್ರಾವಿಡ್ 

ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕರು

  • ಕರ್ನಲ್ ಸಿ.ಕೆ. ನಾಯ್ಡು

  • ಮಹಾರಾಜಕುಮಾರ ವಿಜಯನಗರಂ

  • ಇಫ್ತಿಕಾರ್ ಅಲಿ ಖಾನ್ ಪಟೌಡಿ

  • ಲಾಲಾ ಅಮರನಾಥ್

  • ವಿಜಯ್ ಹಜಾರೆ

  • ವಿನೂ ಮಂಕಡ್

  • ಗುಲಾಮ್ ಅಹಮದ್

  • ಪಾಲಿ ಉಮ್ರಿಗರ್

  • ಹೇಮು ಅಧಿಕಾರಿ

  • ದತ್ತಾ ಗಾಯಕವಾಡ

  • ಪಂಕಜ್ ರಾಯ್

  • ಜಿ. ರಾಮಚಂದ್

  • ನಾರಿ ಕಂಟ್ರ್ಯಾಕ್ಟರ್

  • ಮನ್ಸೂರ್ ಅಲಿ ಖಾನ್ ಪಟೌಡಿ

  • ಚಂದು ಬೋರ್ಡೆ

  • ಅಜಿತ್ ವಾಡೇಕರ್

  • ಎಸ್. ವೆಂಕಟರಾಘವನ್

  • ಸುನಿಲ್ ಗಾವಸ್ಕರ್

  • ಬಿಷನ್ ಸಿಂಗ್ ಬೇಡಿ

  • ಜಿ.ಆರ್. ವಿಶ್ವನಾಥ್

  • ಕಪಿಲ್ ದೇವ್

  • ದಿಲೀಪ್ ವೆಂಗಸರ್ಕಾರ್

  • ರವಿಶಾಸ್ತ್ರಿ

  • ಕೃಷ್ಣಮಾಚಾರಿ ಶ್ರೀಕಾಂತ್

  • ಮೊಹಮ್ಮದ್ ಅಜರುದ್ದೀನ್

  • ಸಚಿನ್ ತೆಂಡೂಲ್ಕರ್

  • ಸೌರವ್ ಗಂಗೂಲಿ

  • ರಾಹುಲ್ ದ್ರಾವಿಡ್

  • ವೀರೇಂದ್ರ ಸೆಹ್ವಾಗ್ (4 ಪಂದ್ಯ)

  • ಅನಿಲ್ ಕುಂಬ್ಳೆ

  • ಮಹೇಂದ್ರಸಿಂಗ್ ಧೋನಿ

  • ವಿರಾಟ್ ಕೊಹ್ಲಿ

  • ಅಜಿಂಕ್ಯ ರಹಾನೆ (6 ಪಂದ್ಯ)

  • ಕೆ.ಎಲ್. ರಾಹುಲ್ (3 ಪಂದ್ಯ)

  • ರೋಹಿತ್ ಶರ್ಮಾ

  • ಜಸ್‌ಪ್ರೀತ್ ಬೂಮ್ರಾ (3 ಪಂದ್ಯ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.