
ಭಾರತ ತಂಡದ ನಾಯಕ ಶುಭಮನ್ ಗಿಲ್
ನವದೆಹಲಿ: ನ್ಯೂಜಿಲೆಂಡ್ ವಿರುದ್ಧ ನಿನ್ನೆ (ಭಾನುವಾರ) ಮುಕ್ತಾಯಗೊಂಡ ಮೂರು ಪಂದ್ಯಗಳ ಏಕದಿನ ಸರಣಿಯನ್ನು 1–2ರ ಅಂತರದಲ್ಲಿ ಸೋತ ಬಳಿಕ, ಟೀಂ ಇಂಡಿಯಾ ಏಕದಿನ ಹಾಗೂ ಟೆಸ್ಟ್ ತಂಡದ ನಾಯಕ ಶುಭಮನ್ ಗಿಲ್ ಅವರು ರಣಜಿ ಟ್ರೋಫಿಯಲ್ಲಿ ಪಂಜಾಬ್ ಪರ ಆಡಲು ನಿರ್ಧರಿಸಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಬಳಿಕ ವಿಶ್ರಾಂತಿ ತೆಗೆದುಕೊಳ್ಳಲು ಮುಂದಾಗದ ಶುಭಮನ್ ಗಿಲ್ ಅವರು, ಜನವರಿ 22 (ಗುರುವಾರ) ರಾಜ್‌ಕೋಟ್‌ನಲ್ಲಿ ಸೌರಾಷ್ಟ್ರ ವಿರುದ್ಧ ಆರಂಭವಾಗಲಿರುವ ಪಂದ್ಯದಲ್ಲಿ ಪಂಜಾಬ್ ಪರ ಕಣಕ್ಕಿಳಿಯಲಿದ್ದಾರೆ.
ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿಯ ಮೂರೂ ಪಂದ್ಯಗಳಲ್ಲಿ ಗಿಲ್ ಆಡಿದ್ದರು. ಆದರೆ ಬಿಳಿ ಚೆಂಡಿನ ಕ್ರಿಕೆಟ್‌ನಿಂದ ತಕ್ಷಣ ದೀರ್ಘಾವಧಿ ಕ್ರಿಕೆಟ್‌ಗೆ ಮರಳಲು ಅವರು ಬಯಸಿದ್ದಾರೆ. 26 ವರ್ಷ ವಯಸ್ಸಿನ ಗಿಲ್ ಅವರು ಭಾರತದ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿಲ್ಲ.
ರಣಜಿ ನಾಕೌಟ್‌ಗೆ ಪ್ರವೇಶಿಸುವ ಪಂಜಾಬ್ ಹಾದಿ ಜೀವಂತವಾಗಿದ್ದರೂ, ಕಠಿಣವಾಗಿದೆ. ‘ಬಿ’ ಗುಂಪಿನಲ್ಲಿರುವ ಪಂಜಾಬ್ 5 ಪಂದ್ಯಗಳಿಂದ 6 ಅಂಕ ಗಳಿಸಿದ್ದು, ಸದ್ಯ ಆರನೇ ಸ್ಥಾನದಲ್ಲಿದೆ. ಇನ್ನು ಮೂರು ಪಂದ್ಯಗಳು ಆಡಲು ಉಳಿದಿದ್ದು, ಮೂರರಲ್ಲಿ ಜಯಗಳಿಸಿದರೆ ಪಂಜಾಬ್ ರೇಸ್‌ನಲ್ಲಿ ಉಳಿಯಲಿದೆ. ಅಸ್ಥಿರ ಆಟವಾಡುತ್ತಿರುವ ಪಂಜಾಬ್ ತಂಡಕ್ಕೆ ಗಿಲ್ ಪುನರಾಗಮನ ಮಹತ್ವದ್ದಾಗಲಿದೆ.
‘ಏಕದಿನ ಸರಣಿಯ ನಂತರ ವಿಶ್ರಾಂತಿ ಪಡೆಯದೇ ಇರಲು ಗಿಲ್ ನಿರ್ಧರಿಸಿದ್ದಾರೆ. ಇಂದೋರ್‌ನಿಂದ ನೇರ ವಿಮಾನವಿಲ್ಲದ ಕಾರಣ ಅವರು ಎಂಟು ಗಂಟೆಗಳ ಪಯಣ ಮಾಡಲಿದ್ದಾರೆ’ ಎಂದು ಪಂಜಾಬ್ ತಂಡದ ಮೂಲವೊಂದು ಪಿಟಿಐಗೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.