ADVERTISEMENT

ಕೊನೆಯ ಎಸೆತದಲ್ಲಿ ವಿಕೆಟ್; ಕ್ರಾಲಿ ಬಲೆಗೆ ಬೀಳಿಸಿದ ಸಿರಾಜ್ ಮಾಸ್ಟರ್ ಪ್ಲ್ಯಾನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಆಗಸ್ಟ್ 2025, 5:55 IST
Last Updated 3 ಆಗಸ್ಟ್ 2025, 5:55 IST
<div class="paragraphs"><p>ಜಾಕ್ ಕ್ರಾಲಿ ಕ್ಲೀನ್ ಬೌಲ್ಡ್ ಮಾಡಿದ ಮೊಹಮ್ಮದ್ ಸಿರಾಜ್ ಸಂಭ್ರಮ</p></div>

ಜಾಕ್ ಕ್ರಾಲಿ ಕ್ಲೀನ್ ಬೌಲ್ಡ್ ಮಾಡಿದ ಮೊಹಮ್ಮದ್ ಸಿರಾಜ್ ಸಂಭ್ರಮ

   

(ಪಿಟಿಐ ಚಿತ್ರ)

ಲಂಡನ್: ಆತಿಥೇಯ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯವು ರೋಚಕ ಹಂತವನ್ನು ತಲುಪಿದೆ.

ADVERTISEMENT

ಭಾರತ ಒಡ್ಡಿದ 374 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಮೂರನೇ ದಿನದಂತ್ಯಕ್ಕೆ ಒಂದು ವಿಕೆಟ್ ನಷ್ಟಕ್ಕೆ 50 ರನ್ ಗಳಿಸಿದೆ.

ಈ ಪಂದ್ಯವನ್ನು ಗೆಲ್ಲಲು ಭಾರತಕ್ಕೆ ಇನ್ನೂ ಒಂಬತ್ತು ವಿಕೆಟ್‌ ಬೇಕಾಗಿದೆ. ಅತ್ತ ಇಂಗ್ಲೆಡ್‌ಗೆ ಗೆಲ್ಲಲು ಇನ್ನೆರಡು ದಿನ ಉಳಿದಿರುವಂತೆಯೇ 324 ರನ್ ಗಳಿಸಬೇಕಿದೆ.

ಕ್ರಾಲಿ ಬಲೆಗೆ ಬೀಳಿಸಿದ ಸಿರಾಜ್, ಗಿಲ್ ಮಾಸ್ಟರ್‌ ಪ್ಲ್ಯಾನ್...

ಮೊದಲ ಇನಿಂಗ್ಸ್ ರೀತಿಯಲ್ಲೇ ಆತಿಥೇಯ ತಂಡಕ್ಕೆ ಓಪನರ್‌ಗಳಾದ ಜಾಕ್ ಕ್ರಾಲಿ ಹಾಗೂ ಬೆನ್ ಡಕೆಟ್ ಉತ್ತಮ ಆರಂಭವೊದಗಿಸಿದರು. ಮೊದಲ ವಿಕೆಟ್‌ಗೆ ಅರ್ಧಶತಕದ ಜೊತೆಯಾಟವನ್ನು ಕಟ್ಟಿದರು.

ದಿನದಂತ್ಯದ ವೇಳೆ ಸಮಯವನ್ನು ವ್ಯರ್ಥ ಮಾಡುವ ನಿಟ್ಟಿನಲ್ಲಿ ಕ್ರಾಲಿ ತಮ್ಮ ಎಂದಿನ ತಂತ್ರವನ್ನು ಹೆಣೆದರು. 14ನೇ ಓವರ್‌ನಲ್ಲಿ ಸಿರಾಜ್ ರನ್-ಅಪ್ ತೆಗೆದುಕೊಂಡರೂ ಕ್ರೀಸಿನಿಂದ ಆಚೆ ಹೋದ ಕ್ರಾಲಿ ಭಾರತಕ್ಕೆ ಇನ್ನೊಂದು ಓವರ್ ಎಸೆಯುವ ಅವಕಾಶವನ್ನು ನಿರಾಕರಿಸಿದರು.

ಆದರೆ ಲಾರ್ಡ್ಸ್ ಪಂದ್ಯದಂತೆ ಈ ಬಾರಿ ಸಿರಾಜ್ ಅಥವಾ ನಾಯಕ ಶುಭಮನ್ ಗಿಲ್ ಸಿಟ್ಟುಗೊಂಡಿಲ್ಲ. ಬದಲಾಗಿ ಕ್ರಾಲಿ ಅವರನ್ನು ನೋಡುತ್ತಲೇ ಮಂದಹಾಸ ಬೀರಿದರು. ಕ್ರಾಲಿ ಕೂಡ ತಮ್ಮ ತಂತ್ರ ಫಲಿಸಿತು ಎಂಬಂತೆ ನಗುಮುಖ ಬೀರಿದರು.

ಆದರೆ ಭಾರತದ ತಂತ್ರ ಬೇರೆಯೇ ಆಗಿತ್ತು. ಕೊನೆಯ ಎಸೆತವನ್ನು ಶಾರ್ಟ್ ಪಿಚ್‌‌ಗೆ ಅನುಗುಣವಾಗಿ ಕ್ಷೇತ್ರ ರಕ್ಷಣೆಯನ್ನು ಸೆಟ್ ಮಾಡಿದರು. ಕ್ರಾಲಿ ಕೂಡ ಸಿರಾಜ್ ಅವರಿಂದ ಬೌನ್ಸರ್ ದಾಳಿಯನ್ನು ನಿರೀಕ್ಷೆ ಮಾಡಿದ್ದರು.

ಆದರೆ ನೇರವಾಗಿ ಯಾರ್ಕರ್ ದಾಳಿ ಮಾಡಿದ ಸಿರಾಜ್, ಕ್ರಾಲಿ ಅವರನ್ನು ಕ್ಲೀನ್ ಬೌಲ್ಡ್ ಮಾಡುವಲ್ಲಿ ಯಶಸ್ವಿಯಾದರು. ಈ ವೇಳೆ ಭಾರತೀಯ ಆಟಗಾರರ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಸಿರಾಜ್ ಎಂದಿನಂತೆ ಫುಟ್ಬಾಲ್ ದಿಗ್ಗಜ ಕ್ರಿಸ್ಟಿಯಾನೊ ರೊನಾಲ್ಡೊ ರೀತಿಯಲ್ಲಿ ಸಂಭ್ರಮಿಸಿದರು.

ಪ್ರಸ್ತುತ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಅತ್ತ ಕ್ರಾಲಿ ತಲೆ ತಗ್ಗಿಸುತ್ತಲೇ ಪೆವಿಲಿಯನ್‌ಗೆ ಹೆಜ್ಜೆ ಹಾಕಿದರು.

ಟೀಮ್ ಇಂಡಿಯಾ ಆಟಗಾರರ ಸಂಭ್ರಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.