ADVERTISEMENT

ಏಷ್ಯಾ ಕ್ರಿಕೆಟ್‌ಗೆ ಲಂಕಾ ದೊರೆ: ಫೈನಲ್‌ನಲ್ಲಿ ಪಾಕಿಸ್ತಾನ ಎದುರು ಗೆಲುವು

ಭಾನುಕಾ, ಪ್ರಮೋದ್‌ ಮಿಂಚು

ಪಿಟಿಐ
Published 11 ಸೆಪ್ಟೆಂಬರ್ 2022, 20:34 IST
Last Updated 11 ಸೆಪ್ಟೆಂಬರ್ 2022, 20:34 IST
ಏಷ್ಯಾಕಪ್ ಟ್ರೋಫಿಯೊಂದಿಗೆ ಸಂಭ್ರಮಿಸಿದ ಶ್ರೀಲಂಕಾ ತಂಡದ ಆಟಗಾರರು– ಎಎಫ್‌ಪಿ ಚಿತ್ರ
ಏಷ್ಯಾಕಪ್ ಟ್ರೋಫಿಯೊಂದಿಗೆ ಸಂಭ್ರಮಿಸಿದ ಶ್ರೀಲಂಕಾ ತಂಡದ ಆಟಗಾರರು– ಎಎಫ್‌ಪಿ ಚಿತ್ರ   

ದುಬೈ: ಭಾನುಕಾ ರಾಜಪಕ್ಸ ಅವರ ದಿಟ್ಟ ಬ್ಯಾಟಿಂಗ್‌ ಮತ್ತು ಬೌಲರ್‌ಗಳ ಚುರುಕಿನ ದಾಳಿಯ ನೆರವಿನಿಂದ ಶ್ರೀಲಂಕಾ ತಂಡ ಏಷ್ಯಾಕಪ್‌ ಗೆದ್ದುಕೊಂಡು ಸಂಭ್ರಮಿಸಿತು.

ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಟಿ20 ಟೂರ್ನಿಯ ಫೈನಲ್‌ನಲ್ಲಿ ಲಂಕಾ, 23 ರನ್‌ಗಳಿಂದ ಪಾಕಿಸ್ತಾನ ತಂಡವನ್ನು ಮಣಿಸಿತು.ಮೊದಲು ಬ್ಯಾಟ್‌ ಮಾಡಿದ ದಸುನ್‌ ಶನಕ ಬಳಗ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 170 ರನ್‌ ಪೇರಿಸಿದರೆ, ಬಾಬರ್‌ ಅಜಂ ನೇತೃತ್ವದ ಪಾಕಿಸ್ತಾನ 20 ಓವರ್‌ಗಳಲ್ಲಿ 147 ರನ್‌ಗಳಿಗೆ ಆಲೌಟಾಯಿತು.

ಐದನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಬ್ಯಾಟರ್ ಭಾನುಕಾ (ಔಟಾಗದೆ 71; 45ಎ, 4X6, 6X3) ಅವರ ಸೊಗಸಾದ ಆಟದ ಜತೆಗೆ ಪ್ರಮೋದ್‌ ಮಧುಶನ್ (34ಕ್ಕೆ 4) ಮತ್ತು ವಣಿಂದು ಹಸರಂಗ (27ಕ್ಕೆ 3) ತೋರಿದ ಕೈಚಳಕ ಲಂಕಾ ತಂಡಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟಿತು.

ADVERTISEMENT

ಸವಾಲಿನ ಗುರಿ ಬೆನ್ನಟ್ಟಿದ ಪಾಕ್‌ ತಂಡ ಬಾಬರ್‌ (5) ಮತ್ತು ಫಖರ್‌ ಜಮಾನ್‌ (0) ಅವರನ್ನು ಬೇಗನೇ ಕಳೆದುಕೊಂಡಿತು. ಮೊಹಮ್ಮದ್‌ ರಿಜ್ವಾನ್‌ (55 ರನ್‌, 49 ಎ., 4X4, 6X1) ಹಾಗೂ ಇಫ್ತಿಕಾರ್ ಅಹ್ಮದ್‌ (32 ರನ್‌, 31 ಎ., 4X2, 6X1) ಎರಡನೇ ವಿಕೆಟ್‌ಗೆ 71 ರನ್‌ ಸೇರಿಸಿ ಗೆಲುವಿನ ಆಸೆ ಜೀವಂತವಾಗಿರಿಸಿಕೊಂಡರು.

14ನೇ ಓವರ್‌ನಲ್ಲಿ ಇಫ್ತಿಕಾರ್‌ ವಿಕೆಟ್‌ ಪಡೆದ ಮಧುಶನ್‌ ಈ ಜತೆಯಾಟ ಮುರಿದರು. ಆ ಬಳಿಕ ಲಂಕಾ ಬೌಲರ್‌ಗಳು ಪಂದ್ಯದ ಮೇಲೆ ಹಿಡಿತ ಬಿಗಿಗೊಳಿಸಿದರು. ರನ್‌ರೇಟ್‌ ಹೆಚ್ಚಿಸುವ ಪ್ರಯತ್ನದಲ್ಲಿ ಪಾಕ್‌ ತಂಡ ಒಂದೊಂದೇ ವಿಕೆಟ್‌ಗಳನ್ನು ಕಳೆದುಕೊಂಡು ಸೋಲಿನ ಹಾದಿ ಹಿಡಿಯಿತು.

ರಾಜಕೀಯ ಬಿಕ್ಕಟ್ಟು ಮತ್ತು ಆರ್ಥಿಕ ಸಂಕಷ್ಟದಿಂದ ನಲುಗಿರುವ ದ್ವೀಪರಾಷ್ಟ್ರದ ಜನರಿಗೆ ಲಂಕಾ ಕ್ರಿಕೆಟ್‌ ತಂಡ ಈ ಮೂಲಕ ಅಲ್ಪ ಸಂಭ್ರಮ ತಂದುಕೊಟ್ಟಿತು.

ಭಾನುಕಾ ಆಸರೆ: ಇದಕ್ಕೂ ಮುನ್ನ ಪಾಕ್ ತಂಡದ ಯುವ ಬೌಲರ್ ನಸೀಮ್ ಶಾ ಮೊದಲ ಓವರ್‌ನಲ್ಲಿಯೇ ಕುಶಾಲ ಮೆಂಡಿಸ್ ವಿಕೆಟ್ ಗಳಿಸಿದರು. ಹ್ಯಾರಿಸ್ ರವೂಫ್ (29ಕ್ಕೆ3) ಕೂಡ ಇನ್ನೊಂದು ಬದಿಯಿಂದ ಪರಿಣಾಮಕಾರಿ ದಾಳಿ ನಡೆಸಿದರು. ಅದರಿಂದ ಲಂಕಾ ತಂಡವು 58 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಳೆದುಕೊಂಡಿತು.

ಭಾನುಕಾ ಹಾಗೂ ವಣಿಂದು ಹಸರಂಗಾ (36; 21ಎ) ಆರನೇ ವಿಕೆಟ್ ಜೊತೆಯಾಟದಲ್ಲಿ 68 ರನ್‌ ಸೇರಿಸಿದರು. ಈ ಹಂತದಲ್ಲಿ ಪಾಕ್ ಫೀಲ್ಡರ್‌ಗಳು ಮಾಡಿಕೊಂಡ ಎಡವಟ್ಟುಗಳು ತುಟ್ಟಿಯಾದವು.

ಎರಡು ಬಾರಿ ಭಾನುಕಾ ಅವರ ಕ್ಯಾಚ್ ಕೈಚೆಲ್ಲಿದರು. ಇದರ ಸಂಪೂರ್ಣ ಲಾಭ ಪಡೆದ ಅವರು ತಂಡದ ಮೊತ್ತ ಹೆಚ್ಚಿಸಿದರು. ಕೊನೆಯ ಐದು ಓವರ್‌ಗಳಲ್ಲಿ ತಂಡದ ಮೊತ್ತಕ್ಕೆ 54 ರನ್‌ಗಳು ಸೇರುವಲ್ಲಿ ಅವರ ಆಟವೇ ಮಹತ್ವದ್ದಾಯಿತು.

ಸಂಕ್ಷಿಪ್ತ ಸ್ಕೋರ್‌: ಶ್ರೀಲಂಕಾ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 170 (ಪಥಮ್‌ ನಿಸಾಂಕಾ 8, ಧನಂಜಯ ಡಿಸಿಲ್ವಾ 28, ಭಾನುಕಾ ರಾಜಕಪ್ಸ 71, ವಣಿಂದು ಹಸರಂಗಾ 36, ಚಾಮಿಕ ಕರುಣಾರತ್ನೆ 14, ಹ್ಯಾರಿಸ್‌ ರವೂಫ್‌ 29ಕ್ಕೆ 3, ಇಫ್ತಿಕಾರ್‌ ಅಹ್ಮದ್‌ 21ಕ್ಕೆ1).

ಪಾಕಿಸ್ತಾನ: 20 ಓವರ್‌ಗಳಲ್ಲಿ 147 (ಮೊಹಮ್ಮದ್‌ ರಿಜ್ವಾನ್‌ 55, ಇಫ್ತಿಕಾರ್‌ ಅಹ್ಮದ್‌ 32, ಹ್ಯಾರಿಸ್‌ ರವೂಫ್‌ 13, ಪ್ರಮೋದ್‌ ಮಧುಶನ್ 34ಕ್ಕೆ 4, ವಣಿಂದು ಹಸರಂಗ 27ಕ್ಕೆ 3) ಫಲಿತಾಂಶ: ಶ್ರೀಲಂಕಾಕ್ಕೆ 23 ರನ್‌ ಗೆಲುವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.