ADVERTISEMENT

ICC Women's ODI Batting Rankings: ಅಗ್ರಸ್ಥಾನಕ್ಕೇರಿದ ಸ್ಮೃತಿ ಮಂದಾನ

ಪಿಟಿಐ
Published 3 ಮಾರ್ಚ್ 2026, 14:08 IST
Last Updated 3 ಮಾರ್ಚ್ 2026, 14:08 IST
ಸ್ಮೃತಿ ಮಂದಾನ
ಸ್ಮೃತಿ ಮಂದಾನ   

ದುಬೈ: ಭಾರತ ತಂಡದ ಆರಂಭ ಆಟಗಾರ್ತಿ ಸ್ಮೃತಿ ಮಂದಾನ ಅವರು ಐಸಿಸಿ ಮಹಿಳಾ ಏಕದಿನ ಬ್ಯಾಟಿಂಗ್ ಕ್ರಮಾಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಇತ್ತೀಚೆಗೆ ನಡೆದ ಮೂರು ಪಂದ್ಯಗಳ ಸರಣಿಯಲ್ಲಿ ನೀಡಿದ ಉತ್ತಮ ಪ್ರದರ್ಶನ ಇದಕ್ಕೆ ಕಾರಣವಾಗಿದೆ.

ಮಂದಾನ ಆ ಸರಣಿಯಲ್ಲಿ 58 ಮತ್ತು 31 ರನ್ ಗಳಿಸಿದ್ದರು. ಅವರು 790 ಪಾಯಿಂಟ್ಸ್ ಕಲೆಹಾಕಿದರೆ, ದಕ್ಷಿಣ ಆಫ್ರಿಕಾದ ಲಾರಾ ವೋಲ್ವಾರ್ಟ್‌ (782) ಎರಡನೇ ಸ್ಥಾನದಲ್ಲಿದ್ದಾರೆ. ಈ ತಿಂಗಳು ಮತ್ತು ಏಪ್ರಿಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವು ನ್ಯೂಜಿಲೆಂಡ್ ವಿರುದ್ಧ ಆಡಲಿದ್ದು, ಲಾರಾ ಅವರಿಗೆ ಮರಳಿ ಅಗ್ರಸ್ಥಾನಕ್ಕೇರುವ ಅವಕಾಶವಿದೆ.

ತಮ್ಮ ಕೊನೆಯ ಏಕದಿನ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿ ವಿದಾಯ ಹೇಳಿದ್ದ ಆಸ್ಟ್ರೇಲಿಯಾದ ಅಲಿಸಾ ಹೀಲಿ ನಾಲ್ಕನೇ ಸ್ಥಾನ (744) ಗಳಿಸಿದ್ದಾರೆ. ಬೆತ್ ಮೂನಿ (749) ಮತ್ತು ಆ್ಯಶ್ಲೆ ಗಾರ್ಡನರ್ (724) ಮಧ್ಯೆ ಅವರಿದ್ದಾರೆ.

ADVERTISEMENT

ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ 9ನೇ ಸ್ಥಾನ ಗಳಿಸಿ ಅಗ್ರ 10ರೊಳಗೆ ಸ್ಥಾನ ಪಡೆದಿದ್ದಾರೆ. ಜೆಮಿಮಾ ರಾಡ್ರಿಗಸ್‌ 12ನೇ ಸ್ಥಾನದಲ್ಲಿದ್ದಾರೆ. ಕೌರ್, ಇತ್ತೀಚಿನ ಸರಣಿಯಲ್ಲಿ 53, 54 ಮತ್ತು 25 ರನ್ ಗಳಿಸಿದ್ದರು.

ಬೌಲರ್‌ಗಳ ವಿಭಾಗದಲ್ಲಿ ದೀಪ್ತಿ ಶರ್ಮಾ 10ನೇ ಸ್ಥಾನದಲ್ಲಿದ್ದಾರೆ. ಅವರು ಅಗ್ರ 10ರಲ್ಲಿ ಕಾಣಿಸಿಕೊಂಡಿರುವ ಭಾರತದ ಏಕೈಕ ಬೌಲರ್ ಸಹ ಆಗಿದ್ದಾರೆ. ಅಲನಾ ಕಿಂಗ್ (775) ಅಗ್ರಸ್ಥಾನಕ್ಕೇರಿದ್ದು, ಸೋಫಿ ಎಕ್ಲೆಸ್ಟೋನ್ ಅವರ ನಾಲ್ಕು ವರ್ಷಗಳ ಆಧಿಪತ್ಯ ಕೊನೆಗೊಳಿಸಿದ್ದಾರೆ. ಆ್ಯಶ್ಲೆ ಗಾರ್ಡನರ್ ಮೂರನೇ ಸ್ಥಾನದಲ್ಲಿದ್ದಾರೆ.

ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಆ್ಯಶ್ಲೆ ಗಾರ್ಡನರ್ (516) ಅಗ್ರಸ್ಥಾನದಲ್ಲಿದ್ದಾರೆ. ಅವರಿಗೂ ಎರಡನೇ ಸ್ಥಾನದಲ್ಲಿರುವ ವೆಸ್ಟ್‌ ಇಂಡೀಸ್‌ನ ಹೇಯ್ಲಿ ಮ್ಯಾಥ್ಯೂಸ್ (418) ಅವರಿಗೂ ಸಾಕಷ್ಟು ಅಂತರವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.