ADVERTISEMENT

ಕ್ರಿಕೆಟ್ | ಜೊತೆಯಾಗಿ ಕುಡಿದು ಮಗನಿಂದಲೇ ಸಾವಿಗೀಡಾದ ಮಾಜಿ ರಣಜಿ ಆಟಗಾರ ಜಯಮೋಹನ್

ಪಿಟಿಐ
Published 10 ಜೂನ್ 2020, 19:30 IST
Last Updated 10 ಜೂನ್ 2020, 19:30 IST
ಕ್ರಿಕೆಟ್
ಕ್ರಿಕೆಟ್   

ತಿರುವನಂತಪುರ: ಕೇರಳ ರಣಜಿ ತಂಡದ ಮಾಜಿ ಆಟಗಾರ ಜಯಮೋಹನ್ ತಂಬಿ ಅವರ ಕೊಲೆಗೆ ಸಂಬಂಧಿಸಿ ಪುತ್ರನನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಹೋದ ವಾರ ತಮ್ಮ ಮನೆಯಲ್ಲಿ ಜಯಮೋಹನ್ ಕೊಲೆಗೀಡಾಗಿದ್ದರು.

ತಲೆಗೆ ಬಲವಾದ ಪೆಟ್ಟುಬಿದ್ದ ಕಾರಣ ಜಯಮೋಹನ್ ಅವರ ಸಾವು ಸಂಭವಿಸಿದೆ ಎಂದು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ತಿಳಿಸಲಾಗಿದೆ. ಭಾರತೀಯ ದಂಡಸಂಹಿತೆಯ 302ನೇ ವಿಧಿಯಡಿ ಪುತ್ರ ಅಶ್ವಿನ್ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

62 ವರ್ಷದ ಜಯಮೋಹನ್, ಸ್ಟೇಟ್ ಬ್ಯಾಂಕ್ ಆಫ್ ಟ್ರಾವಂಕೂರ್‌ನ (ಎಸ್‌ಬಿಟಿ) ಉಪಪ್ರಧಾನ ವ್ಯವಸ್ಥಾಪಕ ಹುದ್ದೆಯಲ್ಲಿದ್ದು ನಿವೃತ್ತರಾಗಿದ್ದರು. ಕಳೆದ ಶನಿವಾರ ಅವರ ಕೊಲೆಯಾಗಿತ್ತು. ಆದರೆ ಮನೆಯೊಳಗಿನಿಂದ ದುರ್ವಾಸನೆ ಬರುತ್ತಿದೆ ಎಂದು ನೆರೆಮನೆಯವರು ಸೋಮವಾರ ತಿಳಿಸಿದಾಗಲೇ ಕೊಲೆ ನಡೆದದ್ದು ಗೊತ್ತಾಗಿದೆ.

ADVERTISEMENT

ತಂದೆ ಮತ್ತು ಮಗ ಮನೆಯಲ್ಲಿ ಜೊತೆಯಾಗಿ ಮದ್ಯ ಸೇವಿಸಿದ್ದಾರೆ. ಈ ಸಂದರ್ಭದಲ್ಲಿ ತನ್ನ ಎಟಿಎಂ ಕಾರ್ಡ್‌ ವಾಪಸ್ ನೀಡುವಂತೆ ಜಯಮೋಹನ್ ಕೇಳಿದ್ದಾರೆ. ವಾಗ್ವಾದ ನಡೆದು ತಂದೆಯನ್ನು ಮಗ ತಳ್ಳಿದ್ದಾನೆ. ಆಗ ಗೋಡೆಗೆ ತಲೆ ಬಡಿದು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

‘ತಂದೆ ಕೆಳಗೆ ಬಿದ್ದಿರುವುದಾಗಿ ಸಹೋದರ ಮತ್ತು ಸಂಬಂಧಿಕರಿಗೆ ತಿಳಿಸಿದೆ. ಆದರೆ ಯಾರೂ ನೆರವಿಗೆ ಬರಲಿಲ್ಲ. ಹೀಗಾಗಿ ಕೊಠಡಿಯಲ್ಲಿ ಕುಡಿಯುತ್ತಲೇ ಕುಳಿತೆ’ ಎಂದು ಅಶ್ವಿನ್ ಹೇಳಿರುವುದಾಗಿ ಪೊಲೀಸರು ವಿವರಿಸಿದ್ದಾರೆ. ಘಟನೆ ಬೆಳಕಿಗೆ ಬರುವವರೆಗೂ ಅಶ್ವಿನ್ ಅದೇ ಮನೆಯಲ್ಲಿ ಮಲಗಿದ್ದ ಎಂದು ಕೂಡ ಅವರು ತಿಳಿಸಿದ್ದಾರೆ. ಸೋಮವಾರ ನಡೆದ ಅಂತ್ಯಸಂಸ್ಕಾರದಲ್ಲಿ ಅಶ್ವಿನ್ ಪಾಲ್ಗೊಂಡಿದ್ದ.

‘ತಂದೆ ಸಾವಿಗೀಡಾಗಿರುವುದು ನನಗೆ ತಿಳಿದೇ ಇರಲಿಲ್ಲ ಎಂದು ಆರಂಭದಲ್ಲಿ ಅಶ್ವಿನ್ ಹೇಳಿದ್ದ. ಆದರೆ ನಂತರ ತಪ್ಪೊಪ್ಪಿಕೊಂಡ. ತಂದೆ ಕೆಳಗೆ ಬಿದ್ದ ನಂತರ ಎಳೆದುಕೊಂಡು ಹೋಗಿ ಹಾಲ್‌ನಲ್ಲಿ ಮಲಗಿಸಿದ ಅಶ್ವಿನ್ ನಂತರ ತನ್ನ ಕೊಠಡಿಯಲ್ಲಿ ಕುಡಿಯುತ್ತ ಕುಳಿತಿದ್ದ’ ಎಂದು ಪೊಲೀಸರು ತಿಳಿಸಿದ್ದಾರೆ.

ಆಲಪ್ಪುಳದಲ್ಲಿ ಜನಿಸಿದ ಜಯಮೋಹನ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿದ್ದರು. ಕೇರಳ ರಾಜ್ಯಕ್ಕಾಗಿ ಆರು ಪ್ರಥಮ ದರ್ಜೆ ಪಂದ್ಯಗಳಲ್ಲಿ ಆಡಿದ್ದಾರೆ. ಎರಡು ವರ್ಷ ಎಸ್‌ಬಿಟಿ ತಂಡದಲ್ಲಿ ಆಡಿದ ನಂತರ ಅದೇ ಬ್ಯಾಂಕ್‌ನಲ್ಲಿ ಉದ್ಯೋಗಕ್ಕೆ ಸೇರಿದರು. ಬ್ಯಾಂಕ್‌ಗಾಗಿ 20 ವರ್ಷ ಆಡಿದ್ದಾರೆ. ಪತ್ನಿ ಎರಡು ವರ್ಷಗಳ ಹಿಂದೆ ಮೃತಪಟ್ಟಿದ್ದು ಕಿರಿಯ ಪುತ್ರ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.