ಸೌರವ್ ಗಂಗೂಲಿ
(ಚಿತ್ರ ಕೃಪೆ: ಪ್ರಿಟೋರಿಯಾ ಕ್ಯಾಪಿಟಲ್ಸ್/ಇನ್‌ಸ್ಟಾಗ್ರಾಂ)
ಸೆಂಚುರಿಯನ್: ದಕ್ಷಿಣ ಆಫ್ರಿಕಾ ಟ್ವೆಂಟಿ-20 ಕ್ರಿಕೆಟ್‌ನ ಫ್ರಾಂಚೈಸಿ ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡದ ಮುಖ್ಯ ಕೋಚ್ ಆಗಿ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಅವರು ನೇಮಕಗೊಂಡಿದ್ದಾರೆ.
ಸೆಂಚುರಿಯನ್ ಮೂಲದ ಪ್ರಿಟೋರಿಯಾ ಕ್ಯಾಪಿಟಲ್ಸ್, ಮುಂಬರುವ 2026ರ ಋತುವಿಗೆ ಮುನ್ನ ದಾದಾ ಅವರನ್ನು ಮುಖ್ಯ ತರಬೇತುದಾರರಾಗಿ ನೇಮಕ ಮಾಡಿದೆ.
ಇಂಗ್ಲೆಂಡ್‌ನ ಮಾಜಿ ಆಟಗಾರ ಜಾನಥಾನ್ ಟ್ರಾಟ್ ಅವರ ಸ್ಥಾನವನ್ನು ಗಂಗೂಲಿ ತುಂಬಲಿದ್ದಾರೆ.
ಇದೇ ಮೊದಲ ಬಾರಿಗೆ ಕ್ರಿಕೆಟ್ ತಂಡವೊಂದರ ಮುಖ್ಯ ಕೋಚ್ ಹುದ್ದೆಯನ್ನು ಗಂಗೂಲಿ ವಹಿಸುತ್ತಿದ್ದಾರೆ. ಐಪಿಎಲ್‍ನಲ್ಲಿ 2018 ಹಾಗೂ 2019ರ ಅವಧಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದರು.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಹ ಮಾಲೀಕತ್ವ ಹೊಂದಿರುವ ಜೆಎಸ್‌ಡಬ್ಲ್ಯು ಸಂಸ್ಥೆಯು, ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡದ ಮಾಲೀಕತ್ವವನ್ನು ಹೊಂದಿದೆ.
ಕಳೆದ ವರ್ಷವಷ್ಟೇ ಜೆಎಸ್‌ಡಬ್ಲ್ಯು ಸ್ಪೋರ್ಟ್ಸ್‌ನ ಕ್ರಿಕೆಟ್ ನಿರ್ದೇಶಕರಾಗಿ ಗಂಗೂಲಿ ನೇಮಕಗೊಂಡಿದ್ದರು.
2025ರ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಪ್ರಿಟೋರಿಯಾ ಕ್ಯಾಪಿಟಲ್ಸ್ 10 ಪಂದ್ಯಗಳ ಪೈಕಿ ಎರಡರಲ್ಲಷ್ಟೇ ಗೆಲುವು ದಾಖಲಿಸಿತ್ತು. ಅಲ್ಲದೆ ಆರು ತಂಡಗಳ ಟಿ20 ಲೀಗ್‌ನಲ್ಲಿ ಐದನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.