ADVERTISEMENT

IND vs SA: ಸರಣಿ ಸಮಬಲದತ್ತ ಭಾರತ ಚಿತ್ತ; ಚಾರಿತ್ರಿಕ ಸಾಧನೆಗಾಗಿ ತೆಂಬಾ ಪಡೆ ತವಕ

ಏಜೆನ್ಸೀಸ್
Published 20 ನವೆಂಬರ್ 2025, 23:26 IST
Last Updated 20 ನವೆಂಬರ್ 2025, 23:26 IST
ಗುವಾಹಟಿಯಲ್ಲಿ ಪಿಚ್ ಪರಿಶೀಲಿಸಿದ ಭಾರತ ತಂಡದ ರಿಷಭ್ ಪಂತ್ 
ಗುವಾಹಟಿಯಲ್ಲಿ ಪಿಚ್ ಪರಿಶೀಲಿಸಿದ ಭಾರತ ತಂಡದ ರಿಷಭ್ ಪಂತ್    

ಗುವಾಹಟಿ: ಭಾರತದ ನೆಲದಲ್ಲಿ 25 ವರ್ಷಗಳ ನಂತರ ಸರಣಿ ಗೆಲುವಿನ ದಾಖಲೆ ಬರೆಯಲು ತೆಂಬಾ ಬವುಮಾ ನಾಯಕತ್ವದ ದಕ್ಷಿಣ ಆಫ್ರಿಕಾ ತುದಿಗಾಲಿನಲ್ಲಿ ನಿಂತಿದೆ. 

ಅಸ್ಸಾಂ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಶುಕ್ರವಾರ ಆರಂಭವಾಗಲಿರುವ ಸರಣಿಯ ಎರಡನೇ ಮತ್ತು ಕೊನೆಯ ಟೆಸ್ಟ್‌ನಲ್ಲಿ ಉಭಯ ತಂಡಗಳು ಕಣಕ್ಕಿಳಿಯಲಿವೆ.  ಹಾಲಿ ವಿಶ್ವ ಟೆಸ್ಟ್ ಚಾಂಪಿಯನ್ ದಕ್ಷಿಣ ಆಫ್ರಿಕಾ ತಂಡವು ಸರಣಿಯಲ್ಲಿ ಈಗಾಗಲೇ 1–0 ಮುನ್ನಡೆಯಲ್ಲಿದೆ. 2010ರಲ್ಲಿ ಭಾರತದ ನೆಲದಲ್ಲಿ ಟೆಸ್ಟ್ ಸರಣಿಯನ್ನು 2–0ಯಿಂದ ಜಯಿಸಿತ್ತು. ಸರಣಿಯಲ್ಲಿ 1–1ರ ಸಮಬಲ ಸಾಧಿಸಲು ಆತಿಥೇಯ ತಂಡಕ್ಕೂ ಈ ಟೆಸ್ಟ್‌ನಲ್ಲಿ ಜಯ ದಾಖಲಿಸಲೇಬೇಕಿದೆ. ಡ್ರಾ ಆದರೂ ಪ್ರವಾಸಿ ತಂಡದ ಮುಡಿಗೆ ಸರಣಿ ಕಿರೀಟ ಒಲಿಯಲಿದೆ.  

‘ಈ ವರ್ಷದ ಆರಂಭದಲ್ಲಿ ನಾವು ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಜಯಿಸಿದ್ದೇವೆ. ಲಾರ್ಡ್ಸ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಗೆದ್ದಿದ್ದು ಅವಿರಸ್ಮರಣೀಯ.  15 ವರ್ಷಗಳ ನಂತರ ಭಾರತದಲ್ಲಿ ಪಂದ್ಯ ಗೆದ್ದಿದ್ದು ಸಣ್ಣ ಸಾಧನೆಯೇನಲ್ಲ’ ಎಂದು ಕೋಲ್ಕತ್ತದಲ್ಲಿ ಈಚೆಗೆ ನಡೆದಿದ್ದ ಟೆಸ್ಟ್‌ನಲ್ಲಿ ಜಯಿಸಿದ ನಂತರ ದಕ್ಷಿಣ ಆಫ್ರಿಕಾದ ಕೋಚ್ ಶುಕ್ರಿ ಕಾನರ್ಡ್ ಹೇಳಿದ್ದರು. 

ADVERTISEMENT

ಪ್ರತಿ ಇನಿಂಗ್ಸ್‌ನಲ್ಲಿಯೂ ಅಲ್ಪ ಮೊತ್ತ ದಾಖಲಾದ ಮೊದಲ ಪಂದ್ಯದಲ್ಲಿ ತೆಂಬಾ ಬವುಮಾ ಅವರ ದಿಟ್ಟ ಅರ್ಧಶತಕವು ಗಮನ ಸೆಳೆದಿತ್ತು.  ಮೂರು ದಿನಗಳಲ್ಲಿ ಮುಗಿದ ಪಂದ್ಯದಲ್ಲಿ 124 ರನ್‌ ಗಳ ಗುರಿಯನ್ನು ಬೆನ್ನಟ್ಟಿದ ಭಾರತವು 93ಕ್ಕೆ ಕುಸಿದಿತ್ತು. ಈಡನ್ ಗಾರ್ಡನ್ ಪಿಚ್‌ನಲ್ಲಿ ಉಭಯ ತಂಡಗಳ ಬೌಲರ್‌ಗಳು ಯಶಸ್ವಿಯಾಗಿದ್ದರು. 

ಇದೀಗ ದಕ್ಷಿಣ ಆಫ್ರಿಕಾ ತಂಡಕ್ಕೆ ವೇಗಿ ಲುಂಗಿ ಎನ್‌ಗಿಡಿ ಬಂದು ಸೇರಿಕೊಂಡಿದ್ದಾರೆ. ಪಕ್ಕೆಲುಬಿನ ಗಾಯದಿಂದಾಗಿ ವೇಗಿ ಕಗಿಸೊ ರಬಾಡ ಅವರು ಮೊದಲ ಪಂದ್ಯದಲ್ಲಿ ಆಡಿರಲಿಲ್ಲ. ಈ ಪಂದ್ಯದಲ್ಲ ಅವರು ಕಣಕ್ಕಿಳಿಯುವುದು ಅನುಮಾನ. ಒಟ್ಟು ಎಂಟು ವಿಕೆಟ್ ಗಳಿಸಿದ್ದ ಸ್ಪಿನ್ನರ್ ಸಿಮೊನ್ ಹಾರ್ಮರ್ ಭಾರತ ತಂಡವನ್ನು ಅಪಾರವಾಗಿ ಕಾಡಿದ್ದರು. 

ಗಿಲ್ ಅನುಮಾನ: ನಾಯಕ ಶುಭಮನ್ ಗಿಲ್ ಅವರು ಇಲ್ಲಿ ಆಡುವುದು ಇನ್ನೂ ಖಚಿತವಾಗಿಲ್ಲ. ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವಾಗ ಅವರು ಕತ್ತುನೋವಿನಿಂದಾಗಿ ಆಟ ನಿಲ್ಲಿಸಿದ್ದರು. ಆಸ್ಪತ್ರೆಗೆ ತೆರಳಿದ್ದರು. ಅವರು ಗುವಾಹಟಿಗೆ ತಂಡದೊಂದಿಗೆ ಬಂದಿಳಿದಿದ್ದಾರೆ. ಆದರೆ ಅವರ ಫಿಟ್‌ನೆಸ್ ಕುರಿತು ಶುಕ್ರವಾರವೇ ನಿರ್ಧರಿಸುವುದಾಗಿ ತಂಡದ ಮೂಲಗಳು ತಿಳಿಸಿವೆ. 

ಗಿಲ್ ಆಡದಿದ್ದರೆ ವಿಕೆಟ್‌ಕೀಪರ್ ಬ್ಯಾಟರ್ ರಿಷಭ್ ಪಂತ್ ಅವರು ತಂಡವನ್ನು ಮುನ್ನಡೆಸುವರು. ಮೂರನೇ ಕ್ರಮಾಂಕದ ಬ್ಯಾಟರ್ ಆಗಿ ಸಾಯಿ ಸುದರ್ಶನ್ ಅಥವಾ ಕನ್ನಡಿಗ ದೇವದತ್ತ ಪಡಿಕ್ಕಲ್ ಅವರು ಸ್ಥಾನ ಪಡೆಯುವ ಸಾಧ್ಯತೆ ಇದೆ. 

ಈಡನ್ ಗಾರ್ಡನ್‌ನಲ್ಲಿ ಭಾರತ ತಂಡದ ಅಪೇಕ್ಷೆಯಂತೆ ಸ್ಪಿನ್ ಸ್ನೇಹಿ ಪಿಚ್ ಸಿದ್ಧವಾಗಿತ್ತು. ಆದರೂ ತಂಡವು ಸೋತಿತ್ತು. ಇದರಿಂದಾಗಿ ಕ್ರಿಕೆಟ್ ಪಂಡಿತರಿಂದ ಅಪಾರ ಟೀಕೆಗೊಳಗಾಗಿತ್ತು. 

ಭಾರತ ತಂಡವು ತವರಿನಲ್ಲಿ ಆಡಿದ ಕಳೆದ 6 ಪಂದ್ಯಗಳಲ್ಲಿ ಇದು ನಾಲ್ಕನೇ ಸೋಲಾಗಿದೆ. ಕೆಲವು ತಿಂಗಳುಗಳ ಹಿಂದೆ ಭಾರತ ತಂಡವು 0–3ರಿಂದ ನ್ಯೂಜಿಲೆಂಡ್ ಎದುರು ಸೋತಿತ್ತು. ಇದೀಗ ಅತಿಥೇಯ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ವಿರುದ್ಧ ಟೀಕೆಗಳ ಮಳೆ ಸುರಿಯುತ್ತಿದೆ. 

‘ಈಡನ್‌ ಗಾರ್ಡನ್‌ನಲ್ಲಿ ಇದ್ದ ಪಿಚ್‌ಗಿಂತಲೂ ಉತ್ತಮವಾದ ಅಂಗಣಗಳಲ್ಲಿ ಗೌತಮ್ ಗಂಭೀರ್ ಮತ್ತು ಅವರ ತಂಡದವರು ಆಡಬೇಕು ಎಂದು ನನಗನಿಸುತ್ತದೆ’ ಎಂದು ಬಂಗಾಳ ಕ್ರಿಕೆಟ್ ಸಂಸ್ಥೆ (ಸಿಎಬಿ) ಅಧ್ಯಕ್ಷ ಸೌರವ್ ಗಂಗೂಲಿ ಇಂಡಿಯಾ ಟುಡೆ ಟಿ.ವಿ. ವಾಹಿನಿಯಲ್ಲಿ ಹೇಳಿದ್ದರು. 

ಗಂಭೀರ್ ಅವರು ಕೋಚ್ ಆದ ನಂತರ ಭಾರತ ತಂಡವು 18 ಪಂದ್ಯಗಳನ್ನು ಆಡಿದೆ. ಅದರಲ್ಲಿ 9ರಲ್ಲಿ ಸೋತಿದೆ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಂತಹ ಖ್ಯಾತನಾಮ ಆಟಗಾರರು ಹೋದ ವರ್ಷ ಟಿ20 ಕ್ರಿಕೆಟ್‌  ಮಾದರಿಗೆ ನಿವೃತ್ತಿ ಘೋಷಿಸಿದ್ದರು.  ಈ ವರ್ಷ ಅವರಿಬ್ಬರೂ ಟೆಸ್ಟ್ ಮಾದರಿಗೂ ವಿದಾಯ ಹೇಳಿದ್ದರು. ಗಿಲ್ ಅವರಿಗೆ ನಾಯಕತ್ವ ನೀಡಲಾಗಿತ್ತು.  ಅವರ ನಾಯಕತ್ವದಲ್ಲಿ ಭಾರತ ತಂಡವು ಇಂಗ್ಲೆಂಡ್‌ನಲ್ಲಿ 2–2ರಿಂದ ಟೆಸ್ಟ್ ಸರಣಿ ಸಮಬಲ ಸಾಧಿಸಿತ್ತು. ತವರಿನಲ್ಲಿ ವೆಸ್ಟ್ ಇಂಡೀಸ್ ಎದುರು 2–0ಯಿಂದ ಗೆದ್ದಿತ್ತು. 

ಊಟದ ಹೊತ್ತಿಗೆ ಚಹಾ!

ಗುವಾಹಟಿಯು ಟೆಸ್ಟ್ ಕ್ರಿಕೆಟ್‌ಗೆ ಹೊಸ ತಾಣವಾಗಿದೆ. ಈ ಪ್ರದೇಶದಲ್ಲಿ ಸೂರ್ಯಾಸ್ತವು ಬೇಗನೇ ಆಗುತ್ತದೆ. ಆದ್ದರಿಂದ ಟೆಸ್ಟ್ ಪಂದ್ಯದ ಸಮಯದಲ್ಲಿಯೂ ವ್ಯತ್ಯಾಸವಾಗಿದೆ.  ಬೆಳಿಗ್ಗೆ 8.30ಕ್ಕೆ ಟಾಸ್ ಆಗಲಿದೆ. ಬೆಳಿಗ್ಗೆ 9ಕ್ಕೆ ಆಟ ಆರಂಭವಾಗುವುದು. ಇದರಿಂದಾಗಿ ಚಹಾ ಮತ್ತು ಭೋಜನ ವಿರಾಮವು ಅದಲು ಬದಲಾಗಿದೆ. ಬೆಳಿಗ್ಗೆ 11 ಗಂಟೆಗೆ ಚಹಾ ವಿರಾಮ ಇರಲಿದೆ. 11.20ರಿಂದ ಮಧ್ಯಾಹ್ನ 1.20ರವರೆಗೆ ಎರಡನೇ ಅವಧಿ ಆಟ ನಡೆಯುವುದು. 1.20ರಿಂದ 2 ಗಂಟೆಯವರೆಗೆ ಊಟದ ವಿರಾಮ. ನಂತರ ಸಂಜೆ 4ರವರೆಗೆ ಆಟ ನಡೆಯಲಿದೆ.   ಭಾರತದಲ್ಲಿ ನಡೆಯುವ ಟೆಸ್ಟ್ ಪಂದ್ಯಗಳು ಬೆಳಿಗ್ಗೆ 9.30ಕ್ಕೆ ಆರಂಭವಾಗುವುದು ವಾಡಿಕೆ. 11.30 ರಿಂದ ಮಧ್ಯಾಹ್ನ 12.10 ಊಟ ಹಾಗೂ ಮಧ್ಯಾಹ್ನ 2.10ರಿಂದ 2.30 ಚಹಾ ವಿರಾಮ ಇರುತ್ತದೆ. ಇದೇ ಮೊದಲ ಬಾರಿಗೆ ಟೆಸ್ಟ್ ಪಂದ್ಯಕ್ಕೆ ಆತಿಥ್ಯ ವಹಿಸುತ್ತಿರುವ ಗುವಾಹಟಿಯಲ್ಲಿ ಈ ಸಂಪ್ರದಾಯ ಬದಲಾಗಲಿದೆ.