ADVERTISEMENT

Test Championship: ಲೆಂಗಾದಿಂದ ಲಾರ್ಡ್ಸ್‌ ಎತ್ತರಕ್ಕೆ ಬೆಳೆದ ತೆಂಬಾ ಬವುಮಾ

ಪಿಟಿಐ
Published 15 ಜೂನ್ 2025, 4:12 IST
Last Updated 15 ಜೂನ್ 2025, 4:12 IST
<div class="paragraphs"><p>ತೆಂಬಾ ಬವುಮಾ</p></div>

ತೆಂಬಾ ಬವುಮಾ

   

ನವದೆಹಲಿ: ‘ಹೆಸರಲ್ಲಿ ಏನಿದೆ?’ ಎಂದು ತೆಂಬಾ ಬವುಮಾ ಅವರನ್ನು ಕೇಳಬೇಡಿ.

ದಕ್ಷಿಣ ಆಫ್ರಿಕಾ ತಂಡಕ್ಕೆ ಅವರು ನಾಯಕರಾಗುವ ಮುನ್ನ ಅನುಭವಿಸಿದ ಟೀಕೆ, ವ್ಯಂಗ್ಯ, ಅವಮಾನಗಳಿಗೆ ಲೆಕ್ಕವೇ ಇಲ್ಲ. ಅವರ ಬ್ಯಾಟಿಂಗ್ ಸರಾಸರಿಯ ಬಗ್ಗೆ ಟೀಕಿಸಿದರು. ಅವರ ದೇಹಾಕೃತಿಯನ್ನು ಅವಮಾನಿಸಲಾಯಿತು. ಅವರ ಹೆಸರನ್ನೇ ಲೇವಡಿ ಮಾಡಿದರು. ಆದರೆ ಅದೇ ತೆಂಬಾ ಬವುಮಾ ನಾಯಕತ್ವದಲ್ಲಿ ಇವತ್ತು ದಕ್ಷಿಣ ಆಫ್ರಿಕಾ ತಂಡವು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಗೆದ್ದಿದೆ.

ADVERTISEMENT

ಆಫ್ರಿಕಾದ ಲೆಂಗಾದಲ್ಲಿ ಜನಿಸಿದ್ದ ಬವುಮಾಗೆ ‘ತೆಂಬಾ’ ಎಂದು ಅವರ ಅಜ್ಜಿ ನಾಮಕರಣ ಮಾಡಿದ್ದರಂತೆ. ಝುಲು ಜನಾಂಗದಲ್ಲಿ ತೆಂಬಾ ಎಂದರೆ ಭರವಸೆ ಎಂಬ ಅರ್ಥ ಇದೆ. ಅದಕ್ಕೆ ತಕ್ಕಂತೆ ತೆಂಬಾ ತಮ್ಮ ಜೀವನದ ಯಾವುದೇ ಹಂತದಲ್ಲಿಯೂ ಎದೆಗುಂದಲಿಲ್ಲ. ಅದಕ್ಕಾಗಿಯೇ ಅವರು ತಮ್ಮ ಕನಸಿನ ಕ್ರೀಡಾಂಗಣ ಲಾರ್ಡ್ಸ್‌ನಲ್ಲಿ ಚಾಂಪಿಯನ್‌ ಕ್ಯಾಪ್ಟನ್ ಆಗಿ ಮೆರೆದರು.

ಫೈನಲ್‌ನಲ್ಲಿ ಶನಿವಾರ ಕೈಲ್ ವೆರೆಯೆನ್ ಅವರು ವಿಜಯದ ರನ್‌ ಪೂರೈಸುತ್ತಿದ್ದಂತೆಯೇ ಡ್ರೆಸಿಂಗ್‌ ರೂಮ್‌ನಲ್ಲಿ ದ್ದ ತೆಂಬಾ ತಮ್ಮ ಕೈಗಳಿಂದ ಮುಖ ಮುಚ್ಚಿಕೊಂಡರು. ಆರ್ದ್ರವಾಗಿದ್ದ ಕಂಗಳನ್ನು ಮುಚ್ಚಿಕೊಳ್ಳುವ ಪ್ರಯತ್ನ ಮಾಡಿದರು. ಸಹ ಆಟಗಾರ ರೆಲ್ಲರನ್ನೂ ಅವರನ್ನು ಸುತ್ತುವರಿದು ಅಪ್ಪಿಕೊಂಡರು. 27 ವರ್ಷದ ನಂತರ ದಕ್ಷಿಣ ಆಫ್ರಿಕಾ ತಂಡವನ್ನು ಐಸಿಸಿ ಟ್ರೋಫಿ ವಿಜಯದತ್ತ ಮುನ್ನಡೆಸಿದ್ದು ತೆಂಬಾ ಪಾಲಿಗೆ ಭಾವನಾತ್ಮಕವಾಗಿತ್ತು.

‘ರೇನ್‌ಬೋ ನೇಷನ್’ ಎಂದೇ ಖ್ಯಾತವಾಗಿರುವ ದಕ್ಷಿಣ ಆಫ್ರಿಕಾಕ್ಕೆ ಐಸಿಸಿ ಟ್ರೋಫಿ ಗೆದ್ದುಕೊಂಡ ಮೊದಲ ಕಪ್ಪುವರ್ಣೀಯ ನಾಯಕ ತೆಂಬಾ ಅವರು. 10 ಐಸಿಸಿ ಟ್ರೋಫಿಗಳನ್ನು ಗೆದ್ದಿರುವ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಫೈನಲ್‌ನಲ್ಲಿ ಮಣಿಸಿದ್ದು ತೆಂಬಾ ಬಳಗದ ಮಹಾಸಾಧನೆಯೇ ಸರಿ. ಇದು ಕೇವಲ ಈ ತಂಡದ ಗೆಲುವಲ್ಲ. ದಕ್ಷಿಣ ಆಫ್ರಿಕಾದ ಕಪ್ಪುವರ್ಣಿಯರೆಲ್ಲರಿಗೆ ಸಿಕ್ಕ ಜಯ. ಹಲವಾರು ವರ್ಷಗಳಿಂದ ವರ್ಣ ತಾರತಮ್ಯದ ಅವಮಾನ ಅನುಭವಿಸಿದ ಮನಗಳಿಗೆ ಚೈತನ್ಯ ತುಂಬುವ ಗೆಲುವು ಇದು. ‘ಲಿಟ್ಲ್‌ ಬಿಗ್‌ ಮ್ಯಾನ್’ ತೆಂಬಾ, ಲಾರ್ಡ್ಸ್‌ನ ಲಾಂಗ್‌ ರೂಮ್‌ ಮೂಲಕ ನಡೆದುಕೊಂಡು ಮೈದಾನಕ್ಕೆ ಪ್ರವೇಶಿಸಿದರು. ಚಿನ್ನದ ರಾಜದಂಡವನ್ನು ಪಡೆದು ಸಂಭ್ರಮಿಸಿದರು. ದಕ್ಷಿಣ ಆಫ್ರಿಕಾದ ಸಾಮಾಜಿಕ ಇತಿಹಾಸದ ಪುಟಗಳಲ್ಲಿ ತೆಂಬಾ, ಕಗಿಸೊ ರಬಾಡ ಮತ್ತು ಲುಂಗಿ ಎನ್‌ಗಿಡಿ ಅವರ ಹೆಸರು ಸುವರ್ಣಾಕ್ಷರಗಳಲ್ಲಿ ಅಚ್ಚಾಗಲಿದೆ. ಅವರೊಂದಿಗೆ ಭಾರತೀಯ ಮೂಲದ ಕೇಶವ್ ಮಹಾರಾಜ, ಸೆನುರನ್ ಮುತ್ತುಸಾಮಿ, ದಕ್ಷಿಣ ಆಫ್ರಿಕಾದ ಶ್ವೇತವರ್ಣೀಯರಾದ ಏಡನ್ ಮರ್ಕರಂ, ಡೇವಿಡ್ ಬೆಡಿಂಗಂ ಮತ್ತು ಟ್ರಿಸ್ಟನ್ ಸ್ಟಬ್ಸ್ ಸಹ ಇತಿಹಾಸದ ಪುಟ ಸೇರಲಿದ್ದಾರೆ.

ಎಲ್ಲಕ್ಕಿಂತ ಮುಖ್ಯವಾಗಿ 5.4 ಅಡಿ ಎತ್ತರದ ‘ವಾಮನಮೂರ್ತಿ’ ತೆಂಬಾ ಅವರು ತಾವು ಕ್ರಿಕೆಟ್‌ ಆಟದಲ್ಲಿ ಯಶಸ್ವಿ ನಾಯಕ ಎಂಬುದನ್ನು ತೋರಿಸಿ ಕೊಟ್ಟಿದ್ದಾರೆ. ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು ಮೊದಲ ಇನಿಂಗ್ಸ್‌ನಲ್ಲಿ ಹಿನ್ನಡೆ ಅನುಭವಿಸಿದ ನಂತರವೂ ಪುಟಿದೆದ್ದು ಗೆದ್ದಿದ್ದು ಅವರ ನಾಯಕತ್ವಕ್ಕೆ ಹಿಡಿದ ಕನ್ನಡಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.