ADVERTISEMENT

Champions Trophy: ಇಂಗ್ಲೆಂಡ್‌ಗೆ 3ನೇ ಸೋಲು; ಗೆಲುವಿನೊಡನೆ ಸೆಮಿಗೆ ದ.ಆಫ್ರಿಕಾ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2025, 16:11 IST
Last Updated 1 ಮಾರ್ಚ್ 2025, 16:11 IST
ಮಾರ್ಕೊ ಯಾನ್ಸನ್‌ 
ಎಎಫ್‌ಪಿ ಚಿತ್ರ
ಮಾರ್ಕೊ ಯಾನ್ಸನ್‌ ಎಎಫ್‌ಪಿ ಚಿತ್ರ   

ಕರಾಚಿ (ಪಿಟಿಐ): ಇಂಗ್ಲೆಂಡ್ ತಂಡದ ಪರದಾಟ ಮುಂದುವರಿಯಿತು. ಜೋಸ್‌ ಬಟ್ಲರ್‌ ಬಳಗದ ಮೇಲೆ ಶನಿವಾರ ನಡೆದ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್‌ ಟೂರ್ನಿ ಪಂದ್ಯದಲ್ಲಿ ಏಳು ವಿಕೆಟ್‌ಗಳ ಸುಲಭ ಗೆಲುವು ಪಡೆದ ದಕ್ಷಿಣ ಆಫ್ರಿಕಾ ತಂಡ  ‘ಬಿ’ ಗುಂಪಿನಲ್ಲಿ ಅಗ್ರಸ್ಥಾನದೊಡನೆ ಸೆಮಿಫೈನಲ್ ತಲುಪಿತು.

ಟಾಸ್‌ ಗೆದ್ದು ಬ್ಯಾಟಿಂಗ್ ಮಾಡಲು ನಿರ್ಧರಿಸಿದ ಇಂಗ್ಲೆಂಡ್ ತಂಡವನ್ನು ಕೇವಲ 179 ರನ್‌ಗಳಿಗೆ ಆಲೌಟ್‌ ಮಾಡಿದ ಹರಿಣಗಳ ಪಡೆ, ನಂತರ 20.5 ಓವರುಗಳು ಬಾಕಿಯಿರುವಂತೆ 3 ವಿಕೆಟ್‌ಗೆ 181 ರನ್ ಹೊಡೆಯಿತು. ಈ ಮೊದಲೇ ಹೊರಬಿದ್ದಿದ್ದ ಇಂಗ್ಲೆಂಡ್ ಟೂರ್ನಿಯಲ್ಲಿ ಆಡಿದ ಮೂರೂ ಪಂದ್ಯಗಳಲ್ಲಿ ಮುಖಭಂಗ ಅನುಭವಿಸಿತು.

ದಕ್ಷಿಣ ಆಫ್ರಿಕಾ 3 ಪಂದ್ಯಗಳಲ್ಲಿ ಎರಡು ಗೆದ್ದುಕೊಂಡಿತು. ಒಂದು ಪಂದ್ಯ ಮಳೆಯ ಪಾಲಾಗಿದ್ದು, 5 ಪಾಯಿಂಟ್‌ಗಳೊಡನೆ ಅಗ್ರಸ್ಥಾನ ಪಡೆಯಿತು. ಆಸ್ಟ್ರೇಲಿಯಾ (4 ಪಾಯಿಂಟ್‌) ಎರಡನೇ ಸ್ಥಾನ ಗಳಿಸಿತು. ಅಫ್ಗಾನಿಸ್ತಾನ (3 ಪಾಯಿಂಟ್‌) ಮೂರನೇ ಸ್ಥಾನ ಪಡೆಯಿತು.

ADVERTISEMENT

ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಭಾನುವಾರ ನಡೆಯಲಿರುವ ‘ಎ’ ಗುಂಪಿನ ಕೊನೆಯ ಪಂದ್ಯದ ನಂತರ ಸೆಮಿಫೈನಲ್ ಮುಖಾಮುಖಿ ನಿರ್ಧಾರವಾಗಲಿದೆ.

ಮಾರ್ಕೊ ಯಾನ್ಸನ್‌ (39ಕ್ಕೆ3), ವಿಯಾನ್ ಮುಲ್ಡರ್‌ (25ಕ್ಕೆ3) ದಾಳಿಗೆ ಸಿಲುಕಿದ ಇಂಗ್ಲೆಂಡ್‌ ಕೇವಲ 179 ರನ್‌ಗಳಿಗೆ ಉರುಳಿತು. 180 ರನ್‌ಗಳ ಗುರಿ ಬೆಂಬತ್ತಿದ ದಕ್ಷಿಣ ಆಫ್ರಿಕಾ ತಂಡ, ಟ್ರಿಸ್ಟನ್ ಸ್ಟಬ್ಸ್ (0) ಮತ್ತು ರಯಾನ್ ರಿಕೆಲ್ಟನ್‌ (27) ಅವರನ್ನು 41 ರನ್‌ಗಳಾಗುಷ್ಟರಲ್ಲಿ ಕಳೆದುಕೊಂಡಿತು. ಆದರೆ ರಸಿ ವಾನ್‌ಡರ್ ಡಸೆ (ಔಟಾಗದೇ 72, 87 ಎಸೆತ, 4x6, 6x3) ಮತ್ತು ಹೆನ್ರಿಚ್‌ ಕ್ಲಾಸೆನ್‌ (64, 56 ಎಸೆತ, 4x11) ಅವರು ಮೂರನೇ ವಿಕೆಟ್‌ಗೆ 127 ರನ್ ಸೇರಿಸಿ ತಂಡವನ್ನು ಗೆಲುವಿನ ಹಾದಿಗೆ ಒಯ್ದರು.

ಇದಕ್ಕೆ ಮೊದಲು ಇಂಗ್ಲೆಂಡ್ ಪರ ಜೋ ರೂಟ್ ಗಳಿಸಿದ್ದ 37 ರನ್‌ಗಳೇ ತಂಡದ ಪರ ಅತ್ಯಧಿಕ ಎನಿಸಿತು.

ಸಂಕ್ಷಿಪ್ತ ಸ್ಕೋರು

ಇಂಗ್ಲೆಂಡ್‌: 38.2 ಓವರುಗಳಲ್ಲಿ 179 (ಬೆನ್‌ ಡಕೆಟ್‌ 24, ಜೋ ರೂಟ್‌ 37, ಜೋಫ್ರಾ ಆರ್ಚರ್ 25; ಮಾರ್ಕೊ ಯಾನ್ಸನ್ 39ಕ್ಕೆ3, ವಿಯಾನ್ ಮುಲ್ಡರ್ 25ಕ್ಕೆ3, ಕೇಶವ ಮಹಾರಾಜ್ 35ಕ್ಕೆ2);

ದಕ್ಷಿಣ ಆಫ್ರಿಕಾ: 29.1 ಓವರುಗಳಲ್ಲಿ 3 ವಿಕೆಟ್‌ಗೆ 181 (ರಯಾನ್ ರಿಕೆಲ್ಟನ್ 27, ರಸಿ ವಾನ್‌ಡರ್‌ ಡಸೆ ಔಟಾಗದೇ 72, ಹೆನ್ರಿಚ್‌ ಕ್ಲಾಸೆನ್ 64; ಆರ್ಚರ್‌ 55ಕ್ಕೆ2)

ಪಂದ್ಯದ ಆಟಗಾರ: ಮಾರ್ಕೊ ಯಾನ್ಸೆನ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.