ADVERTISEMENT

South Africa vs Pakistan| ಸ್ಪಿನ್ ಬಲೆಯಲ್ಲಿ ಬಂದಿಯಾದ ಪಾಕಿಸ್ತಾನ

ಏಜೆನ್ಸೀಸ್
Published 6 ಫೆಬ್ರುವರಿ 2021, 14:50 IST
Last Updated 6 ಫೆಬ್ರುವರಿ 2021, 14:50 IST
ಜಾರ್ಜ್ ಲಿಂಡೆ ಬೌಲಿಂಗ್ ಶೈಲಿ –ಎಎಫ್‌ಪಿ ಚಿತ್ರ
ಜಾರ್ಜ್ ಲಿಂಡೆ ಬೌಲಿಂಗ್ ಶೈಲಿ –ಎಎಫ್‌ಪಿ ಚಿತ್ರ   

ರಾವಲ್ಪಿಂಡಿ: ಎಡಗೈ ಸ್ಪಿನ್ನರ್‌ಗಳಾದ ಜಾರ್ಜ್‌ ಲಿಂಡೆ ಮತ್ತು ಕೇಶವ್ ಮಹಾರಾಜ್ ದಾಳಿಗೆ ನಲುಗಿದ ಪಾಕಿಸ್ತಾನ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಕುಸಿತ ಕಂಡಿತು. ಮೂರನೇ ದಿನವಾದ ಶನಿವಾರ ಪಾಕಿಸ್ತಾನ ಆರು ವಿಕೆಟ್‌ಗಳಿಗೆ 129 ರನ್ ಗಳಿಸಿದೆ. ಆದರೆ ಮೊದಲ ಇನಿಂಗ್ಸ್‌ನಲ್ಲಿ ಲಭಿಸಿದ ಮುನ್ನಡೆಯಿಂದಾಗಿ ಈಗ ಒಟ್ಟಾರೆ 200 ರನ್‌ಗಳು ತಂಡದ ಖಾತೆಯಲ್ಲಿವೆ.

ತಂಡ ಖಾತೆ ತೆರೆಯುವ ಮೊದಲೇ ಇಮ್ರಾನ್ ಬಟ್ ಅವರನ್ನು ಕಗಿಸೊ ರಬಾಡ ಎಲ್‌ಬಿಡಬ್ಲ್ಯು ಬಲೆಯಲ್ಲಿ ಸಿಲುಕಿಸಿದರು. ನಂತರ ಲಿಂಡೆ ಮತ್ತು ಮಹಾರಾಜ್ ಆತಿಥೇಯರ ಅಗ್ರ ಕ್ರಮಾಂಕಕ್ಕೆ ಬಲವಾದ ಪೆಟ್ಟು ನೀಡಿದರು. ಒಂದು ಹಂತದಲ್ಲಿ ಪಾಕಿಸ್ತಾನ 76 ರನ್‌ಗಳಿಗೆ ಐದು ವಿಕೆಟ್ ಕಳೆದುಕೊಂಡಿತ್ತು. ಈ ಸಂದರ್ಭದಲ್ಲಿ ಜೊತೆಗೂಡಿದ ಫಾಹೀಂ ಅಶ್ರಫ್‌ ಮತ್ತು ಮೊಹಮ್ಮದ್ ರಿಜ್ವಾನ್ ಆರನೇ ವಿಕೆಟ್‌ಗೆ 52 ರನ್ ಸೇರಿಸಿದರು. ಅಶ್ರಫ್‌ ವಿಕೆಟ್ ಕಬಳಿಸಿದ ಲಿಂಡೆ ದಿನದಾಟದ ಮುಕ್ತಾಯಕ್ಕೆ ಎರಡು ಓವರ್ ಬಾಕಿ ಇರುವಾಗ ಮತ್ತೊಮ್ಮೆ ಆಘಾತ ನೀಡಿದರು. 28 ರನ್ ಗಳಿಸಿದ ರಿಜ್ವಾನ್ ಮತ್ತು ಖಾತೆ ತೆರೆಯದ ಹಸನ್ ಅಲಿ ಕ್ರೀಸ್‌ನಲ್ಲಿದ್ದಾರೆ.

ಹಿಂದಿನ 10 ಟೆಸ್ಟ್‌ ಪಂದ್ಯಗಳಲ್ಲಿ ಈ ಕ್ರೀಡಾಂಗಣದಲ್ಲಿ 220ಕ್ಕೂ ಹೆಚ್ಚಿನ ಮೊತ್ತದ ಗುರಿ ಬೆನ್ನತ್ತಿ ಗೆಲುವು ಸಾಧಿಸಲು ಯಾವ ತಂಡಕ್ಕೂ ಸಾಧ್ಯವಾಗಲಿಲ್ಲ. 2000ನೇ ಇಸವಿಯಲ್ಲಿ 220 ರನ್‌ಗಳ ಗುರಿ ಬೆನ್ನತ್ತಿದ ಶ್ರೀಲಂಕಾ ತಂಡ ಪಾಕಿಸ್ತಾನವನ್ನು ಎರಡು ವಿಕೆಟ್‌ಗಳಿಂದ ಮಣಿಸಿತ್ತು. ಹೀಗಾಗಿ ಉಳಿದಿರುವ ನಾಲ್ಕು ವಿಕೆಟ್‌ಗಳಲ್ಲಿ ಕನಿಷ್ಠ 50 ರನ್‌ ಗಳಿಸಲು ಪಾಕಿಸ್ತಾನ ಪ್ರಯತ್ನಿಸಲಿದೆ.

ADVERTISEMENT

ಸಂಕ್ಷಿಪ್ತ ಸ್ಕೋರು

ಮೊದಲ ಇನಿಂಗ್ಸ್‌: ಪಾಕಿಸ್ತಾನ: 114.3 ಓವರ್‌ಗಳಲ್ಲಿ 272; ದಕ್ಷಿಣ ಆಫ್ರಿಕಾ: 65.4 ಓವರ್‌ಗಳಲ್ಲಿ 201; ಎರಡನೇ ಇನಿಂಗ್ಸ್‌: ಪಾಕಿಸ್ತಾನ: 51 ಓವರ್‌ಗಳಲ್ಲಿ 6ಕ್ಕೆ 129 (ಅಬಿದ್ ಅಲಿ 13, ಅಜರ್ ಅಲಿ 33, ಫವಾದ್ ಆಲಂ 12, ಮೊಹಮ್ಮದ್ ರಿಜ್ವಾನ್ ಬ್ಯಾಟಿಂಗ್ 28, ಫಾಹಿಂ ಅಶ್ರಫ್‌ 29; ಕಗಿಸೊ ರಬಾಡ 4ಕ್ಕೆ1, ಕೇಶವ್ ಮಹಾರಾಜ್ 74ಕ್ಕೆ2, ಜಾರ್ಜ್ ಲಿಂಡೆ 12ಕ್ಕೆ3).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.