ADVERTISEMENT

NZ vs PAK 1st T20I: ಟಿಮ್ ಸೌಥಿ ದಾಖಲೆ; ಪಾಕ್ ‌ವಿರುದ್ಧ ಕಿವೀಸ್‌ಗೆ ಜಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಜನವರಿ 2024, 12:08 IST
Last Updated 12 ಜನವರಿ 2024, 12:08 IST
<div class="paragraphs"><p>ಟಿಮ್ ಸೌಥಿ ದಾಖಲೆ</p></div>

ಟಿಮ್ ಸೌಥಿ ದಾಖಲೆ

   

(ಚಿತ್ರ ಕೃಪೆ: X/@BLACKCAPS)

ಆಕ್ಲೆಂಡ್: ಪ್ರವಾಸಿ ಪಾಕಿಸ್ತಾನ ವಿರುದ್ಧ ನಡೆದ ಮೊದಲ ಟ್ವೆಂಟಿ-20 ಅಂತರರಾಷ್ಟ್ರೀಯ ಪಂದ್ಯದಲ್ಲಿ ನ್ಯೂಜಿಲೆಂಡ್ 46 ರನ್ ಅಂತರದ ಜಯ ಗಳಿಸಿದೆ.

ADVERTISEMENT

ಇದರೊಂದಿಗೆ ಐದು ಪಂದ್ಯಗಳ ಟಿ20 ಸರಣಿಯಲ್ಲಿ 1-0 ಅಂತರದ ಮಹತ್ವದ ಮುನ್ನಡೆ ಗಳಿಸಿದೆ.

ಆಕ್ಲೆಂಡ್‌ನ ಈಡನ್ ಪಾರ್ಕ್‌ನಲ್ಲಿ ನಡೆದ ಹೈ-ಸ್ಕೋರ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲೆಂಡ್, ನಾಯಕ ಕೇನ್ ವಿಲಿಯಮ್ಸನ್ (57) ಹಾಗೂ ಡೆರಿಲ್ ಮಿಚೆಲ್ (61) ಅರ್ಧಶತಕಗಳ ನೆರವಿನೊಂದಿಗೆ ಎಂಟು ವಿಕೆಟ್ ನಷ್ಟಕ್ಕೆ 226 ರನ್‌ಗಳ ಬೃಹತ್ ಮೊತ್ತ ಗಳಿಸಿತ್ತು.

ಪಾಕ್ ಪರ ನಾಯಕ ಶಾಹೀನ್ ಅಫ್ರಿದಿ ಮೂರು ವಿಕೆಟ್ ಗಳಿಸಿದರು. ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪಾಕ್ ವಿರುದ್ಧ ದಾಖಲಾದ ಗರಿಷ್ಠ ಮೊತ್ತ ಇದಾಗಿದೆ.

ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ 18 ಓವರ್‌ಗಳಲ್ಲಿ 180 ರನ್ನಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಬಾಬರ್ ಆಜಂ ಗರಿಷ್ಠ 57 ರನ್ ಗಳಿಸಿದರು.

ನ್ಯೂಜಿಲೆಂಡ್ ಪರ ನಾಲ್ಕು ವಿಕೆಟ್ ಗಳಿಸಿದ ಟಿಮ್ ಸೌಥಿ, ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 150 ವಿಕೆಟ್‌ ಗಳಿಸಿದ ಮೊದಲ ಬೌಲರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

118ನೇ ಪಂದ್ಯದಲ್ಲಿ (115 ಇನಿಂಗ್ಸ್) ಸೌಥಿ ಈ ಸಾಧನೆ ಮಾಡಿದ್ದಾರೆ. ಎರಡು ಬಾರಿ ಐದು ವಿಕೆಟ್ ಸಾಧನೆ ಮಾಡಿದ್ದಾರೆ. 18 ರನ್ ನೀಡಿ 5 ವಿಕೆಟ್ ಗಳಿಸಿರುವುದು ಅವರ ಜೀವನಶ್ರೇಷ್ಠ ಸಾಧನೆಯಾಗಿದೆ.

ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಗಳಿಸಿದ ಬೌಲರ್‌ಗಳ ಪಟ್ಟಿ:

  • ಟಿಮ್ ಸೌಥಿ (ನ್ಯೂಜಿಲೆಂಡ್): 151

  • ಶಕೀಬ್ ಅಲ್ ಹಸನ್ (ಬಾಂಗ್ಲಾದೇಶ): 140

  • ರಶೀದ್ ಖಾನ್ (ಅಫ್ಗಾನಿಸ್ತಾನ): 130

  • ಈಶ್ ಸೋಧಿ (ನ್ಯೂಜಿಲೆಂಡ್): 127

  • ಲಸಿತ್ ಮಾಲಿಂಗ (ಶ್ರೀಲಂಕಾ): 107

ನ್ಯೂಜಿಲೆಂಡ್ ಪರ ಕೇವಲ 27 ಎಸೆತಗಳಲ್ಲಿ 61 ರನ್ ಗಳಿಸಿದ (4 ಸಿಕ್ಸರ್, 4 ಬೌಂಡರಿ) ಡೆರಿಲ್ ಮಿಚಲ್ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.