ADVERTISEMENT

ಸ್ಪಿನ್‌ ಚಕ್ರವರ್ತಿ ವರುಣ್‌

ಜಿ.ಶಿವಕುಮಾರ
Published 27 ಅಕ್ಟೋಬರ್ 2020, 19:30 IST
Last Updated 27 ಅಕ್ಟೋಬರ್ 2020, 19:30 IST
ಡೆಲ್ಲಿ ಎದುರಿನ ಪಂದ್ಯದಲ್ಲಿ ವಿಕೆಟ್‌‌ ಪಡೆದಾಗ ವರುಣ್‌ ಸಂಭ್ರಮಿಸಿದ್ದ ಬಗೆ –ಪಿಟಿಐ ಚಿತ್ರ 
ಡೆಲ್ಲಿ ಎದುರಿನ ಪಂದ್ಯದಲ್ಲಿ ವಿಕೆಟ್‌‌ ಪಡೆದಾಗ ವರುಣ್‌ ಸಂಭ್ರಮಿಸಿದ್ದ ಬಗೆ –ಪಿಟಿಐ ಚಿತ್ರ    

ನಾಲ್ಕು ದಿನಗಳ ಹಿಂದೆ (ಅ. 24) ಅಬುಧಾಬಿಯ ಶೇಖ್‌ ಜಾಯೆದ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ಮತ್ತು ಕೋಲ್ಕತ್ತ ನೈಟ್‌ ರೈಡರ್ಸ್‌ ನಡುವಣ ಐಪಿಎಲ್‌ ಪಂದ್ಯ ನೋಡಿದವರೆಲ್ಲಾ ಕುರುಚಲು ಗಡ್ಡದ ಆ ಬೌಲರ್‌ನ ಸ್ಪಿನ್‌ ಮಾಂತ್ರಿಕತೆಗೆ ಮಾರು ಹೋಗಿದ್ದರು.

ಆರ್‌.ಅಶ್ವಿನ್‌ ಮತ್ತು ಸುನಿಲ್‌ ನಾರಾಯಣ ಅವರಂತಹ ಅನುಭವಿ ಸ್ಪಿನ್ನರ್‌ಗಳೇ ವಿಕೆಟ್‌ ಉರುಳಿಸಲು ಪರದಾಡಿದ್ದ ಪಿಚ್‌ನಲ್ಲಿ 29 ವರ್ಷ ವಯಸ್ಸಿನ ಆ ಬೌಲರ್‌ ದೂಸ್ರಾ ಹಾಗೂ ಗೂಗ್ಲಿ ಎಸೆತಗಳನ್ನು ಪ್ರಯೋಗಿಸಿ ಡೆಲ್ಲಿ ಬ್ಯಾಟ್ಸ್‌ಮನ್‌ಗಳಿಗೆ ಚಳ್ಳೆಹಣ್ಣು ತಿನ್ನಿಸಿದ್ದರು. ಐದು ವಿಕೆಟ್‌ಗಳ ಗೊಂಚಲು ಬುಟ್ಟಿಗೆ ಹಾಕಿಕೊಂಡು ಕೆಕೆಆರ್‌ ಪಾಳಯದಲ್ಲಿ ಗೆಲುವಿನ ಸಂಭ್ರಮ ಉಕ್ಕಿ ಹರಿಯುವಂತೆ ಮಾಡಿದ್ದರು.

ಅಂದು ಪಂದ್ಯಶ್ರೇಷ್ಠ ಗೌರವ ಪಡೆದ ಆ ಬೌಲರ್‌ನ ಹೆಸರು ವರುಣ್‌ ಚಕ್ರವರ್ತಿ. ಕರ್ನಾಟಕದ ಬೀದರ್‌ನಲ್ಲಿ ಜನಿಸಿದ ವರುಣ್‌, ಸದ್ಯತಮಿಳುನಾಡಿನ ತಂಜಾವೂರಿನಲ್ಲಿ ನೆಲೆಸಿದ್ದಾರೆ. ಮೊದಲು ವಿಕೆಟ್‌ ಕೀಪರ್‌, ನಂತರ ಮಧ್ಯಮ ವೇಗಿ, ಈಗ ಸ್ಪಿನ್ನರ್‌..

ADVERTISEMENT

13ನೇ ವಯಸ್ಸಿನಲ್ಲಿ ವಿಕೆಟ್‌ ಕೀಪರ್‌ ಆಗಿ ಕ್ರಿಕೆಟ್‌ ಪಯಣ ಶುರುಮಾಡಿದ ವರುಣ್‌,ವಾಸ್ತುಶಿಲ್ಪ ವಿಷಯದಲ್ಲಿ ಎಂಜಿನಿಯರಿಂಗ್‌ ಪದವಿ ಪಡೆಯುವ ಉದ್ದೇಶದಿಂದ17ನೇ ವಯಸ್ಸಿನಲ್ಲೇ ಈ ಆಟದಿಂದ ವಿಮುಖರಾಗಿದ್ದರು. ಏಳು ವರ್ಷಗಳ ಬಳಿಕ ಕ್ರಿಕೆಟ್‌ ಅಂಗಳಕ್ಕೆ ಮರಳಿದ್ದ ಅವರು ಕ್ರೊಂಬೆಸ್ಟ್‌ ಕ್ಲಬ್‌ ತಂಡದಲ್ಲಿ ಮಧ್ಯಮ ವೇಗದ ಬೌಲರ್‌ನ ಪಾತ್ರ ನಿಭಾಯಿಸುತ್ತಿದ್ದರು. ಪಂದ್ಯವೊಂದರ ವೇಳೆ ಮಂಡಿಗೆ ಗಾಯವಾದ ಬಳಿಕ ಅವರ ಬದುಕು ಬದಲಾಯಿತು! ನಂತರ ಸ್ಪಿನ್‌ ಬೌಲಿಂಗ್‌ನತ್ತ ಹೊರಳಿದ್ದರು.

ಟಿಎನ್‌ಪಿಎಲ್‌ನಿಂದ ಐಪಿಎಲ್‌ಗೆ: 2018ರ ತಮಿಳುನಾಡು ಪ್ರೀಮಿಯರ್‌ ಲೀಗ್‌ನಲ್ಲಿ (ಟಿಎನ್‌ಪಿಎಲ್‌) ಮಧುರೈ ಪ್ಯಾಂಥರ್ಸ್‌ ಪರ ಮಿಂಚಿದ್ದ ವರುಣ್‌, ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಮೈಕ್‌ ಹಸ್ಸಿ ಕಣ್ಣಿಗೆ ಬಿದ್ದರು. ಸಿಎಸ್‌ಕೆ ನೆಟ್ಸ್‌ನಲ್ಲಿ ಬೌಲಿಂಗ್‌ ಮಾಡುವ ಅವಕಾಶ ಪಡೆದ ಅವರು ಅಭ್ಯಾಸದ ವೇಳೆ ಸಿಎಸ್‌ಕೆ ನಾಯಕ ಮಹೇಂದ್ರ ಸಿಂಗ್‌ ಧೋನಿಯನ್ನೇ ತಬ್ಬಿಬ್ಬುಗೊಳಿಸಿದ್ದರು.

2019ರ ಐಪಿಎಲ್‌ ಹರಾಜಿನಲ್ಲಿ ₹20 ಲಕ್ಷ ಮೂಲಬೆಲೆ ಹೊಂದಿದ್ದ ಅವರನ್ನು ಕಿಂಗ್ಸ್‌ ಇಲೆವನ್‌ ಪಂಜಾಬ್‌ ತಂಡ ₹8.4 ಕೋಟಿ ನೀಡಿ ಸೆಳೆದುಕೊಂಡಿತ್ತು.

ಕೆಕೆಆರ್‌ ವಿರುದ್ಧದ ಪದಾರ್ಪಣೆ ಪಂದ್ಯದಲ್ಲೇ ಹೆಚ್ಚು ದಂಡನೆಗೆ ಒಳಗಾಗಿದ್ದ ಅವರು ನಂತರ ಭುಜದ ನೋವಿನಿಂದಾಗಿ ಟೂರ್ನಿಯಿಂದಲೇ ಹೊರಬಿದ್ದಿದ್ದರು. ಈ ಬಾರಿಯ ಹರಾಜಿನಲ್ಲಿ ಕೆಕೆಆರ್‌ ಫ್ರಾಂಚೈಸ್‌ ₹4 ಕೋಟಿ ನೀಡಿ ಅವರನ್ನು ಖರೀದಿಸಿತ್ತು. ಈ ಬಾರಿ13 ವಿಕೆಟ್‌ ಕಬಳಿಸಿ ಮಿಂಚಿರುವ ಅವರು ಪಂದ್ಯವೊಂದರಲ್ಲಿ ಉತ್ತಮ ಬೌಲಿಂಗ್‌ ಸಾಧನೆ (20ಕ್ಕೆ5) ಮಾಡಿದವರ ಪಟ್ಟಿಯಲ್ಲಿ ಅಗ್ರಪಟ್ಟ ಅಲಂಕರಿಸಿದ್ದಾರೆ.

‘ನಾನು ಕ್ರಿಕೆಟ್‌ ಬಿಟ್ಟರೂ ಕ್ರಿಕೆಟ್‌ ನನ್ನನ್ನು ಬಿಡಲಿಲ್ಲ’ ಎನ್ನುವ ವರುಣ್‌, ಮುಂಬರುವ ಆಸ್ಟ್ರೇಲಿಯಾ ಪ್ರವಾಸಕ್ಕೆ ಪ್ರಕಟಿಸಲಾಗಿರುವ ಭಾರತ ಟ್ವೆಂಟಿ–20 ತಂಡದಲ್ಲಿ ಸ್ಥಾನ ಗಳಿಸಿದ್ದಾರೆ. ಕಾಂಗರೂ ನೆಲದಲ್ಲೂ ಕೈಚಳಕ ತೋರಲು ಕಾತರರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.