ನವದೆಹಲಿ: ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆಯಲ್ಲಿ ಆರ್‌ಟಿಐಗೆ ಸಂಬಂಧಿಸಿದ ನಿಯಮದಲ್ಲಿ ತಿದ್ದುಪಡಿ ತರಲಾಗಿದೆ. ಇದರ ಪ್ರಕಾರ ಸರ್ಕಾರದಿಂದ ಅನುದಾನ ಮತ್ತು ನೆರವು ಪಡೆಯುವ ಕ್ರೀಡಾ ಫೆಡರೇಷನ್‌ಗಳು ಮಾತ್ರ ಆರ್‌ಟಿಗೆ ವ್ಯಾಪ್ತಿಗೆ ಬರಲಿವೆ. ಹೀಗಾಗಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಕೊಂಚ ನೆಮ್ಮದಿ ಮೂಡಿದೆ.
ಈ ಮಸೂದೆಯನ್ನು ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ ಅವರು ಜುಲೈ 23ರಂದು ಲೋಕಸಭೆಯಲ್ಲಿ ಮಂಡಿಸಿದ್ದರು. ಈ ಮಸೂದೆಯ ನಿಯಮ 15 (2)ರ ಪ್ರಕಾರ ಮಾನ್ಯತೆ ಪಡೆದಿರುವ ಎಲ್ಲ ಕ್ರೀಡಾ ಸಂಸ್ಥೆಗಳೂ, ಸಾರ್ವುಜನಿಕ ಸಂಸ್ಥೆಗಳಾಗಲಿದ್ದು, ಅದರ ಕರ್ತವ್ಯ, ಅಧಿಕಾರ ಚಲಾವಣೆ ಎಲ್ಲವೂ 2005ರ ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅಡಿ ಬರಲಿವೆ.
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ಹಿಂದಿನಿಂದಲೂ ಆರ್‌ಟಿಐ ವ್ಯಾಪ್ತಿಗೆ ಸೇರಿಸುವುದನ್ನು ವಿರೋಧಿಸುತ್ತ ಬಂದಿದೆ. ಇತರ ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳಂತೆ ತಾನು ಸರ್ಕಾರದ ಯಾವುದೇ ಅನುದಾನದ ಮೇಲೆ ಅವಲಂಬಿತವಾಗಿಲ್ಲ ಎಂದು ಮಂಡಳಿಯು ವಾದಿಸುತ್ತ ಬಂದಿದೆ.
ಮಸೂದೆಯಲ್ಲಿ ಪ್ರಸ್ತಾವಿಸಿರುವ ತಿದ್ದುಪಡಿಯು ಈ ಗೊಂದಲಗಳಿಗೆ ತೆರೆಯೆಳೆದಿದೆ.
‘ನಿಯಮಗಳಿಗೆ ತರಲಾಗಿರುವ ತಿದ್ದುಪಡಿಯು, ಸರ್ಕಾರದ ಅನುದಾನ ಅಥವಾ ನೆರವಿನ ಮೇಲೆ ಅವಲಂಬಿತವಾಗಿರುವ ಫೆಡರೇಷನ್‌ಗಳು ಮಾತ್ರ ಸಾರ್ವಜನಿಕ ಸಂಸ್ಥೆ ಎಂದು ಅರ್ಥೈಸಿದೆ. ಈ ತಿದ್ದುಪಡಿಯಿಂದ ಸಾರ್ವಜನಿಕ ಸಂಸ್ಥೆ ಯಾವುದೆಂಬುದು ಸ್ಪಷ್ಟವಾಗಿದೆ’ ಎಂದು ಉನ್ನತ ಮೂಲವೊಂದು ಪಿಟಿಐಗೆ ತಿಳಿಸಿವೆ.
ನಿಯಮದಲ್ಲಿ ಬದಲಾವಣೆ ಮಾಡದೇ ಹೋಗಿದ್ದಲ್ಲಿ ಗೊಂದಲಕ್ಕೆ ಕಾರಣವಾಗುವ ಸಾಧ್ಯತೆಯಿತ್ತು. ನ್ಯಾಯಾಲಯದಲ್ಲಿ ಮಸೂದೆಯನ್ನು ಪ್ರಶ್ನಿಸಲೂ ಅವಕಾಶವಿತ್ತು. ಸಾರ್ವಜನಿಕ ಹಣ ಬಳಕೆ ಮಾಡುವ ಯಾವುದೇ ಸಂಸ್ಥೆ ಆರ್‌ಟಿಐ ಅಡಿ ಬರಲಿದೆ. ಇದನ್ನು ನಿರ್ದಿಷ್ಟವಾಗಿ ಹೇಳಲಾಗಿದೆ ಎಂದು ಮೂಲ ತಿಳಿಸಿದೆ.
‘ಒಂದು ವೇಳೆ ರಾಷ್ಟ್ರೀಯ ಕ್ರೀಡಾ ಸಂಸ್ಥೆಯೊಂದು ಸರ್ಕಾರಿ ಅನುದಾನ ಅಥವಾ ಯಾವುದೇ ರೀತಿಯ ಸರ್ಕಾರಿ ನೆರವು ಪಡೆಯದಿದ್ದರೂ, ಅದರ ಕಾರ್ಯನಿರ್ವಹಣೆಯಲ್ಲಿ ಅಥವಾ ಕಾರ್ಯಕ್ರಮದಲ್ಲಿ ಸರ್ಕಾರದ ಸಹಾಯ ಪಡೆದಿದ್ದಲ್ಲಿ ಅದನ್ನು ಪ್ರಶ್ನಿಸಲೂ ಅವಕಾಶವಿರುತ್ತದೆ. ಸರ್ಕಾರ ನೆರವು ಹಣಕಾಸು ವಿಷಯಕ್ಕೆ ಮಾತ್ರವಲ್ಲ, ಮೂಲಸೌಕರ್ಯ ಬಳಕೆಗೂ ಸಂಬಂಧಿಸಿರುತ್ತದೆ’ ಎಂದು ವಿವರಿಸಿದೆ.
‘ಮಸೂದೆಯನ್ನು ಸಮಗ್ರವಾಗಿ ಅಧ್ಯಯನ ಮಾಡಿ ನಾವು ನಿರ್ಧಾರಕ್ಕೆ ಬರಲಿದ್ದೇವೆ. ಅಪೆಕ್ಸ್ ಸಮಿತಿಯಲ್ಲೂ ಚರ್ಚಿಸುತ್ತೇವೆ’ ಎಂದು ಸಂಸತ್ತಿನಲ್ಲಿ ಮಸೂದೆ ಮಂಡನೆಯ ಸಂದರ್ಭದಲ್ಲಿ ಬಿಸಿಸಿಐ ಪ್ರತಿಕ್ರಿಯಿಸಿತ್ತು.
ಈ ಮಸೂದೆಯು ಕಾಯ್ದೆಯಾಗಿ ಜಾರಿಯಾದಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ರಾಷ್ಟ್ರೀಯ ಕ್ರೀಡಾ ಫೆಡರೇಷನ್ (ಎನ್‌ಎಸ್‌ಎಫ್ ಆಗಿ ನೋಂದಾಯಿಸಿಕೊಳ್ಳಬೇಕಾಗುತ್ತದೆ. ಕ್ರಿಕೆಟ್ ಒಲಿಂಪಿಕ್ ಕ್ರೀಡೆಯಾಗಲಿರುವ ಕಾರಣ ಬಿಸಿಸಿಐಗೂ ಈ ನಿಯಮ ಅನ್ವಯಿಸಲಾಗುತ್ತಿದೆ. 2028ರ ಲಾಸ್ ಏಂಜಲಿಸ್ ಒಲಿಂಪಿಕ್ಸ್‌ನಲ್ಲಿ ಟಿ20 ಕ್ರಿಕೆಟ್ ಪರಿಚಯಿಸಲಾಗುತ್ತಿದೆ.
ರಾಷ್ಟ್ರೀಯ ಕ್ರೀಡಾ ಮಂಡಳಿ (ಎನ್‌ಎಸ್‌ಬಿ) ಸ್ಥಾಪನೆಯ ಪ್ರಸ್ತಾವವೂ ಈ ಮಸೂದೆಯಲ್ಲಿದೆ. ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳ (ಎನ್‌ಎಸ್‌ಎಫ್) ಮಾನ್ಯತೆ, ಅವುಗಳಿಗೆ ಉತ್ತರದಾಯಿತ್ವ, ಕ್ರೀಡಾಸಂಸ್ಥೆಗಳ ಪದಾಧಿಕಾರಿಗಳ ವಯಸ್ಸು ಮತ್ತು ಅವಧಿಯ ಮಿತಿ ಬದಲಾವಣೆ, ವ್ಯಾಜ್ಯಗಳ ಪರಿಹಾರ ವಿಷಯವು ಮಂಡಳಿಯ ಅಧಿಕಾರ ವ್ಯಾಪ್ತಿಗೆ ಬರಲಿದೆ.
ಕ್ರೀಡೆಗಳಿಗೆ ಸಂಬಂಧಿಸಿದ ದೂರು, ಕುಂದುಕೊರತೆ, ವಿವಾದ, ಬಿಕ್ಕಟ್ಟುಗಳನ್ನು ತ್ವರಿತವಾಗಿ ಇತ್ಯರ್ಥಪಡಿಸುವುದಕ್ಕಾಗಿ ರಾಷ್ಟ್ರೀಯ ಕ್ರೀಡಾ ನ್ಯಾಯಮಂಡಳಿ (ಎನ್‌ಎಸ್‌ಟಿ) ಸ್ಥಾಪನೆಗೆ ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ನ್ಯಾಯಮಂಡಳಿಯ ತೀರ್ಪುಗಳನ್ನು ಸುಪ್ರೀಂ ಕೋರ್ಟ್‌ನಲ್ಲಿ ಮಾತ್ರ ಪ್ರಶ್ನಿಸಬಹುದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.