ADVERTISEMENT

ಕೋವಿಡ್‌ ನಿಯಮ ಮುರಿದ ಮೂವರು ಪ್ರಮುಖ ಕ್ರಿಕೆಟಿಗರಿಗೆ 1 ವರ್ಷ ನಿಷೇಧ ಹೇರಿದ ಲಂಕಾ

​ಪ್ರಜಾವಾಣಿ ವಾರ್ತೆ
Published 30 ಜುಲೈ 2021, 15:58 IST
Last Updated 30 ಜುಲೈ 2021, 15:58 IST
ನಿಷೇಧಕ್ಕೊಳಗಾದ ಕ್ರಿಕೆಟಿಗರು
ನಿಷೇಧಕ್ಕೊಳಗಾದ ಕ್ರಿಕೆಟಿಗರು   

ಕೊಲೊಂಬೊ: ಕೋವಿಡ್ -19 ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯು ಶುಕ್ರವಾರ ತನ್ನ ಮೂವರು ಕ್ರಿಕೆಟ್‌ ಆಟಗಾರರಿಗೆ ಒಂದು ವರ್ಷ ನಿಷೇಧ ವಿಧಿಸಿದೆ. ಈ ಮೂವರು ಆಟಗಾರರು ಇಂಗ್ಲೆಂಡ್ ಪ್ರವಾಸದ ವೇಳೆ ನಿಗದಿತ ಹೋಟೆಲ್‌ನಿಂದ ಹೊರ ಹೋಗುವ ಮೂಲಕ ಬಯೋ ಬಬಲ್‌ ನಿಯಮ ಉಲ್ಲಂಘಿಸಿದ್ದರು.

ಉಪನಾಯಕ ಕುಶಾಲ್ ಮೆಂಡಿಸ್, ಆರಂಭಿಕ ಆಟಗಾರ ದನುಷ್ಕಾ ಗುಣತಿಲಕ ಮತ್ತು ವಿಕೆಟ್ ಕೀಪರ್ ನಿರೋಶನ್ ಡಿಕ್ವೆಲ್ಲಾ ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದ ಹಿಂದಿನ ದಿನ ರಾತ್ರಿ ಡರ್ಹಾಮ್‌ನಲ್ಲಿ ಓಡಾಡುತ್ತಿರುವ ದೃಶ್ಯ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ. ಇದೇ ಹಿನ್ನೆಲೆಯಲ್ಲಿ ಈ ಮೂವರು ಆಟಗಾರರಿಗೆ ಒಂದು ವರ್ಷದ ನಿಷೇಧ ಮತ್ತು 50,000 ಡಾಲರ್‌ ದಂಡ ವಿಧಿಸಲಾಗಿದೆ.

ನಿಯಮ ಮುರಿದ ಆಟಗಾರರನ್ನು ಜೂನ್ 28ರಂದೇ ಪ್ರವಾಸದಿಂದ ಮನೆಗೆ ಕಳುಹಿಸಲಾಗಿದೆ. ಮೂವರು "ಶ್ರೀಲಂಕಾ ಕ್ರಿಕೆಟ್ ಮತ್ತು ದೇಶಕ್ಕೆ ಅಪಕೀರ್ತಿ ತಂದಿದ್ದಾರೆ" ಎಂದು ರಾಷ್ಟ್ರೀಯ ಕ್ರಿಕೆಟ್‌ ಮಂಡಳಿ ಹೇಳಿದೆ.

ADVERTISEMENT

ಮೂವರ ವಿರುದ್ಧ ಎರಡು ವರ್ಷಗಳ ನಿಷೇಧವನ್ನು ಮಂಡಳಿ ಆದೇಶಿಸಿದೆ. ಆದರೆ, ಅದರಲ್ಲಿ ಒಂದು ವರ್ಷವನ್ನು ಅಮಾನತು ಎಂದು ತಿಳಿಸಿದೆ.

ಆರೋಗ್ಯ ನಿಯಮಾವಳಿಗಳನ್ನು ಉಲ್ಲಂಘಿಸಿರುವುದು ತಪ್ಪು ಎಂದು ಐವರು ಸದಸ್ಯರ ಶಿಸ್ತುಪಾಲನಾ ಸಮಿತಿಯು ಗುರುವಾರ ಅಭಿಪ್ರಾಯಪಟ್ಟಿದೆ. ಅಲ್ಲದೆ, ಮೂವರೂ ದೋಷಿಗಳು ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.