ADVERTISEMENT

ನಿವೃತ್ತಿ ಘೋಷಿಸಿ ಯೂಟರ್ನ್ ಹೊಡೆದಿದ್ದ ಲಂಕಾ ಆಟಗಾರ ಆಸ್ಟ್ರೇಲಿಯಾ ಸರಣಿಗೆ ಆಯ್ಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಜೂನ್ 2022, 10:28 IST
Last Updated 10 ಜೂನ್ 2022, 10:28 IST
ಭಾನುಕ ರಾಜಪಕ್ಷ
ಭಾನುಕ ರಾಜಪಕ್ಷ   

ಕೊಲಂಬೊ: ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಣ ಐದು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯು ಜೂನ್‌ 14ರಂದು ಆರಂಭವಾಗಲಿದೆ. ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ರಾಜೀನಾಮೆ ಘೋಷಿಸಿ ಬಳಿಕ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದ ಭಾನುಕ ರಾಜಪಕ್ಸ ಅವರಿಗೆ ಶ್ರೀಲಂಕಾ ತಂಡದಲ್ಲಿ ಸ್ಥಾನ ನೀಡಲಾಗಿದೆ.

30 ವರ್ಷದ ಭಾನುಕ ಇದೇ ವರ್ಷ ಜನವರಿಯಲ್ಲಿ ರಾಜೀನಾಮೆ ಪ್ರಕಟಿಸಿದ್ದರು. ಒಂದು ವಾರದ ನಂತರ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯುವುದಾಗಿ ಮತ್ತು ಮುಂಬರುವ ಸರಣಿಗಳಿಗೆ ತಂಡದ ಆಯ್ಕೆಗೆ ಲಭ್ಯವಿರುವುದಾಗಿ ತಿಳಿಸಿದ್ದರು.

ಈ ವರ್ಷದ (2022) ಐಪಿಎಲ್‌ ಟೂರ್ನಿಯಲ್ಲಿ ಪಂಜಾಬ್‌ ಕಿಂಗ್ಸ್‌ ಪರ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಅವರನ್ನು, ಆಸ್ಟ್ರೇಲಿಯಾ ವಿರುದ್ಧವೇ ನಡೆಯುತ್ತಿರುವ ಮೂರು ಪಂದ್ಯಗಳ ಟಿ20 ಸರಣಿಗೆ ಆಯ್ಕೆ ಮಾಡಲಾಗಿತ್ತು.

ADVERTISEMENT

ಆಸ್ಟ್ರೇಲಿಯಾ ತಂಡ ಮೊದಲೆರಡು ಪಂದ್ಯಗಳನ್ನುಗೆದ್ದು, ಟಿ20 ಸರಣಿಯನ್ನು ವಶ ಪಡಿಸಿಕೊಂಡಿದೆ. ಜೂನ್‌ 7ರಂದು ನಡೆದ ಮೊದಲ ಪಂದ್ಯದಲ್ಲಿ ಸೊನ್ನೆ ಸುತ್ತಿದ್ದ ರಾಜಪಕ್ಸ, 8ರಂದು ನಡೆದ ಎರಡನೇ ಪಂದ್ಯದಲ್ಲಿ ಕೇವಲ 13 ರನ್ ಗಳಿಸಿ ಔಟಾಗಿದ್ದರು. ಕೊನೇ ಪಂದ್ಯ ಶನಿವಾರ (ಜೂ.11) ನಡೆಯಲಿದೆ.

ಲೆಗ್‌ ಸ್ಪಿನ್ನರ್‌ ದುನಿತ್‌ ವೆಲ್ಲಲಗೆ ಅವರನ್ನೂ ಇದೇ ಮೊದಲ ಸಲ ಅಂತರರಾಷ್ಟ್ರೀಯ ಏಕದಿನ ಸರಣಿಗೆ ಆಯ್ಕೆ ಮಾಡಲಾಗಿದೆ.

ಐದು ಪಂದ್ಯಗಳು ಕ್ರಮವಾಗಿ ಜೂನ್‌ 14,16,19,21,24ರಂದು ನಡೆಯಲಿವೆ.

ಶ್ರೀಲಂಕಾ ತಂಡ ಹೀಗಿದೆ
ದಾಸುನ್ ಶನಕ (ನಾಯಕ), ಪಾಥುಮ್ ನಿಶಾಂಕ, ದನುಷ್ಕ ಗುಣತಿಲಕ, ಕುಶಾಲ್‌ ಮೆಂಡಿಸ್‌, ಚರಿತ್ ಅಸಲಂಕ, ಧನಂಜಯ ಡಿ ಸಿಲ್ವಾ, ದಿನೇಶ್‌ ಚಾಂಡಿಮಲ್‌, ಭಾನುಕ ರಾಜಪಕ್ಸ, ನಿರೋಶಾನ್ ಡಿಕ್ವೆಲ್ಲಾ, ವನಿಂದು ಹಸರಂಗ, ಚಮಿಕ ಕರುಣಾರತ್ನೆ, ದುಶ್ಮಂತ ಚಮೀರ, ಅಸಿತ ಫೆರ್ನಾಂಡೊ, ನುವಾನ್‌ ತುಷಾರ, ರಮೇಶ್ ಮೆಂಡಿಸ್, ಮಹೀಶ್ ತೀಕ್ಷಣ, ಪ್ರವೀಣ್ ಜಯವಿಕ್ರಮ, ಜೆಫ್ರೀ ವಂಡೆರ್ಸೆ, ಲಹಿರು ಮದುಶಂಕ, ದುನಿತ್‌ ವೆಲ್ಲಲಗೆ, ಪ್ರಮೋದ್ ಮದುಷಾನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.