ADVERTISEMENT

IPL 2022 | ಬೆಂಗಳೂರಿಗೆ ಕನ್ನಡಿಗ ಮಯಂಕ್ ಪಡೆ ಸವಾಲು, ಕೊಹ್ಲಿ, ಧವನ್ ಮೇಲೆ ಕಣ್ಣು

ರಾಯಲ್ ಚಾಲೆಂಜ್ ಎದುರಿಸಲು ಸಿದ್ಧವಾದ ಪಂಜಾಬ್ ಕಿಂಗ್ಸ್

ಪಿಟಿಐ
Published 26 ಮಾರ್ಚ್ 2022, 19:46 IST
Last Updated 26 ಮಾರ್ಚ್ 2022, 19:46 IST
ಮಯಂಕ್ ಅಗರವಾಲ್
ಮಯಂಕ್ ಅಗರವಾಲ್   

ನವಿ ಮುಂಬೈ: ಮಯಂಕ್ ಅಗರವಾಲ್ ಅವರು ಪಂಜಾಬ್ ಕಿಂಗ್ಸ್ ತಂಡಕ್ಕೆ ಪೂರ್ಣಾವಧಿ ನಾಯಕತ್ವ ವಹಿಸಿಕೊಂಡ ನಂತರ ಮೊದಲ ಪಂದ್ಯದಲ್ಲಿಯೇ ತಮ್ಮ ತವರಿನ ಬಳಗದ ಸವಾಲು ಎದುರಿಸಲಿದ್ದಾರೆ.

ಡಿ.ವೈ. ಪಾಟೀಲ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಮಯಂಕ್ ಬಳಗವು ಫಫ್ ಡುಪ್ಲೆಸಿ ನಾಯಕತ್ವದ ರಾಯಲ್ ಚಾಲೆಂಜರ್ ಬೆಂಗಳೂರು ವಿರುದ್ಧ ಕಣಕ್ಕಿಳಿಯಲಿದೆ. ಕೆ.ಎಲ್. ರಾಹುಲ್ ಲಖನೌ ತಂಡದ ನಾಯಕರಾಗಿ ಹೋದ ನಂತರ ಪಂಜಾಬ್ ತಂಡವನ್ನು ಮುನ್ನಡೆಸುವ ಹೊಣೆ ಆರಂಭಿಕ ಬ್ಯಾಟರ್ ಮಯಂಕ್ ಅವರ ಹೆಗಲಿಗೆ ಬಿದ್ದಿದೆ. ಬೆಂಗಳೂರು ತಂಡದ ನಾಯಕತ್ವವನ್ನು ವಿರಾಟ್ ಕೊಹ್ಲಿ ಬಿಟ್ಟುಕೊಟ್ಟಿದ್ದರಿಂದ ದಕ್ಷಿಣ ಆಫ್ರಿಕಾದ ಫಫ್ ಮುಂದಾಳತ್ವ ವಹಿಸಿಕೊಂಡಿದ್ದಾರೆ.

ಮೇಲ್ನೋಟಕ್ಕೆ ಬೆಂಗಳೂರು ತಂಡವೇ ಗೆಲ್ಲುವ ನೆಚ್ಚಿನ ತಂಡವಾಗಿ ಕಾಣುತ್ತಿದೆ. ಏಕೆಂದರೆ, ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡವನ್ನು ಮುನ್ನಡೆಸಿದ ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ನಲ್ಲಿ ಆಡಿದ ಅನುಭವ ಫಫ್ ಬೆನ್ನಿಗೆ ಇದೆ.

ADVERTISEMENT

ಅಲ್ಲದೇ ತಂಡದಲ್ಲಿ ವಿರಾಟ್, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ದಿನೇಶ್ ಕಾರ್ತಿಕ್ ಅವರಂತಹ ಅನುಭವಿ ಬ್ಯಾಟರ್‌ಗಳಿದ್ಧಾರೆ. ‘ಆಪದ್ಭಾಂದವ’ ಎಬಿ ಡಿವಿಲಿಯರ್ಸ್ ಈ ಸಲ ಇಲ್ಲ. ಆದ್ದರಿಂದ ಅನುಭವಿ ಬ್ಯಾಟರ್‌ಗಳ ಒತ್ತಡ ಹೆಚ್ಚಿದೆ.

ಮಧ್ಯಮವೇಗಿ ಮೊಹಮ್ಮದ್ ಸಿರಾಜ್, ಹೋದ ಸಲ ಅತಿ ಹೆಚ್ಚು ವಿಕೆಟ್ ಗಳಿಸಿದ ಬೌಲರ್ ಹರ್ಷಲ್ ಪಟೇಲ್ ಮತ್ತು ಜೋಷ್ ಹ್ಯಾಜಲ್‌ವುಡ್ ಇರುವುದು ಬೌಲಿಂಗ್ ಬಲ ಹೆಚ್ಚಿಸಿದೆ. ಆದರೆ, ಯಜುವೇಂದ್ರ ಚಾಹಲ್ ಜಾಗವನ್ನು ತುಂಬುವ ಅವಕಾಶ ಶ್ರೀಲಂಕಾದ ಲೆಗ್‌ಬ್ರೇಕ್ ಬೌಲರ್ ವಣಿಂದು ಹಸರಂಗಾಗೆ ಇದೆ.

ಫಫ್ ಮತ್ತು ಮಯಂಕ್ ಇಬ್ಬರೂ ಐಪಿಎಲ್‌ನಲ್ಲಿ ತಲಾ ನೂರು ಪಂದ್ಯಗಳನ್ನು ಆಡಿರುವ ಅನುಭವಿಗಳು. ಆದರೆ, ಮಯಂಕ್‌ಗೆ ನಾಯಕತ್ವದ ಅನುಭವ ಹೆಚ್ಚು ಇಲ್ಲ. ರಾಹುಲ್ ಗೈರಿನಲ್ಲಿ ಕೆಲವು ಪಂದ್ಯಗಳಲ್ಲಿ ಅವರು ತಂಡವನ್ನು ಮುನ್ನಡೆಸಿದ್ದರು. ಈ ಬಾರಿ ಅವರ ತಂಡದಲ್ಲಿಯೂ ಪ್ರಮುಖ ಬದಲಾವಣೆಗಳಾಗಿವೆ. ಅನುಭವಿ ಬ್ಯಾಟರ್ ಶಿಖರ್ ಧವನ್, ವೇಗಿ ಕಗಿಸೊ ರಬಾಡ, ಲಿಯಾಮ್ ಲಿವಿಂಗ್‌ಸ್ಟೋನ್, ಜಾನಿ ಬೆಸ್ಟೊ ಮತ್ತು ಸ್ಪಿನ್ನರ್ ರಾಹುಲ್ ಚಾಹರ್ ಅವರ ಬಲ ಇದೆ. ಉಳಿದಂತೆ ಯುವ ಆಟಗಾರರ ಪ್ರತಿಭೆಯನ್ನು ಸಮರ್ಥವಾಗಿ ಬಳಸಿಕೊಳ್ಳಲುಮಯಂಕ್ ಅವರಿಗೆ ಮಾರ್ಗದರ್ಶನ ನೀಡಲು ಅನಿಲ್ ಕುಂಬ್ಳೆ ಇದ್ದಾರೆ.

ಹೋದ ವರ್ಷದ ಟೂರ್ನಿಯಲ್ಲಿ ಆರ್‌ಸಿಬಿ ಕ್ವಾಲಿಫೈಯರ್‌ ಪ್ರವೇಶಿಸಿತ್ತು. ಆದರೆ, ಪಂಜಾಬ್ ವಿಫಲವಾಗಿತ್ತು. ಟೂರ್ನಿಯ ಇತಿಹಾಸದಲ್ಲಿ ಎರಡೂ ತಂಡಗಳು ಒಂದು ಬಾರಿಯೂ ಪ್ರಶಸ್ತಿ ಜಯಿಸಿಲ್ಲ. ಈ ಸಲ ಗೆಲ್ಲುವ ನಿರೀಕ್ಷೆಯೊಂದಿಗೆ ಅಭಿಯಾನ ಆರಂಭಿಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.