
ಕೊಲಂಬೊ: ಟಿ–20 ವಿಶ್ವಕಪ್‌ನ ಲೀಗ್ ಹಂತದ ‘ಬಿ’ ಗುಂಪಿನ ಪಂದ್ಯದಲ್ಲಿ ಅಚ್ಚರಿಯ ಫಲಿತಾಂಶ ಬಂದಿದೆ. ಕ್ರಿಕೆಟ್ ಜಗತ್ತಿನ ಬಲಾಢ್ಯ ತಂಡಗಳಲ್ಲಿ ಒಂದಾದ, ಆಸ್ಟ್ರೇಲಿಯಾ ವಿರುದ್ಧ ಜಿಂಬಾಬ್ವೆ ತಂಡವು 23 ರನ್‌ಗಳ ಸುಲಭ ಜಯ ಸಾಧಿಸಿದೆ.
ಪಂದ್ಯದ ವೇಳೆ ಜಿಂಬಾಬ್ವೆಯ ಮುನ್ಯೂಂಗ ಹಿಡಿದ ಕ್ಯಾಚ್‌ನ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆ ಕ್ಯಾಚ್‌ಗೆ ಕ್ರಿಕೆಟ್ ಅಭಿಮಾನಿಗಳು ಹಾಗೂ ಹಿರಿಯ ಕ್ರಿಕೆಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ತಂಡ 20 ಓವರ್‌ಗಳ ಅಂತ್ಯಕ್ಕೆ 169 ರನ್ ಗಳಿಸಿತು.
170 ರನ್ ಗುರಿ ಬೆನ್ನಟ್ಟಿದ ಆಸೀಸ್ ತಂಡದ ಗೆಲುವಿಗೆ ಇನ್ನೂ 39 ರನ್‌ಗಳ ಅವಶ್ಯಕತೆಯಿದ್ದಾಗ ಕ್ರೀಸ್‌ನಲ್ಲಿದ್ದ ಬೆನ್ ಡ್ವಾರ್ಶುಯಿಸ್ ಅವರು ಬ್ರಾಡ್ ಇವಾನ್ಸ್ ಎಸೆದ 17ನೇ ಓವರ್‌ನ 4ನೇ ಎಸೆತವನ್ನು ಡೀಪ್ ಮಿಡ್ ವಿಕೆಟ್ ಕಡೆಗೆ ಸಿಕ್ಸರ್‌ಗಟ್ಟುವ ಪ್ರಯತ್ನ ಮಾಡಿದರು. ಮಿಡ್ ವಿಕೆಟ್‌ನಲ್ಲಿ ನಿಂತಿದ್ದ ಮುನ್ಯೂಂಗ, ತಮ್ಮ ಎಡಕ್ಕೆ 15 ಮೀ ಓಡಿ, ಆ ಕ್ಯಾಚ್ ಪಡೆದರು. ಆ ಕ್ಯಾಚ್‌ಗೆ ಮೈದಾನದಲ್ಲಿದ್ದ ಜಿಂಬಾಬ್ವೆ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು.
ಮುನ್ಯೂಂಗ ಹಿಡಿದ ಕ್ಯಾಚ್, ಪಂದ್ಯದ ಚಿತ್ರಣವನ್ನೇ ಬದಲಿಸಿ, ಜಿಂಬಾಬ್ವೆ ತಂಡವು 23 ರನ್‌ಗಳ ಜಯ ಸಾಧಿಸುವಲ್ಲಿ ನೆರವಾಯಿತು. ಇದೀಗ ಆ ಕ್ಯಾಚ್‌ನ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ‘ಈ ಟೂರ್ನಿಯ ಅತ್ಯುತ್ತಮ ಕ್ಯಾಚ್’ ಎಂದು ಕ್ರಿಕೆಟ್ ಪ್ರಿಯರು ಹೊಗಳುತ್ತಿದ್ದಾರೆ.
ಭಾರತ ತಂಡದ ಮಾಜಿ ಆಟಗಾರ ಅಶ್ವಿನ್ ಕೂಡ ಮುನ್ಯೂಂಗ ಹಿಡಿದ ಕ್ಯಾಚ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜಿಂಬಾಬ್ವೆ ತಂಡವು ಬ್ಯಾಟಿಂಗ್, ಬೌಲಿಂಗ್ ಜತೆಗೆ ಫೀಲ್ಡಿಂಗ್ ಅಲ್ಲೂ ಗಮನ ಸೆಳೆದಿದೆ. ಅದರಲ್ಲೂ ಮುನ್ಯೂಂಗ ಅವರು ಫೀಲ್ಡಿಂಗ್ ಮೂಲಕವೇ 12–15 ರನ್ ತಡೆದರು. ಅದರಲ್ಲೂ ಆ ಕ್ಯಾಚ್ ಅದ್ಭುತವಾಗಿತ್ತು ಎಂದು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಬರೆದುಕೊಂಡಿದ್ದಾರೆ.
ಈ ಬಾರಿಯ ಚುಟುಕು ವಿಶ್ವಕಪ್‌ನಲ್ಲಿ ಆಡಿರುವ ಎರಡೂ ಪಂದ್ಯಗಳಲ್ಲಿ ಗೆಲವು ಸಾಧಿಸುವ ಮೂಲಕ ಜಿಂಬಾಬ್ವೆ ತಂಡವು ‘ಬಿ’ ಗುಂಪಿನಲ್ಲಿ ಎರಡನೇ ಸ್ಥಾನಕ್ಕೇರಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.