
ಹುಬ್ಬಳ್ಳಿ: ಭಾರತ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ ಗದುಗಿನ ಸುನಿಲ್ ಜೋಶಿ ಅವರ ವೃತ್ತಿಜೀವನದಲ್ಲಿ ಮಂಗಳವಾರ ಅವಿಸ್ಮರಣೀಯ ದಿನವಾಯಿತು. ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದ ಪೆವಿಲಿಯನ್ ಬ್ಲಾಕ್‌ಗೆ ಸುನಿಲ್ ಜೋಶಿ ಅವರ ಹೆಸರು ನಾಮಕರಣ ಮಾಡಲಾಯಿತು.
ರಣಜಿ ಫೈನಲ್ ಪಂದ್ಯದ ಊಟದ ವಿರಾಮದ ವೇಳೆ ನಡೆದ ಕಾರ್ಯಕ್ರಮದಲ್ಲಿ ಬಿಸಿಸಿಐ ಅಧ್ಯಕ್ಷ ಮಿಥುನ್ ಮನ್ಹಾಸ್ ಅವರು ನಾಮಫಲಕ ಅನಾವರಣ ಮಾಡಿದರು.
ಈ ವೇಳೆ ಮಾತನಾಡಿದ ಸುನಿಲ್ ಜೋಶಿ ಭಾವುಕರಾದರು. ತಮ್ಮ ತರಬೇತುದಾರರನ್ನು ಸ್ಮರಿಸಿದ ಅವರು, ಗದಗ, ಹುಬ್ಬಳ್ಳಿಯ ಮೈದಾನಗಳಲ್ಲಿ ಆಡಿದ ದಿನಗಳನ್ನು ಮೆಲುಕು ಹಾಕಿದರು.
‘ಇಂತಹ ದಿನ ಬರುತ್ತದೆ ಎಂದು ನಾನು ಭಾವಿಸಿರಲಿಲ್ಲ. ಗದಗಿನಿಂದ ಹುಬ್ಬಳ್ಳಿಗೆ ಬಂದ 14 ವರ್ಷದ ಬಾಲಕ ಈ ಮಟ್ಟಕ್ಕೆ ಬರುತ್ತಾನೆ ಎಂದು ನಿರೀಕ್ಷಿಸಿರಲಿಲ್ಲ. ಸಹೋದರ ಅಶೋಕ ನನ್ನ ಮೇಲೆ ನಂಬಿಕೆ ಇಟ್ಟಿದ್ದ. ನನ್ನ ಪತ್ನಿ ಡಾ. ರವನೀತ್ ಜೋಶಿ ಸದಾ ಬೆಂಬಲವಾಗಿದ್ದಾರೆ. ಭಾರತ ತಂಡಕ್ಕೆ ಆಡುವುದಕ್ಕಿಂತ ದೊಡ್ಡ ಖುಷಿ ಬೇರೆ ಇಲ್ಲ’ ಎಂದು ಜೋಶಿ ಹೇಳಿದರು.
‘ಪೆವಿಲಿಯನ್ ಬ್ಲಾಕ್‌ಗೆ ನನ್ನ ಹೆಸರಿಡಲಾಗಿದೆ. ಅದರಿಂದ ಪ್ರೇರಣೆ ಪಡೆದು ಒಬ್ಬ ಗ್ರಾಮೀಣ ಭಾಗದ ಆಟಗಾರ ಕರ್ನಾಟಕ, ಭಾರತ ತಂಡಕ್ಕೆ ಆಡಿದರೆ ಅದಕ್ಕೆ ಸಾರ್ಥಕತೆ ಬರುತ್ತದೆ’ ಎಂದರು.
‘1992ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ರಣಜಿ ಪಂದ್ಯದಲ್ಲಿ ನಾನು ಪದಾರ್ಪಣೆ ಮಾಡಿದೆ. ಆ ಪಂದ್ಯದಲ್ಲಿ ವೆಂಕಟೇಶ ಪ್ರಸಾದ್ ಅವರೊಂದಿಗೆ ಅಜೇಯ ಜತೆಯಾಟವಾಡಿದ್ದೆ. ಇಂದಿಗೂ ಅವರೊಂದಿಗೆ ಅವಿನಾಭಾವ ಸಂಬಂಧ ಇದೆ’ ಎಂದರು.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ವೆಂಕಟೇಶ ಪ್ರಸಾದ್, ಉಪಾಧ್ಯಕ್ಷ ಸುಜಿತ್ ಸೋಮಸುಂದರ್, ಕಾರ್ಯದರ್ಶಿ ಸಂತೋಷ ಮೆನನ್, ಖಜಾಂಚಿ ಬಿ.ಎನ್.ಮಧುಕರ್, ಕೆಸ್‌ಎಸ್‌ಸಿಎ ಧಾರವಾಡ ವಲಯದ ನಿಮಂತ್ರಕ ವೀರಣ್ಣ ಸವಡಿ, ಚೇರ್ಮನ್ ಅಲ್ತಾಫ್ ಕಿತ್ತೂರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.