ಜೈಪುರ: ಆರಂಭ ಆಟಗಾರ ಪ್ರಿಯಾಂಶ್ ಆರ್ಯ (62, 35ಎ, 4x9, 6x2) ಮತ್ತು ಜೋಶ್ ಇಂಗ್ಲಿಸ್ (73, 42ಎ, 4x9, 6x3) ಅವರ ಅರ್ಧ ಶತಕಗಳ ಆಟ ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ಸೋಮವಾರ ಮೇಳೈಸಿತು. ಇವರಿಬ್ಬರ ಶತಕದ ಜೊತೆಯಾಟದ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡ ಸೋಮವಾರ ನಡೆದ ಐಪಿಎಲ್ ಪಂದ್ಯದಲ್ಲಿ ಮುಂಬೈ ತಂಡದ ಮೇಲೆ ನಿರೀಕ್ಷೆಗಿಂತ ಸುಲಭವಾಗಿ ಏಳು ವಿಕೆಟ್‌ಗಳ ಜಯಪಡೆಯಿತು. ಆ ಮೂಲಕ ಲೀಗ್‌ನಲ್ಲಿ ಅಗ್ರಸ್ಥಾನಕ್ಕೆ ಲಗ್ಗೆಯಿಟ್ಟಿತು.
ಬಲಿಷ್ಠ ಬ್ಯಾಟಿಂಗ್ ಸರದಿ ಹೊಂದಿದ್ದ ಮುಂಬೈ ತಂಡವನ್ನು, ಪಂಜಾಬ್ ಬೌಲರ್‌ಗಳು ಶಿಸ್ತುಬದ್ಧ ದಾಳಿಯಿಂದ 7 ವಿಕೆಟ್‌ಗೆ 184 ರನ್‌ಗಳಿಗೆ ಕಟ್ಟಿಹಾಕಿದರು. ಅಮೋಘ ಫಾರ್ಮಿನಲ್ಲಿರುವ ಸೂರ್ಯಕುಮಾರ್ ಯಾದವ್ ಅವರ ಅರ್ಧ ಶತಕ (57, 39 ಎಸೆತ) ಬಿಟ್ಟರೆ ಉಳಿದವರ ಕಾಣಿಕೆ ದೊಡ್ಡದಿರಲಿಲ್ಲ. ಬೌಲರ್‌ಗಳ ಶ್ರಮಕ್ಕೆ ಬ್ಯಾಟರ್‌ಗಳು ಕೈಜೋಡಿಸಿದರು. ಇನ್ನೂ 9 ಎಸೆತಗಳಿರುವ ಪಂಜಾಬ್ ಕಿಂಗ್ಸ್ ಆರಾಮವಾಗಿ ಗುರಿ (3 ವಿಕೆಟ್‌ಗೆ 187) ತಲುಪಿತು. ಪಂಜಾಬ್ ಈ ಹಿಂದೆ 2014ರಲ್ಲಿ ಕೊನೆಯ ಬಾರಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿತ್ತು.
ಬೂಮ್ರಾ ಐದನೇ ಓವರಿನಲ್ಲಿ, ಪಂಜಾಬ್ ತಂಡ 34ರಲ್ಲಿದ್ದಾಗ ಪ್ರಭಸಿಮ್ರನ್ ಸಿಂಗ್ (13) ವಿಕೆಟ್ ಪಡೆದರು. ಆದರೆ ಯುವ ಆಟಗಾರ ಪ್ರಿಯಾಂಶ್ ಮತ್ತು ವಿಕೆಟ್ ಕೀಪರ್ ಜೋಸ್ ಇಂಗ್ಲಿಸ್ ಬೀಸಾಟ ಮುಂದುವರಿಸಿದರು. ಎರಡನೇ ವಿಕೆಟ್‌ಗೆ 50 ಎಸೆತಗಳಲ್ಲಿ 109 ರನ್ ಸೇರಿಸಿ ತಂಡವನ್ನು ಗೆಲುವಿನ ಹಾದಿಯಲ್ಲಿ ಮುನ್ನಡೆಸಿದರು. ಸ್ಯಾಂಟನರ್ ಬೌಲಿಂಗ್‌ನಲ್ಲಿ ಆರ್ಯ ಅವರು ಲಾಂಗ್‌ಆಫ್‌ನಲ್ಲಿ ಸೂರ್ಯ ಅವರಿಗೆ ಕ್ಯಾಚಿತ್ತರು. ನಾಯಕ ಶ್ರೇಯಸ್ ಅಯ್ಯರ್ (ಔಟಾಗದೇ 26, 16ಎ) ‘ಫಿನಿಷಿಂಗ್ ಟಚ್’ ನೀಡಿದರು.
ಇದಕ್ಕೆ ಮೊದಲು ಸೂರ್ಯಕುಮಾರ್ (57, 39 ಎಸೆತ, 4x6, 6x2) ಮತ್ತು ಇತರ ಬ್ಯಾಟರ್‌ಗಳ ಕಿರುಕಾಣಿಕೆಗಳ ನೆರವಿನಿಂದ ಮುಂಬೈ ಸಾಧಾರಣ ಮೊತ್ತ ಗಳಿಸಿತು.
ರಿಯಾನ್ ರಿಕೆಲ್ಟನ್ (27, 20ಎ) ಮತ್ತು ರೋಹಿತ್ ಶರ್ಮಾ (24) ಜೊತೆ ಮೊದಲ ವಿಕೆಟ್‌ಗೆ 45 ರನ್ ಸೇರಿಸಿದರು. ಆದರೆ ಪವರ್‌ಪ್ಲೇ ನಂತರ ಮುಂಬೈ 52 ರನ್‌ಗಳನ್ನಷ್ಟೇ ಗಳಿಸಲು ಶಕ್ತವಾಗಿತ್ತು. ಪಂಜಾಬ್ ಪರ ಈ ಋತುವಿನ ಕೊನೆಯ ಪಂದ್ಯ ಆಡಿದ ದಕ್ಷಿಣ ಆಫ್ರಿಕಾದ ವೇಗಿ ಮಾರ್ಕೊ ಯಾನ್ಸೆನ್ ಅವರು ರಿಕೆಲ್ಟನ್ ವಿಕೆಟ್ ಪಡೆದರು.
ಕನ್ನಡಿಗ ವೈಶಾಖ ವಿಜಯಕುಮಾರ್ (44ಕ್ಕೆ2) ಅವರು ತಿಲಕ್ ವರ್ಮಾ (1) ಮತ್ತು ಅಪಾಯಕಾರಿಯಾಗಿ ಕಾಣುತ್ತಿದ್ದ ವಿಲ್ ಜಾಕ್ಸ್ (17, 8ಎ) ಅವರ ವಿಕೆಟ್ ಪಡೆದು ಮುಂಬೈ ಅಬ್ಬರಿಸದಂತೆ ತಡೆದರು. ಸ್ಪಿನ್ನರ್ ಯಜುವೇಂದ್ರ ಚಾಹಲ್ ಅನುಪಸ್ಥಿತಿ ಹೆಚ್ಚು ಬಾಧಿಸದಂತೆ ಹರಪ್ರೀತ್ ಬ್ರಾರ್ (36ಕ್ಕೆ1) ನೋಡಿಕೊಂಡರು.
ಮುಂಬೈ ಇಂಡಿಯನ್ಸ್: 20 ಓವರ್‌ಗಳಲ್ಲಿ 7 ವಿಕೆಟ್‌ಗೆ 184 (ರಿಯಾನ್ ರಿಕೆಲ್ಟನ್ 27, ರೋಹಿತ್ ಶರ್ಮಾ 24, ಸೂರ್ಯಕುಮಾರ್ ಯಾದವ್ 57, ಹಾರ್ದಿಕ್ ಪಾಂಡ್ಯ; ಅರ್ಷದೀಪ್ ಸಿಂಗ್ 28ಕ್ಕೆ 2, ಮಾರ್ಕೊ ಯಾನ್ಸನ್ 34ಕ್ಕೆ 2, ವೈಶಾಕ್ ವಿಜಯಕುಮಾರ್ 44ಕ್ಕೆ 2).
ಪಂಜಾಬ್ ಕಿಂಗ್ಸ್: 18.3 ಓವರ್‌ಗಳಲ್ಲಿ 3 ವಿಕೆಟ್‌ಗೆ 187 (ಪ್ರಿಯಾಂಶ್ ಆರ್ಯ 62, ಜೋಶ್ ಇಂಗ್ಲಿಸ್ 73, ಶ್ರೇಯಸ್ ಅಯ್ಯರ್ ಔಟಾಗದೇ 26; ಜಸ್‌ಪ್ರೀತ್ ಬೂಮ್ರಾ 23ಕ್ಕೆ 1, ಮಿಚೆಲ್ ಸ್ಯಾಂಟನರ್ 41ಕ್ಕೆ 2). ಪಂದ್ಯದ ಆಟಗಾರ: ಜೋಶ್ ಇಂಗ್ಲಿಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.