
ಕರ್ನಾಟಕ ವಿರುದ್ಧ ರಾಜಸ್ಥಾನಕ್ಕೆ ಜಯ
(ಚಿತ್ರ ಕೃಪೆ: X/@BCCIdomestic)
ಅಹಮದಾಬಾದ್: ಕರುಣ್ ನಾಯರ್ ಮತ್ತು ಆರ್. ಸ್ಮರಣ್ ಅವರ ಉತ್ತಮ ಬ್ಯಾಟಿಂಗ್ ಹೊರತಾಗಿಯೂ ಕರ್ನಾಟಕ ತಂಡವು ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ರಾಜಸ್ಥಾನ ಎದುರು ಕೇವಲ 1 ರನ್ ಅಂತರದಿಂದ ಸೋತಿತು.
ಭಾನುವಾರ ನಡೆದ ಎಲೀಟ್ ಡಿ ಗುಂಪಿನ ಪಂದ್ಯದಲ್ಲಿ 202 ರನ್‌ಗಳ ಜಯದ ಗುರಿ ಬೆನ್ನಟ್ಟಿದ ಕರ್ನಾಟಕ ತಂಡವು ಆರಂಭಿಕ ಆಘಾತ ಅನುಭವಿಸಿತು. 19 ರನ್ ಗಳಿಸುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡಿತು. ಮಯಂಕ್ ಅಗರವಾಲ್ ಮತ್ತು ಕೆ.ಎಲ್. ಶ್ರೀಜಿತ್ ಅವರು ನಿರ್ಗಮಿಸಿದರು. ಆಟಕ್ಕೆ ಕುದುರಿಕೊಂಡಿದ್ದ ದೇವದತ್ತ ಪಡಿಕ್ಕಲ್ (32; 23ಎ) ಅವರು ಔಟಾದಾಗ ತಂಡದ ಮೊತ್ತವು 51ಕ್ಕೆ3 ವಿಕೆಟ್‌ಗಳಾಗಿತ್ತು.
ಈ ಹಂತದಲ್ಲಿ ಕರುಣ್ (51; 32ಎ) ಮತ್ತು ಸ್ಮರಣ್ (ಔಟಾಗದೇ 48, 31ಎ) ಅವರಿಬ್ಬರೂ ಪ್ರತಿಹೋರಾಟ ಮಾಡಿದರು. ಇದರಿಂದಾಗಿ 14.5 ಓವರ್‌ಗಳಲ್ಲಿ ತಂಡವು 133 ರನ್‌ಗಳನ್ನು ತಲುಪಿತ್ತು. ಇದರಿಂದಾಗಿ ತಂಡದಲ್ಲಿ ಗೆಲುವಿನ ಭರವಸೆ ಮೂಡಿತ್ತು.
ಆದರೆ ಕರುಣ್ ಔಟಾಗಿದ್ದೇ ತಡ ಸನ್ನಿವೇಶ ಬದಲಾಯಿತು. ಅಭಿನವ್ ಮನೋಹರ್ (6), ಶ್ರೇಯಸ್ ಗೋಪಾಲ್ (4) ಮತ್ತು ಪ್ರವೀಣ ದುಬೆ (6) ಅವರು ಹೆಚ್ಚು ಹೊತ್ತು ನಿಲ್ಲದೇ ನಿರ್ಗಮಿಸಿದರು. ಇದರಿಂದಾಗಿ ಹಾದಿ ಕಠಿಣವಾಯಿತು. ಇದೇ ಹೊತ್ತಿನಲ್ಲಿ ವಿದ್ಯಾಧರ್ ಪಾಟೀಲ (27; 8ಎ, 4X2, 6X3) ಅವರು ಸ್ಮರಣ್ ಜೊತೆಗೂಡಿ ಕೇವಲ ಎಂಟು ಎಸೆತಗಳಲ್ಲಿ 29 ರನ್‌ಗಳನ್ನು ಸೇರಿಸಿದರು. ಕಮಲೇಶ್ ನಾಗರಕೋಟಿ (52ಕ್ಕೆ3) ಅವರ ದಾಳಿಯಲ್ಲಿ ವಿದ್ಯಾಧರ್ ಔಟಾದರು. ಆಗ ತಂಡದ ಮೊತ್ತವು 184 ರನ್‌ಗಳಾಗಿದ್ದವು.
ಕೊನೆಯ ಓವರ್‌ನಲ್ಲಿ 15 ರನ್‌ಗಳ ಅಗತ್ಯವಿದ್ದಾಗ ವೈಶಾಖ ವಿಜಯಕುಮಾರ್ ಅವರು ಒಂದು ಸಿಕ್ಸರ್ ಮತ್ತು ಸ್ಮರಣ್ ಒಂದು ಬೌಂಡರಿ ಹೊಡೆದರು. ಇದರಿಂದಾಗಿ ಕೊನೆಯ ಎಸೆತದಲ್ಲಿ ಗೆಲುವಿಗೆ 3 ರನ್‌ಗಳ ಅಗತ್ಯವಿತ್ತು. ಆದರೆ ಬ್ಯಾಟರ್‌ಗಳಿಗೆ ಕೇವಲ ಒಂದು ರನ್ ಗಳಿಸಲು ಸಾಧ್ಯವಾಯಿತು. ರೋಚಕ ಜಯ ಸಾಧಿಸಿದ ರಾಜಸ್ಥಾನ 12 ಅಂಕಗಳೊಂದಿಗೆ ಗುಂಪಿನಲ್ಲಿ ಎರಡನೇ ಸ್ಥಾನಕ್ಕೇರಿದೆ. ಕರ್ನಾಟಕ ನಾಲ್ಕು ಅಂಕಗಳೊಂದಿಗೆ ಐದನೇ ಸ್ಥಾನಕ್ಕೆ ಜಾರಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ರಾಜಸ್ಥಾನ ತಂಡವು ದೀಪಕ್ ಹೂಡಾ (43), ಕಾರ್ತಿಕ್ ಶರ್ಮಾ (46 ರನ್) ಮತ್ತು ಲೊಮ್ರೊರ್ (ಔಟಾಗದೇ 48) ಅವರ ನೆರವಿನಿಂದ 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 201 ರನ್ ಗಳಿಸಿತು.
ರಾಜಸ್ಥಾನ: 20 ಓವರ್‌ಗಳಲ್ಲಿ 5ಕ್ಕೆ201 (ಭರತ್ ಶರ್ಮಾ 38, ದೀಪಕ್ ಹೂಡಾ 43, ಕಾರ್ತಿಕ್ ಶರ್ಮಾ 46, ಮಹಿಪಾಲ್ ಲೊಮ್ರೊರ್ ಔಟಾಗದೇ 48, ವಿದ್ಯಾಧರ್ ಪಾಟೀಲ 41ಕ್ಕೆ2, ವೈಶಾಖ ವಿಜಯಕುಮಾರ್ 39ಕ್ಕೆ2)
ಕರ್ನಾಟಕ: 20 ಓವರ್‌ಗಳಲ್ಲಿ 8ಕ್ಕೆ200 (ದೇವದತ್ತ ಪಡಿಕ್ಕಲ್ 32, ಕರುಣ್ ನಾಯರ್ 51, ಸ್ಮರಣ್ ರವಿಚಂದ್ರನ್ ಔಟಾಗದೇ 48, ವಿದ್ಯಾಧರ್ ಪಾಟೀಲ 27, ಅಶೋಕ್ ಶರ್ಮಾ 43ಕ್ಕೆ3, ಕಮಲೇಶ್ ನಾಗರಕೋಟಿ 52ಕ್ಕೆ3) ಫಲಿತಾಂಶ: ರಾಜಸ್ಥಾನ ತಂಡಕ್ಕೆ 1 ರನ್ ಜಯ.
ಹೈದರಾಬಾದ್ : ಪಂಜಾಬ್ ತಂಡದ ಅಭಿಷೇಕ್ ಶರ್ಮಾ ಅವರು 52 ಎಸೆತಗಳಲ್ಲಿ 148 ರನ್ ಗಳಿಸಿ ದಾಖಲೆ ಬರೆದರು. ಭಾನುವಾರ ನಡೆದ ಸೈಯದ್ ಮುಷ್ತಾಕ್ ಅಲಿ ಟೂರ್ನಿಯ ಪಂದ್ಯದಲ್ಲಿ ಅಭಿಷೇಕ್ ಆಟದ ಬಲದಿಂದ ಪಂಜಾಬ್ ತಂಡವು ಬಂಗಾಳ ಎದುರು 112 ರನ್‌ಗಳಿಂದ ಜಯಿಸಿತು.
ಟಾಸ್ ಗೆದ್ದ ಪಂಜಾಬ್ ತಂಡವು ಮೊದಲು ಬ್ಯಾಟಿಂಗ್ ಮಾಡಿತು. ಅಭಿಷೇಕ್ 12 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಟಿ20 ಮಾದರಿಯಲ್ಲಿ ಎರಡನೇ ವೇಗದ ಅರ್ಧಶತಕ ದಾಖಲಿಸಿದ ಭಾರತೀಯ ಬ್ಯಾಟರ್ ಆದರು. ಒಟ್ಟಾರೆ ಮೂರನೇ ಬ್ಯಾಟರ್ ಆದರು.
ಮೊಹಮ್ಮದ್ ಶಮಿ ಮತ್ತು ಆಕಾಶ್ ದೀಪ್ ಅವರಂತಹ ಉತ್ತಮ ಬೌಲರ್‌ಗಳ ಎದುರು ಅಭಿಷೇಕ್ ಅಬ್ಬರಿಸಿದರು. ಅವರ ಆಟದಿಂದಾಗಿ ಪಂಜಾಬ್ ತಂಡವು 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 310 ರನ್ ಗಳಿಸಿತು. ಅಭಿಷೇಕ್ ಆಟದಲ್ಲಿ 8 ಬೌಂಡರಿ ಮತ್ತು 16 ಸಿಕ್ಸರ್‌ಗಳಿದ್ದವು.
ಗುರಿ ಬೆನ್ನಟ್ಟಿದ ಬಂಗಾಳ ತಂಡಕ್ಕೆ 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 198 ರನ್‌ಗಳಿಸಲು ಮಾತ್ರ ಸಾಧ್ಯವಾಯಿತು. ತಂಡದ ನಾಯಕ ಅಭಿಮನ್ಯು ಈಶ್ವರನ್ (ಅಜೇಯ 130; 66ಎ, 4X12, 6X8) ಅವರು ಶತಕ ಹೊಡೆದರು. ಆದರೆ ಉಳಿದ ಬ್ಯಾಟರ್‌ಗಳು ವಿಫಲರಾದರು. ಆಕಾಶ್ ದೀಪ್ 31 ರನ್) ಎರಡಂಕಿ ಗಳಿಸಿದ ಎರಡನೇ ಬ್ಯಾಟರ್ ಆದರು.
ಸಂಕ್ಷಿಪ್ತ ಸ್ಕೋರು: ಪಂಜಾಬ್ 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 310 (ಅಭಿಷೇಕ್ ಶರ್ಮಾ 148, ಪ್ರಭಸಿಮ್ರನ್ ಸಿಂಗ್ 70, ರಮಣದೀಪ್ ಸಿಂಗ್ 39, ಸನ್ವೀರ್ ಸಿಂಗ್ 22, ಆಕಾಶ್ ದೀಪ್ 55ಕ್ಕೆ2) ಬಂಗಾಳ: 20 ಓವರ್‌ಗಳಲ್ಲಿ 9ಕ್ಕೆ198 (ಅಭಿಮನ್ಯು ಈಶ್ವರನ್ ಔಟಾಗದೇ 130, ಆಕಾಶ್ ದೀಪ್ 31, ಗುರ್ನೂರ್ ಬ್ರಾರ್ 40ಕ್ಕೆ2, ಹರಪ್ರೀತ್ ಬ್ರಾರ್ 23ಕ್ಕೆ4, ನೇಹಲ್ ವಧೇರಾ 19ಕ್ಕೆ2).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.