ADVERTISEMENT

ಮುಷ್ತಾಕ್ ಅಲಿ ಟ್ರೋಫಿ ಕ್ರಿಕೆಟ್: ಕರ್ನಾಟಕಕ್ಕೆ ಗೋವಾ ಸವಾಲು

'ಎ' ಗುಂಪಿನ ಕೊನೆಯ ಪಂದ್ಯ ಇಂದು

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2019, 20:00 IST
Last Updated 16 ನವೆಂಬರ್ 2019, 20:00 IST
ಕೆ.ಎಲ್. ರಾಹುಲ್, ದೇವದತ್ತ ಪಡಿಕ್ಕಲ್ ಮತ್ತು ಕರುಣ್ ನಾಯರ್
ಕೆ.ಎಲ್. ರಾಹುಲ್, ದೇವದತ್ತ ಪಡಿಕ್ಕಲ್ ಮತ್ತು ಕರುಣ್ ನಾಯರ್   

ವಿಶಾಖಪಟ್ಟಣ: ಹಾಲಿ ಚಾಂಪಿಯನ್ ಕರ್ನಾಟಕ ತಂಡವು ಭಾನುವಾರ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯ ಎ ಗುಂಪಿನ ಕೊನೆಯ ಪಂದ್ಯದಲ್ಲಿ ಗೋವಾ ತಂಡವನ್ನು ಎದುರಿಸಲಿದೆ.

ಹೋದ ವರ್ಷ ಚಾಂಪಿಯನ್ ಆಗಿದ್ದ ಕರ್ನಾಟಕ ತಂಡವು ಈ ಬಾರಿಯ ಟೂರ್ನಿಯಲ್ಲಿಯೂ ಗೆಲುವಿನೊಂದಿಗೆ ಶುಭಾರಂಭ ಮಾಡಿತ್ತು. ಆದರೆ ಎರಡನೇ ಪಂದ್ಯದಲ್ಲಿ ಬರೋಡಾ ತಂಡವು ಸೋಲಿನ ಕಹಿ ಉಣಿಸಿತ್ತು. ಅದರ ನಂತರದ ಪಂದ್ಯಗಳಲ್ಲಿ ಸುಲಭ ಜಯ ಸಾಧಿಸಿದ್ದ ಕರ್ನಾಟಕವು ಈಗಾಗಲೇ ಸೂಪರ್ ಲೀಗ್ ಹಂತಕ್ಕೆ ಪ್ರವೇಶಿಸಿದೆ.

ಈ ಪಂದ್ಯದಲ್ಲಿ ಗೆದ್ದರೆ ಗುಂಪಿನಲ್ಲಿ ಮೊದಲ ಸ್ಥಾನಕ್ಕೇರುವ ಅವಕಾಶ ಮನೀಷ್ ಪಾಂಡೆ ಬಳಗಕ್ಕೆ ಇದೆ. ಒಟ್ಟು 16 ಅಂಕಗಳಿಸಿರುವ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. 20 ಅಂಕ ಗಳಿಸಿರುವ ಬರೋಡಾ ತಂಡವು ಮೊದಲ ಸ್ಥಾನದಲ್ಲಿದೆ. ಆದರೆ, ಕರ್ನಾಟಕದ ರನ್‌ ರೇಟ್ ಹೆಚ್ಚು ಇರುವುದರಿಂದ ಈ ಪಂದ್ಯದ ಜಯವು ಅಗ್ರಸ್ಥಾನ ಪಡೆಯಲು ಸಹಕಾರಿಯಾಗುವುದು. ಹೋದ ಪಂದ್ಯದಲ್ಲಿ ಕೆ.ಎಲ್. ರಾಹುಲ್ ಕಣಕ್ಕೆ ಇಳಿದಿದ್ದರು. ಈ ಪಂದ್ಯದಲ್ಲಿಯೂ ಅವರು ಆಡುವುದು ಬಹುತೇಕ ಖಚಿತ. ಕರುಣ್ ನಾಯರ್ ಅರ್ಧಶತಕ ಹೊಡೆದು ಮಿಂಚಿದ್ದರು. ಕೆಲವು ಬದಲಾವಣೆಗಳನ್ನು ಮಾಡುವ ಸಾಧ್ಯತೆಯೂ ಇದೆ.

ADVERTISEMENT

ಆದರೆ ಗೋವಾ ತಂಡವನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ತನ್ನ ಮೊದಲ ಪಂದ್ಯದಲ್ಲಿ ಬಲಿಷ್ಠ ಬರೋಡಾ ತಂಡವನ್ನು 9 ವಿಕೆಟ್‌ಗಳಿಂದ ಸೋಲಿಸಿತ್ತು. ಎರಡನೇ ಪಂದ್ಯದಲ್ಲಿ ಬಿಹಾರ ವಿರುದ್ಧವೂ ಜಯಿಸಿತ್ತು. ಆದರೆ ನಂತರ ಲಯ ಕಳೆದುಕೊಂಡಿತ್ತು. ಅದರಿಂದ ಸತತ ಸೋಲುಂಡಿತ್ತು.

ಗೋವಾ ತಂಡದಲ್ಲಿ ಕರ್ನಾಟಕ ರಣಜಿ ತಂಡದ ಮಾಜಿ ಆಟಗಾರ ಅಮಿತ್ ವರ್ಮಾ ಮತ್ತು ಸುಯಶ್ ಪ್ರಭುದೇಸಾಯಿ ಅವರು ಪ್ರಮುಖ ಬ್ಯಾಟ್ಸ್‌ಮನ್ ಗಳಾಗಿದ್ದಾರೆ. ಟೂರ್ನಿಗೂ ಮುನ್ನ ಗೋವಾ ತಂಡದ ನಾಯಕತ್ವ ವಹಿಸಿದ್ದ ಕರ್ನಾಟಕದ ಆದ ಸಿ.ಎಂ. ಗೌತಮ್ ಅವರನ್ನು ಕೆಪಿಎಲ್ ಬೆಟ್ಟಿಂಗ್ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ಧಾರೆ. ಅದ್ದರಿಂದ ಅವರನ್ನು ಗೋವಾ ತಂಡವು ವಜಾ ಮಾಡಿತ್ತು. ಅವರ ಬದಲಿಗೆ ದರ್ಶನ್ ಮಿಸಾಳ್ ತಂಡವನ್ನು ಮುನ್ನಡೆಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.