ADVERTISEMENT

T20 Cricket League: ಮುಂಬೈಗೆ ಆಘಾತ ನೀಡಿದ ಹೈದರಾಬಾದ್

ಪಿಟಿಐ
Published 12 ಡಿಸೆಂಬರ್ 2025, 16:17 IST
Last Updated 12 ಡಿಸೆಂಬರ್ 2025, 16:17 IST
   

ಪುಣೆ: ಬೌಲರ್‌ಗಳ ಸಾಂಘಿಕ ಪ್ರದರ್ಶನದ ನೆರವಿನಿಂದ ಹೈದರಾಬಾದ್ ತಂಡ, ಸೈಯದ್‌ ಮುಷ್ತಾಕ್ ಅಲಿ ಟ್ರೋಫಿ ಟಿ20 ಕ್ರಿಕೆಟ್‌ ಟೂರ್ನಿಯ ‘ಬಿ’ ಗುಂಪಿನ ಸೂಪರ್‌ ಲೀಗ್ ಪಂದ್ಯದಲ್ಲಿ ಶುಕ್ರವಾರ ಮುಂಬೈ ತಂಡದ ಮೇಲೆ 9 ವಿಕೆಟ್‌ಗಳ ಸುಲಭ ಗೆಲುವು ಪಡೆಯಿತು.

ಚಾಮಾ ಮಿಲಿಂದ್ (36ಕ್ಕೆ2), ತನಯ್ ತ್ಯಾಗರಾಜನ್ (27ಕ್ಕೆ2) ಮತ್ತು ಅನುಭವಿ ಮೊಹಮ್ಮದ್ ಸಿರಾಜ್ (21ಕ್ಕೆ3) ಅವರ ದಾಳಿಗೆ ಸಿಲುಕಿದ ಮುಂಬೈ 18.5 ಓವರುಗಳಲ್ಲಿ 131 ರನ್‌ಗಳಿಗೆ ಉರುಳಿತು. ಆರಂಭ ಆಟಗಾರ ಯಶಸ್ವಿ ಜೈಸ್ವಾಲ್ ಮತ್ತು ಮಧ್ಯಮ ಕ್ರಮಾಂಕದ ಹಾರ್ದಿಕ್ ತಮೋರೆ ತಲಾ 29 ರನ್ ಗಳಿಸಿದರು.

ಹೈದರಾಬಾದ್ 11.5 ಓವರುಗಳಲ್ಲಿ 1 ವಿಕೆಟ್‌ ಕಳೆದುಕೊಂಡು 132 ರನ್ ಗಳಿಸಿತು. ಆರಂಭ ಆಟಗಾರರಾದ ಅಮನ್ ರಾವ್ (ಅಜೇಯ 59, 29ಎ) ಮತ್ತು ತನ್ಮಯ್ ಅಗರವಾಲ್ (75, 40ಎ, 4x7, 6x4) ಅರ್ಧಶತಕಗಳನ್ನು ಗಳಿಸಿದರಲ್ಲದೇ, ಮೊದಲ ವಿಕೆಟ್‌ಗೆ 127 ರನ್ ಸೇರಿಸಿ ಗೆಲುವು ತ್ವರಿತಗೊಳಿಸಿದರು.

ADVERTISEMENT

‘ಬಿ’ ಗುಂಪಿನ ಇನ್ನೊಂದು ಪಂದ್ಯದಲ್ಲಿ ಹರಿಯಾಣ 7 ವಿಕೆಟ್‌ಗಳಿಂದ ರಾಜಸ್ತಾನ ತಂಡವನ್ನು ಸೋಲಿಸಿತು.

ಸಂಕ್ಷಿಪ್ತ ಸ್ಕೋರು: ರಾಜಸ್ತಾನ: 20 ಓವರುಗಳಲ್ಲಿ 8ಕ್ಕೆ 132 (ಶುಭಂ ಗರ್ವಾಲ್‌ 33, ಮಹಿಪಾಲ್ ಲೊಮ್ರೋರ್ ಔಟಾಗದೇ 37; ಅನ್ಶುಲ್ ಕಾಂಬೋಜ್ 24ಕ್ಕೆ2, ಇಶಾಂತ್ ಭಾರದ್ವಾಜ್ 24ಕ್ಕೆ2); ಹರಿಯಾಣ: 16.2 ಓವರುಗಳಲ್ಲಿ 3ಕ್ಕೆ 133 (ಅಂಕಿತ್ ಕುಮಾರ್ 60, ಪಾರ್ಥ್‌ ವತ್ಸ್‌ ಔಟಾಗದೇ 27).

ಕುಶಾಗ್ರ ಮಿಂಚು–ಜಾರ್ಖಂಡ್‌ಗೆ ಜಯ:

ಕುಮಾರ್ ಕುಶಾಗ್ರ ಅವರ ಅಜೇಯ 86 ರನ್‌ಗಳ (42ಎ, 4x8, 6x4) ನೆರವಿನಿಂದ ಜಾರ್ಖಂಡ್ ತಂಡ ‘ಎ’ ಗುಂಪಿನ ಪಂದ್ಯದಲ್ಲಿ ಪಂಜಾಬ್ ತಂಡವನ್ನು ಆರು ವಿಕೆಟ್‌ಗಳಿಂದ ಮಣಿಸಿತು.

ಪಂಜಾಬ್‌ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ಸಲೀಲ್ ಅರೋರಾ ಅವರ ಅಬ್ಬರದ ಶತಕ (ಔಟಾಗದೇ 125, 45ಎ, 4x9, 6x11) ಫಲಪ್ರದವಾಗಲಿಲ್ಲ. ಪಂಜಾಬ್‌ ತಂಡವು 20 ಓವರುಗಳಲ್ಲಿ 6 ವಿಕೆಟ್‌ಗೆ 235 ರನ್ ಗಳಿಸಿದರೆ, ಜಾರ್ಖಂಡ್‌ 18.1 ಓವರುಗಳಲ್ಲಿ 4 ವಿಕೆಟ್‌ಗೆ 237 ರನ್ ಬಾರಿಸಿತು.

ಕುಶಾಗ್ರ ಅವರ ಜೊತೆ ಇಶಾನ್ ಕಿಶನ್ 47 (23ಎ), ಅನುಕೂಲ್ ರಾಯ್ (37, 17ಎ) ಮತ್ತು ಪಂಕಜ್ ಕುಮಾರ್ (ಅಜೇಯ 39, 18ಎ) ಅವರೂ ಜಾರ್ಖಂಡ ತಂಡ ಬೇಗ ಗುರಿತಲುಪಲು ನೆರವಾದರು.

ಫಲ ನೀಡದ ರೆಡ್ಡಿ ಹ್ಯಾಟ್ರಿಕ್:

ಭಾರತ ತಂಡದ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ (25, ಹ್ಯಾಟ್ರಿಕ್ ಸಹಿತ 17ಕ್ಕೆ3) ಅವರ ಆಲ್‌ರೌಂಡ್‌ ಆಟ ಆಂಧ್ರದ ಗೆಲುವಿಗೆ ಸಾಕಾಗಲಿಲ್ಲ. ಅಲ್ಪ‍ಸ್ಕೋರುಗಳನ್ನು ಕಂಡ ‘ಎ’ ಗುಂಪಿನ ಪಂದ್ಯದಲ್ಲಿ ಮಧ್ಯಪ್ರದೇಶ 4 ವಿಕೆಟ್‌ಗಳಿಂದ ಆಂಧ್ರ ಮೇಲೆ ಜಯಗಳಿಸಿತು.

ಇನಿಂಗ್ಸ್‌ನ ಮೂರನೇ ಓವರಿನಲ್ಲಿ ರೆಡ್ಡಿ ಅವರು ಸತತ ಎಸೆತಗಳಲ್ಲಿ ಹರ್ಷ ಗಾವಳಿ, ಹರ್‌ಪ್ರೀತ್ ಸಿಂಗ್ ಭಾಟಿಯಾ ಮತ್ತು ನಾಯಕ ರಜತ್ ಪಾಟೀದಾರ್ ಅವರ ವಿಕೆಟ್‌ಗಳನ್ನು ಪಡೆದರು.

ಸ್ಕೋರುಗಳು: ಆಂಧ್ರ: 19.1 ಓವರುಗಳಲ್ಲಿ 112 (ಕೆ.ಎಸ್‌.ಭರತ್ 39, ನಿತೀಶ್ ಕುಮಾರ್ ರೆಡ್ಡಿ 25; ಶಿವಂ ಶುಕ್ಲಾ 23ಕ್ಕೆ4, ತ್ರಿಪುರೇಶ್ ಸಿಂಗ್ 31ಕ್ಕೆ3); ಮಧ್ಯಪ್ರದೇಶ: 17.3 ಓವರುಗಳಲ್ಲಿ 6ಕ್ಕೆ 113 (ರಿಷಭ್ ಚೌಹಾನ್ 47, ರಾಹುಲ್ ಬಾತಮ್ ಅಜೇಯ 35, ನಿತೀಶ್ ಕುಮಾರ್ ರೆಡ್ಡಿ 17ಕ್ಕೆ3).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.