ADVERTISEMENT

T20 World Cup: ಲೀಗ್‌ ಹಂತದಲ್ಲೇ ಹೊರಬೀಳುತ್ತಾ ಆಸ್ಟ್ರೇಲಿಯಾ, ಪಾಕಿಸ್ತಾನ ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಫೆಬ್ರುವರಿ 2026, 3:15 IST
Last Updated 17 ಫೆಬ್ರುವರಿ 2026, 3:15 IST
   

ಭಾರತ ಮತ್ತು ಶ್ರೀಲಂಕಾದ ಆತಿಥ್ಯದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ ಟೂರ್ನಿಯು ಹಲವು ರೋಚಕ ಪಂದ್ಯಗಳಿಗೆ ಸಾಕ್ಷಿಯಾಗಿದ್ದು, ಲೀಗ್‌ ಹಂತ ಮುಗಿಯಲು ಇನ್ನೂ ಕೆಲವೇ ಪಂದ್ಯಗಳು ಮಾತ್ರ ಬಾಕಿಯುಳಿದಿದೆ.

ಲೀಗ್‌ ಹಂತದ ಅಂಕಪಟ್ಟಿಯಲ್ಲಿ ನಾಲ್ಕು ಗುಂಪುಗಳಲ್ಲಿ ಮೊದಲ ಎರಡು ಸ್ಥಾನಗಳನ್ನು ಪಡೆದ ತಂಡಗಳು ಮಾತ್ರ ಸೂಪರ್‌ 8ಗೆ ಲಗ್ಗೆ ಇಡಲಿವೆ. ಚುಟುಕು ಕ್ರಿಕೆಟ್‌ ಟೂರ್ನಿಯಲ್ಲಿ ಒಟ್ಟು 20 ತಂಡಗಳು ಭಾಗವಹಿಸಿದ್ದವು.

ಈಗಾಗಲೇ ಎ ಗುಂಪಿನಲ್ಲಿ ಅಗ್ರಸ್ಥಾನದಲ್ಲಿರುವ ಭಾರತ ತಂಡವು ಸೂಪರ್‌ 8ಗೆ ತಲುಪಿದೆ. ಕೊನೆ ಸ್ಥಾನದಲ್ಲಿರುವ ನಮೀಬಿಯಾ ತಂಡವು ಟೂರ್ನಿಯಿಂದ ಹೊರಬಿದ್ದಿದೆ. ಅಮೆರಿಕ ಹಾಗೂ ಪಾಕಿಸ್ತಾನದಲ್ಲಿ ಒಂದು ತಂಡ, ಸೂಪರ್‌ 8ಗೆ ಕಾಲಿಡುವ ಸಾಧ್ಯತೆಯಿದೆ. ಅಮೆರಿಕ ತಂಡವು 4 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದ್ದು, ಪಾಕಿಸ್ತಾನ ತಂಡವು ನಮೀಬಿಯಾ ವಿರುದ್ಧ ಸೋತರೆ ಸೂಪರ್‌ 8ಗೆ ತಲುಪಲಿದೆ. ಒಂದು ವೇಳೆ ಆ ಪಂದ್ಯದಲ್ಲಿ ಪಾಕಿಸ್ತಾನ ಗೆದ್ದರೆ, ಅಮೆರಿಕ ಟೂರ್ನಿಯಿಂದ ಹೊರ ಬೀಳಲಿದೆ. ಫೆ.18ರಂದು ನಡೆಯುವ ಆ ಪಂದ್ಯದ ಮೇಲೆ, ಉಭಯ ತಂಡಗಳ ಭವಿಷ್ಯವಿದೆ.

ADVERTISEMENT

ಬಿ ಗುಂಪಿನಲ್ಲಿ ಆಡಿರುವ 3 ಪಂದ್ಯಗಳನ್ನು ಗೆದ್ದಿರುವ ಶ್ರೀಲಂಕಾ ತಂಡವು ಈಗಾಗಲೇ ಸೂಪರ್‌ 8ಗೆ ಲಗ್ಗೆ ಇಟ್ಟಿದೆ. ಒಮಾನ್ ಟೂರ್ನಿಯಿಂದ ಹೊರಬಿದ್ದಿದೆ. ಜಿಂಬಾಬ್ವೆ ಹಾಗೂ ಆಸ್ಟ್ರೇಲಿಯಾ ನಡುವೆ ಸೂಪರ್‌ 8ಗೆ ಪೈಪೋಟಿ ಏರ್ಪಟ್ಟಿದೆ. ಜಿಂಬಾಬ್ವೆ ಆಡಿರುವ 2 ಪಂದ್ಯಗಳಲ್ಲೂ ಗೆಲುವು ದಾಖಲಿಸಿದ್ದು, ಐರ್ಲೆಂಡ್ ಮತ್ತು ‌ಶ್ರೀಲಂಕಾ ವಿರುದ್ಧದ ಒಂದು ಪಂದ್ಯ ಗೆದ್ದರೂ ಸೂಪರ್‌ 8ಗೆ ತಲುಪಲಿದೆ. ‌ಶ್ರೀಲಂಕಾ ವಿರುದ್ಧ ಸೋತು, ಟೂರ್ನಿಯಿಂದ ಹೊರ ಬೀಳುವ ಹಂತದಲ್ಲಿರುವ ಆಸ್ಟ್ರೇಲಿಯಾಗೆ, ಸೂಪರ್‌ 8 ತಲುಪಲು ಅದೃಷ್ಟದ ಅವಶ್ಯಕತೆಯಿದೆ. ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಒಮಾನ್ ವಿರುದ್ಧ ದೊಡ್ಡ ಅಂತರದಲ್ಲಿ ಗೆಲ್ಲುವ ಜತೆಗೆ, ಜಿಂಬಾಬ್ವೆ ತಂಡವು ಇನ್ನೂ ಎರಡು ಪಂದ್ಯಗಳನ್ನು ಸೋತರೆ ಮಾತ್ರ, ಆಸೀಸ್ ಟೂರ್ನಿಯಲ್ಲಿ ಜೀವಂತವಾಗಿ ಉಳಿಯುತ್ತಾರೆ.

ಸಿ ಗುಂಪಿನಲ್ಲಿ 3 ಗೆಲುವುಗಳೊಂದಿಗೆ ಅಗ್ರಸ್ಥಾನದಲ್ಲಿ ವೆಸ್ಟ್‌ ಇಂಡೀಸ್ ತಂಡವು ಸೂಪರ್‌ 8ಗೆ ತಲುಪಿದೆ.. ಕೊನೆಯ ಲೀಗ್ ಪಂದ್ಯದಲ್ಲಿ ಇಟಲಿ ವಿರುದ್ಧ 24 ರನ್‌ ಗಳಿಸುವ ಮೂಲಕ ಇಂಗ್ಲೆಂಡ್‌, ಗುಂಪಿನಲ್ಲಿ ಎರಡನೇ ಸ್ಥಾನದೊಂದಿಗೆ ಮುಂದಿನ ಹಂತಕ್ಕೆ ಲಗ್ಗೆ ಇಟ್ಟಿದೆ.

ಡಿ ಗುಂಪಿನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ದಕ್ಷಿಣ ಆಫ್ರಿಕಾ ತಂಡವು ಸೂಪರ್‌ 8ಗೆ ಲಗ್ಗೆ ಇಟ್ಟಿದೆ. ಗುಂಪಿನಲ್ಲಿ ಎರಡನೇ ಸ್ಥಾನಕ್ಕಾಗಿ ನ್ಯೂಜಿಲೆಂಡ್ ಹಾಗೂ ಅಫ್ಘಾನಿಸ್ತಾನ ತಂಡಗಳ ಮಧ್ಯೆ ಪೈಪೋಟಿ ಏರ್ಪಟ್ಟಿದೆ. ನ್ಯೂಜಿಲೆಂಡ್ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಕೆನಡಾ ವಿರುದ್ಧ ಗೆಲುವು ಸಾಧಿಸಿದರೆ, ಸೂಪರ್‌ 8ಗೆ ತಲುಪಲಿದೆ. ಒಂದು ವೇಳೆ ಕಿವೀಸ್ ಆ ಪಂದ್ಯದಲ್ಲಿ ಸೋತು, ಅಫ್ಘಾನಿಸ್ತಾನವು ಕೆನಡಾ ವಿರುದ್ಧ ದೊಡ್ಡ ಅಂತರದ ಗೆಲುವು ಸಾಧಿಸಿದರೆ ನ್ಯೂಜಿಲೆಂಡ್ ಟೂರ್ನಿಯಿಂದ ಹೊರಬೀಳಲಿದೆ.

ಫೆ.21ರಿಂದ ಸೂಪರ್‌ 8 ಪಂದ್ಯಗಳು ಆರಂಭವಾಗಲಿವೆ. ಭಾರತವು ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯವಾಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.