
ಕೊಲೊಂಬೊ: 2026ರ ಟಿ20 ವಿಶ್ವಕಪ್‌ನ ಎ ಗುಂಪಿನ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡವು ಪಾಕಿಸ್ತಾನವನ್ನು 61 ರನ್‌ಗಳಿಂದ ಮಣಿಸಿ, ಭರ್ಜರಿ ಗೆಲುವು ದಾಖಲಿಸಿ, ಸೂಪರ್ 8ರ ಹಂತಕ್ಕೆ ಲಗ್ಗೆ ಇಟ್ಟಿದೆ. ಈ ಪಂದ್ಯಾವಳಿ ಆರಂಭಕ್ಕೂ ಮುನ್ನ ಪಾಕಿಸ್ತಾನ ತಂಡವು ಭಾರತದ ವಿರುದ್ಧ ಆಡಲ್ಲ ಎಂದು ಹೇಳಿದ್ದು, ಪಂದ್ಯದ ರೋಚಕತೆಯನ್ನು ಹೆಚ್ಚಿಸಿತ್ತು.
ಫೆಬ್ರುವರಿ 15ರಂದು ನಡೆದ ಈ ಹೈವೋಲ್ಟೇಜ್ ಪಂದ್ಯ ವೀಕ್ಷಿಸಲು ಐಸಿಸಿ ಅಧ್ಯಕ್ಷ ಜಯ್ ಶಾ ಸೇರಿದಂತೆ ದೇಶಗಳ ಉನ್ನತ ಕ್ರಿಕೆಟ್ ಅಧಿಕಾರಿಗಳು ಭಾಗವಹಿಸಿದ್ದರು. ಮಾತ್ರವಲ್ಲ, ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ಮೊಹ್ಸಿನ್ ನಖ್ವಿ ಕೂಡ ಹಾಜರಾಗಿದ್ದರು. ಆದರೆ, ಅವರು ಪಂದ್ಯ ಮುಗಿಯುವದಕ್ಕೂ ಮೊದಲೇ ಮೈದಾನದಿಂದ ತೆರಳಿರುವುದು ಕಂಡುಬಂದಿದೆ.
ಪಿಟಿಐ ಹಂಚಿಕೊಂಡಿರುವ ವಿಡಿಯೊದಲ್ಲಿ, ಮೊಹ್ಸಿನ್ ನಖ್ವಿ ಅವರ ಕಾರು ಪಂದ್ಯ ಮುಗಿಯುವ ಮೊದಲೇ ಆರ್.ಪ್ರೇಮದಾಸ ಕ್ರೀಡಾಂಗಣದಿಂದ ಹೊರಟಿರುವುದು ಕಂಡುಬಂದಿದೆ.
ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಟ್ರೋಲ್‌ಗೆ ಕಾರಣವಾಗಿದೆ.
ಏಷ್ಯಾ ಕಪ್ ಟ್ರೋಫಿ ವಿವಾದ
ಕಳೆದ ವರ್ಷ ಮುಕ್ತಾಯಗೊಂಡ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡವು ಪಾಕಿಸ್ತಾನದ ವಿರುದ್ಧ ರೋಚಕ ಗೆಲುವು ದಾಖಲಿಸಿತ್ತು. ಬಳಿಕ ಟ್ರೋಫಿ ವಿತರಣೆಗೆ ಬಂದ ನಖ್ವಿ ಅವರಿಂದ ಟ್ರೋಫಿ ಪಡೆಯುವುದಿಲ್ಲ ಎಂದು ಭಾರತ ಕ್ರಿಕೆಟ್ ಆಟಗಾರರು ಹಠ ಹಿಡಿದಿದ್ದರು. ಇದರಿಂದಾಗಿ, ನಖ್ವಿ ಅವರು ಟ್ರೋಫಿಯನ್ನು ತಮ್ಮ ಜೊತೆಗೆ ತೆಗೆದುಕೊಂಡು ಹೋಗಿದ್ದರು. ಇಂದಿಗೂ ಏಷ್ಯಾ ಕಪ್ ಟ್ರೋಫಿ ಭಾರತದ ಕೈ ಸೇರಿಲ್ಲ.
ವಿಶ್ವಕಪ್ ಆರಂಭಕ್ಕೂ ಮುನ್ನ ನಡೆದಿದ್ದೇನು?
ಟಿ20 ವಿಶ್ವಕಪ್‌ನಲ್ಲಿ ಭಾರತದಲ್ಲಿ ಆಡುವುದಿಲ್ಲ ಎಂದು ಹೇಳಿದ್ದ ಬಾಂಗ್ಲಾದೇಶವನ್ನು ಟೂರ್ನಿಯಿಂದಲೇ ಹೊರಹಾಕಿದ ಬಳಿಕ, ಪಾಕಿಸ್ತಾನ ತಂಡವು ಬಾಂಗ್ಲಾದೇಶಕ್ಕೆ ಬಂಬಲ ನೀಡುವ ಉದ್ದೇಶದಿಂದಾಗಿ, ತಾವು ಭಾರತದ ವಿರುದ್ಧ ಆಡಲ್ಲ ಎಂದು ಹೇಳಿತ್ತು. ಹಲವು ಸುತ್ತಿನ ಮಾತುಕತೆಯ ಬಳಿಕ ಪಾಕಿಸ್ತಾನವು ಐಸಿಸಿಗೆ ಕೆಲವು ಷರುತ್ತುಗಳನ್ನು ವಿಧಿಸಿ ಆಡಲು ಒಪ್ಪಿಕೊಂಡಿತ್ತು. ಈ ಎಲ್ಲಾ ಪ್ರಹಸನದ ಹಿಂದೆ ಮೋಹ್ಸಿನ್ ನಖ್ವಿ ಇರುವುದು ಗುಟ್ಟಾಗಿ ಏನು ಉಳಿದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.