ಪಾಕಿಸ್ತಾನ ಕ್ರಿಕೆಟ್ ತಂಡ
ಕೊಲಂಬೊ: ಅಸ್ಥಿರ ಆಟವಾಡುವ ಪಾಕಿಸ್ತಾನ ತಂಡವು 20 ತಿಂಗಳ ಹಿಂದೆ ಟಿ20 ವಿಶ್ವಕಪ್‌ನಲ್ಲಿ ಆತಿಥೇಯ ಅಮೆರಿಕ ಎದುರು ಆಘಾತ ಅನುಭವಿಸಿತ್ತು. ಈಗ ಆ ಕರಾಳ ನೆನಪನ್ನು ಅಳಿಸಿಹಾಕುವ ಗುರಿಯೊಡನೆ ಪಾಕಿಸ್ತಾನ ತಂಡವು ಮಂಗಳವಾರ ಇಲ್ಲಿ ನಡೆಯುವ ‘ಎ’ ಗುಂಪಿನ ಪಂದ್ಯದಲ್ಲಿ ಅಮೆರಿಕ ತಂಡವನ್ನು ಎದುರಿಸಲಿದೆ.
ಆ ಪಂದ್ಯದ ಮೂಲಕ ಕ್ರಿಕೆಟ್ ಜಗತ್ತಿಗೆ ತನ್ನ ಸಾಮರ್ಥ್ಯ ಪರಿಚಯಿಸಿದ ಅಮೆರಿಕ ತಂಡ ದೃಢಸಂಕಲ್ಪದಿಂದ ಆಡುತ್ತಿದೆ. ಈ ಬಾರಿ ಮೊದಲ ಪಂದ್ಯದಲ್ಲಿ ಭಾರತ ಎದುರು ಸೋತಿರುವ ಅಮೆರಿಕ ತಂಡವು ಹೆಚ್ಚಿನ ಸ್ಫೂರ್ತಿಯೊಡನೆ ಪಾಕ್ ವಿರುದ್ಧ ಕಣಕ್ಕಿಳಿಯಲಿದೆ.
ಎರಡೂ ತಂಡಗಳು ಬ್ಯಾಟಿಂಗ್ ಸಮಸ್ಯೆ ಎದುರಿಸಿವೆ. ನೆದರ್ಲೆಂಡ್ಸ್ ವಿರುದ್ಧ ಮೊದಲ ಪಂದ್ಯದಲ್ಲಿ ಸುಲಭ ಗೆಲುವಿನತ್ತ ಸಾಗಿದ್ದ ಪಾಕ್ ನಂತರ ಮಧ್ಯಮ ಕ್ರಮಾಂಕದಲ್ಲಿ ಕುಸಿತ ಕಂಡು ಪರದಾಡಿತ್ತು. ಫಾಹೀಂ ಅಶ್ರಫ್ ಅವರ ಮಿಂಚಿನ ಆಟ ತಂಡವನ್ನು ಕಾಪಾಡಿತ್ಉತ.
ವಾಂಖೆಡೆ ಕ್ರೀಡಾಂಗಣದಲ್ಲಿ ಅಮೆರಿಕ ತಂಡವು ಮೊದಲ ಪಂದ್ಯದಲ್ಲಿ ಸ್ಫೂರ್ತಿಯುತ ಬೌಲಿಂಗ್ ಪ್ರದರ್ಶನಿಸಿ ಹಾಲಿ ಚಾಂಪಿಯನ್ ಭಾರತ ತಂಡವನ್ನು ಎಲ್ಲ ರೀತಿ ಒತ್ತಡಕ್ಕೆ ಸಿಲುಕಿಸಿತ್ತು. ಸೂರ್ಯ ಕುಮಾರ್ ಆಟದಿಂದ ಭಾರತ ಹೋರಾಟದ ಮೊತ್ತ ಗಳಿಸಿತು. ಆದರೆ ಅಮೆರಿಕದ ಬ್ಯಾಟರ್‌ಗಳು, ಬೌಲರ್‌ಗಳ ಶ್ರಮಕ್ಕೆ ಪೂರಕವಾದ ಆಟವಾಡಲು ವಿಫಲರಾದರು.
ಚುಟುಕು ಕ್ರಿಕೆಟ್‌ಗೆ ಪುನರಾಗಮನ ಮಾಡಿರುವ ನಾಯಕ ಬಾಬರ್ ಆಜಂ ಅವರಿಗೆ ಉತ್ತಮ ಆಟ ಆಡಬೇಕಾದ ಒತ್ತಡವಿದೆ. ಆರಂಭ ಆಟಗಾರ ಸಯಿಮ್ ಅಯೂಬ್ ಬ್ಯಾಟಿಂಗ್‌ನಲ್ಲಿ ಮಿಂಚಿಲ್ಲ. ಆದರೆ ಸ್ಪಿನ್ನರ್ ಆಗಿ ಯಶಸ್ಸು ಕಂಡಿದ್ದಾರೆ.
ತಂಡದ ಆಟಗಾರರು ಒತ್ತಡ ನಿಭಾಯಿಸುವುದನ್ನು ಕಲಿಯಬೇಕಾಗಿದೆ ಎಂದು ನಾಯಕ ಸಲ್ಮಾನ್ ಅಲಿ ಆಘಾ ಅಭಿಪ್ರಾಯಪಟ್ಟಿದ್ದಾರೆ. ‘ನಾವು ಉತ್ತಮ ಆರಂಭ ಪಡೆದ ಮೇಲೆ ಕೆಲವು ವಿಕೆಟ್‌ಗಳನ್ನು ಕಳೆದುಕೊಂಡು ಒತ್ತಡಕ್ಕೆ ಸಿಲುಕಿದ್ದೆವು’ ಎಂದು ನೆದರ್ಲೆಂಡ್ಸ್ ವಿರುದ್ಧ ಪಂದ್ಯದ ಬಗ್ಗೆ ಪ್ರತಿಕ್ರಿಯಿಸಿದರು.
ಅಮೆರಿಕ ತಂಡವೂ ಬ್ಯಾಟಿಂಗ್ ಬಲಪಡಿಸುವತ್ತ ಗಮನ ಹರಿಸಬೇಕಾಗಿದೆ. ‘ಭಾರತ ವಿರುದ್ಧದ ಪಂದ್ಯದಲ್ಲಿ ಕೆಟ್ಟ ಹೊಡೆತಗಳಿಂದ ನಾವುವಿಕೆಟ್ ಕಳೆದುಕೊಂಡೆವು’ ಎಂದು ನಾಯಕ ಮೊನಾಂಕ್ ಪಟೇಲ್ ಒಪ್ಪಿಕೊಂಡರು. ದಕ್ಷಿಣ ಆಫ್ರಿಕಾ ಸಂಜಾತ ಶಾಡ್ಲಿ ವಾನ್ ಶಾಲ್ವಿಕ್ ನೇತೃತ್ವದಲ್ಲಿ ಬೌಲರ್‌ಗಳ ಪ್ರದರ್ಶನ ಗಮನ ಸೆಳೆದಿದೆ.
ವಿಶ್ವಕಪ್‌ಗೆ ಮೊದಲು ಅಮೆರಿಕ ತಂಡವು ಇಲ್ಲಿನ ಪರಿಸ್ಥಿತಿಗೆ ಒಗ್ಗಿಕೊಳ್ಳಲು ಶ್ರೀಲಂಕಾದಲ್ಲಿ ಅಭ್ಯಾಸ ನಡೆಸಿತ್ತು. ಮೊದಲ ಪಂದ್ಯದಲ್ಲಿ ಫೀಲ್ಡ್ ಮಾಡುವಾಗ ಗಾಯಗೊಂಡ ವೇಗಿ ಅಲಿ ಖಾನ್ ಅವರ ಫಿಟ್ನೆಸ್ ಬಗ್ಗೆ ಪ್ರಶ್ನೆಗಳು ಉಳಿದಿವೆ.
ಪಂದ್ಯ ಆರಂಭ: ರಾತ್ರಿ 7.00
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.