ADVERTISEMENT

ಆಸ್ಟಿನ್ ಗೌರವಾರ್ಥ ಕಪ್ಪುಪಟ್ಟಿ ಧರಿಸಿ ಕಣಕ್ಕಿಳಿದ ಭಾರತ, ಆಸ್ಟ್ರೇಲಿಯಾ ಆಟಗಾರರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 31 ಅಕ್ಟೋಬರ್ 2025, 9:48 IST
Last Updated 31 ಅಕ್ಟೋಬರ್ 2025, 9:48 IST
<div class="paragraphs"><p>ಬೆನ್‌ ಆಸ್ಟಿನ್‌ ಅವರಿಗೆ ಸಂತಾಪ ಸೂಚಿಸುತ್ತಿರುವ ಭಾರತ ತಂಡದ ಆಟಗಾರರು ಮತ್ತು&nbsp;</p></div>

ಬೆನ್‌ ಆಸ್ಟಿನ್‌ ಅವರಿಗೆ ಸಂತಾಪ ಸೂಚಿಸುತ್ತಿರುವ ಭಾರತ ತಂಡದ ಆಟಗಾರರು ಮತ್ತು 

   

ಕೃಪೆ: @BCCI

ಮೆಲ್ಬರ್ನ್‌: ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಟಿ20 ಕ್ರಿಕೆಟ್‌ ಸರಣಿಯ ಎರಡನೇ ಪಂದ್ಯವು ಇಂದು ಮೆಲ್ಬರ್ನ್‌ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಉಭಯ ತಂಡಗಳ ಆಟಗಾರರು, ಗುರುವಾರ ಮೃತಪಟ್ಟ ಆಸ್ಟ್ರೇಲಿಯಾದ ಯುವ ಕ್ರಿಕೆಟಿಗ ಬೆನ್‌ ಆಸ್ಟಿನ್‌ ಅವರ ಗೌರವಾರ್ಥ, ತೋಳಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಕ್ರೀಡಾಂಗಣಕ್ಕೆ ಇಳಿದಿದ್ದಾರೆ.

ADVERTISEMENT

'ಅಭ್ಯಾಸದ ವೇಳೆ ಚೆಂಡು ಅಪ್ಪಳಿಸಿ ಮೃತಪಟ್ಟ ಮಹತ್ವಾಕಾಂಕ್ಷಿ ಕ್ರಿಕೆಟಿಗ ಬೆನ್‌ ಆಸ್ಟಿನ್‌ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಭಾರತ ಮತ್ತು ಆಸ್ಟ್ರೇಲಿಯಾ ಆಟಗಾರರು ತೋಳಿಗೆ ಕಪ್ಪು ಪಟ್ಟಿ ಕಟ್ಟಿಕೊಂಡಿದ್ದಾರೆ' ಎಂದು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) 'ಎಕ್ಸ್‌'ನಲ್ಲಿ ಪೋಸ್ಟ್‌ ಹಂಚಿಕೊಂಡಿದೆ.

ಫೆರ್ನ್‌ಟ್ರೀ ಗಲಿ ಕ್ಲಬ್‌ ಪರ ಆಡುತ್ತಿದ್ದ 17 ವರ್ಷದ ಬೆನ್‌ ಆಸ್ಟಿನ್‌ ಅವರು, ನೆಟ್ಸ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದ ವೇಳೆ ಮಂಗಳವಾರ ಗಾಯಗೊಂಡಿದ್ದರು. ವೇಗದ ಬೌಲರ್‌ಗಳ ಎಸೆತಗಳಿಗೆ ತಾಲೀಮು ನಡೆಸುತ್ತಿದ್ದ ಅವರಿಗೆ ಚೆಂಡು ಕುತ್ತಿಗೆಗೆ ಬಡಿದಿತ್ತು. ಅವರು ಹೆಲ್ಮೆಟ್‌ ಧರಿಸಿದ್ದರು. ಆದರೆ ಕುತ್ತಿಗೆಗೆ ರಕ್ಷಣೆ ನೀಡುವ ‘ಸ್ಟೆಮ್‌ ಗಾರ್ಡ್‌’ ಧರಿಸಿರಲಿಲ್ಲ ಎಂದು ವರದಿಯಾಗಿದೆ. ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆಸ್ಟಿನ್‌ ಮೃತಪಟ್ಟಿರುವುದನ್ನು ಫೆರ್ನ್‌ಟ್ರೀ ಗಲಿ ಕ್ಲಬ್‌ ಗುರುವಾರ ಖಚಿತಪಡಿಸಿತ್ತು. 'ಬೆನ್‌ ನಿಧನದಿಂದ ಆಘಾತಗೊಂಡಿದ್ದೇವೆ. ಅವರ ನಿಧನ ಇಡೀ ಕ್ರಿಕೆಟ್‌ ಸಮುದಾಯವನ್ನು ಶೋಕದಲ್ಲಿ ಮುಳುಗಿಸಿದೆ' ಎಂದು ಹೇಳಿಕೆ ಬಿಡುಗಡೆ ಮಾಡಿತ್ತು.

ಮಹಿಳೆಯರ ಏಕದಿನ ಕ್ರಿಕೆಟ್ ವಿಶ್ವಕಪ್‌ ಟೂರ್ನಿಯ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಸೆಣಸಾಟ ನಡೆಸಿದ್ದ ಭಾರತ ಮತ್ತು ಆಸ್ಟ್ರೇಲಿಯಾ ಆಟಗಾರರೂ, ಗುರುವಾರ ಕಪ್ಪು ಪಟ್ಟಿ ಕಟ್ಟಿಕೊಂಡು ಆಡಿದ್ದರು.

ಭಾರತಕ್ಕೆ ಆರಂಭಿಕ ಆಘಾತ
ಭಾರತ – ಆಸ್ಟ್ರೇಲಿಯಾ ಟಿ20 ಸರಣಿಯ ಮೊದಲ ಪಂದ್ಯವು ಮಳೆಯಿಂದಾಗಿ ರದ್ದಾಗಿತ್ತು. ಹೀಗಾಗಿ ಮುನ್ನಡೆ ಸಾಧಿಸಲು, ಈ ಪಂದ್ಯವನ್ನು ಗೆಲ್ಲುವ ಲೆಕ್ಕಾಚಾರದಲ್ಲಿ ಎರಡೂ ತಂಡಗಳೂ ಇವೆ.

ಟಾಸ್‌ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ, ಆರಂಭಿಕ ಆಘಾತಕ್ಕೆ ಒಳಗಾಗಿದೆ. ಇನಿಂಗ್ಸ್‌ ಶುರು ಮಾಡಿದ ಶುಭಮನ್‌ ಗಿಲ್‌ (5), ವಿಕೆಟ್‌ ಕೀಪರ್‌ ಸಂಜು ಸ್ಯಾಮ್ಸನ್‌ (2), ನಾಯಕ ಸೂರ್ಯಕುಮಾರ್‌ ಯಾದವ್‌ (1) ಮತ್ತು ತಿಲಕ್‌ ವರ್ಮಾ (0) ನಿರಾಸೆ ಮೂಡಿಸಿದ್ದಾರೆ.

ಸ್ಫೋಟಕ ಶೈಲಿಯ ಆರಂಭಿಕ ಅಭಿಷೇಕ್‌ ಶರ್ಮಾ ಅರ್ಧಶತಕ ಗಳಿಸಿದ್ದು, ಎಂದಿನಂತೆ ಬಿರುಸಿನ ಬ್ಯಾಟಿಂಗ್‌ ಮುಂದುವರಿಸಿದ್ದಾರೆ. 27 ಎಸೆತಗಳನ್ನು ಎದುರಿಸಿರುವ ಅವರು, 7 ಬೌಂಡರಿ ಮತ್ತು 1 ಸಿಕ್ಸರ್‌ ಸಹಿತ 52 ರನ್‌ ಬಾರಿಸಿದ್ದಾರೆ. ಅವರಿಗೆ ಆಲ್‌ರೌಂಡರ್‌ ಹರ್ಷಿತ್‌ ರಾಣಾ ಸಾಥ್‌ (35) ನೀಡುತ್ತಿದ್ದಾರೆ.

ಈ ಇಬ್ಬರು, 5ನೇ ವಿಕೆಟ್‌ ಪಾಲುದಾರಿಕೆಯಲ್ಲಿ 56 ರನ್‌ ಕೂಡಿಸಿದ್ದಾರೆ.

ಸದ್ಯ 15 ಓವರ್‌ಗಳು ಮುಕ್ತಾಯವಾಗಿದ್ದು, ತಂಡದ ಮೊತ್ತ 5 ವಿಕೆಟ್‌ಗೆ 105 ರನ್‌ ಆಗಿದೆ.

ಜೋಶ್‌ ಹ್ಯಾಜಲ್‌ವುಡ್‌ 13 ರನ್‌ ನೀಡಿ ಮೂರು ವಿಕೆಟ್ ಉರುಳಿಸಿದ್ದರೆ, ನೇಥನ್‌ ಎಲಿಸ್‌ ಒಂದು ವಿಕೆಟ್ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.